ಲಖಿಂಪುರ ಖೇರಿ(ಉತ್ತರ ಪ್ರದೇಶ): ದಲಿತ ಸಮುದಾಯದ ಸಹೋದರಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಮಾಹಿತಿ ನೀಡಿದ್ದಾರೆ.
ಪ್ರಮುಖ ಆರೋಪಿ ಛೋಟು ಗೌತಮ್ ಇಬ್ಬರು ಸೋದರಿಯರ ಪೈಕಿ ಒಬ್ಬಾಕೆಯನ್ನು ಮದುವೆಯಾಗಲು ಬಯಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಆಕೆ ನಿರಾಕರಿಸಿದ ಮೇಲೆ ಸ್ನೇಹಿತರೊಂದಿಗೆ ಕೂಡಿ ಇಬ್ಬರೂ ಬಾಲಕಿಯರನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆಗೈದು ಮೃತದೇಹವನ್ನು ಮರಕ್ಕೆ ನೇತು ಹಾಕಿದ್ದಾರೆ ಎನ್ನಲಾಗಿದೆ.
ಕೃತ್ಯಕ್ಕೂ ಮೊದಲು ಹುಡುಗಿಯರನ್ನು ತನ್ನ ಸ್ನೇಹಿತರಿಗೆ ತೋರಿಸಿದ್ದಾಗಿ ಪ್ರಮುಖ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ ಮನೆಯಿಂದ ಮೋಟಾರ್ ಬೈಕ್ ನಲ್ಲಿ ಬಾಲಕಿಯರನ್ನು ಅಪಹರಿಸಿದ್ದ ಆರೋಪಿಗಳನ್ನು ಸಂತ್ರಸ್ತ ಕುಟುಂಬಸ್ಥರು ಗುರುತಿಸಿದ್ದಾರೆ.ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಐಪಿಸಿಯ ಕಠಿಣ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.