ದಕ್ಷಿಣ ಕನ್ನಡ: ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಶಾಸಕರೊಬ್ಬರು ಅಪರಿಚಿತ ಮಹಿಳೆಯೊಂದಿಗೆ ಇರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆಪಾದಿತ ಫೋಟೋಗಳು ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದ ಬಿಜೆಪಿ ಶಾಸಕ ಸಂಜೀವ್ ಮಠಂದೂರು ಅವರದ್ದು ಎನ್ನಲಾಗಿದೆ. ಶಾಸಕರಿಗೆ ಟಿಕೆಟ್ ನಿರಾಕರಿಸುವಂತೆ ಪಕ್ಷದ ಮೇಲೆ ಒತ್ತಡ ಹೇರಲು ಬಿಜೆಪಿಯಲ್ಲಿನವರದ್ದೇ ಕೈವಾಡವಿದೆ ಎಂದು ಮೂಲಗಳು ತಿಳಿಸಿವೆ.
ಅವರ ವಿರುದ್ಧ ತೀವ್ರ ಲಾಬಿ ನಡೆಯುತ್ತಿದೆ ಮತ್ತು ಕಾಂಗ್ರೆಸ್ ಕೂಡ ಈ ಸ್ಥಾನವನ್ನು ಸೆಣಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕ ಮಠಂದೂರು ಅವರು ಈ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಖಾಸಗಿ ವಿಡಿಯೋವೊಂದರ ಬಗ್ಗೆ ಶಾಸಕರ ಬಗ್ಗೆ ವದಂತಿ ಹಬ್ಬಿತ್ತು. ಮಠಂದೂರು ಉತ್ತಮ ಕೆಲಸ ಮಾಡಿದರೂ ಪಕ್ಷದೊಳಗೆ ಹಲವು ಶತ್ರುಗಳನ್ನು ಹುಟ್ಟು ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
ಪಕ್ಷದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಆಘಾತದಿಂದ ಬಿಜೆಪಿ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಈ ಇತ್ತೀಚಿನ ಬೆಳವಣಿಗೆ ನಡೆದಿದೆ.
ದೂರು ದಾಖಲು: ಅಪರಿಚಿತ ಮಹಿಳೆಯೊಂದಿಗಿರುವ ಖಾಸಗಿ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಸಂಜೀವ ಮಠಂದೂರು ಗುರುವಾರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನನ್ನು ಮೂಲೆಗುಂಪು ಮಾಡುವ ಪಿತೂರಿಯ ಭಾಗವಾಗಿ ಫೋಟೊಗಳನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಫೋಟೊಗಳನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.