ಮನೆ ಪೌರಾಣಿಕ ದಂಭೋಧ್ಭವ

ದಂಭೋಧ್ಭವ

0

ದಂಭೋದ್ಭವನ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೯೪) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ಪರಶುರಾಮನು ದುರ್ಯೋಧನನಿಗೆ ನರ-ನಾರಾಯಣರ ಮಹಾತ್ಮೆಯನ್ನು ಸಾರುವ ಈ ಕಥೆಯನ್ನು ಹೇಳಿದನು.

Join Our Whatsapp Group

ಹಿಂದೆ ದಂಭೋದ್ಭವನೆಂಬ ಹೆಸರಿನ ಸಾರ್ವಭೌಮನಿದ್ದನು. ಅವನು ಅಖಿಲ ಪೃಥ್ವಿಯಲ್ಲಿಯ ಎಲ್ಲವನ್ನೂ ಭೋಗಿಸುತ್ತಿದ್ದನು. ಆ ಮಹಾರಥಿ ವೀರ್ಯವಂತನು ನಿತ್ಯವೂ ರಾತ್ರಿಕಳೆದು ಪ್ರಾತಃಕಾಲದಲ್ಲೆದ್ದು ಬ್ರಾಹ್ಮಣರನ್ನೂ ಕ್ಷತ್ರಿಯರನ್ನೂ ಕೇಳುತ್ತಿದ್ದನು: “ಶೂದ್ರನಾಗಲೀ, ವೈಶ್ಯನಾಗಲೀ, ಕ್ಷತ್ರಿಯನಾಗಲೀ ಅಥವಾ ಬ್ರಾಹ್ಮಣನಾಗಲೀ ಯುದ್ಧದಲ್ಲಿ ನನಗಿಂಥಲೂ ವಿಶೇಷನಾದ ಅಥವಾ ಸರಿಸಮನಾದ ಯಾರಾದರೂ ಇದ್ದಾರೆಯೇ?” ಹೀಗೆ ಹೇಳುತ್ತಾ ಆ ರಾಜನು ಈ ಭೂಮಿಯಿಡೀ ತಿರುಗುತ್ತಿದ್ದನು. ಮಹಾ ದರ್ಪದಿಂದ ಮತ್ತನಾದ ಅವನು ಬೇರೆ ಯಾರ ಕುರಿತೂ ಯೋಚಿಸುತ್ತಿರಲಿಲ್ಲ. ಆಗ ಏನಕ್ಕೂ ಹೆದರದಿದ್ದ, ಯಾರಕೃಪೆಯಡಿಯೂ ಇರದಿದ್ದ ವೇದವಿದ ಬ್ರಾಹ್ಮಣರು ಪುನಃ ಪುನಃ ಸೊಕ್ಕಿನಿಂದ ತನ್ನನ್ನೇ ಹೊಗಳಿಕೊಳ್ಳುತ್ತಿದ್ದ ರಾಜನನ್ನು ತಡೆಯಲು ಪ್ರಯತ್ನಿಸಿದರು. ನಿಯಂತ್ರಿಸಿಕೊಳ್ಳಲು ಹೇಳಿದರೂ, ಅಭಿಮಾನಿಯಾದ, ಶ್ರೀಯಿಂದ ಮದಿಸಿದ ಅವನು ದ್ವಿಜರನ್ನು ಮತ್ತೆ ಮತ್ತೆ ಕೇಳಲು ಬ್ರಾಹ್ಮಣರು ಹೇಳಿದರು. ಆ ತಪಸ್ವಿ, ಮಹಾತ್ಮ, ವೇದವ್ರತಸಮನ್ವಿತ ದ್ವಿಜಗಣವು ಕ್ರೋಧದೀಪ್ತರಾಗಿ ಹಂಬಲಿಸುತ್ತಿದ್ದ ರಾಜನಿಗೆ ಹೇಳಿತು: “ರಾಜನ್! ನೀನು ಎಂದೂ ಅನೇಕಜನ್ಮಗಳಲ್ಲಿ ಸಖರಾಗಿದ್ದು ಯುದ್ಧಮಾಡಿದ ಆ ಇಬ್ಬರು ಪುರುಷಸಿಂಹರಿಗೆ ಸಮನಾಗಲಾರೆ!”

ಇದನ್ನು ಕೇಳಿದ ರಾಜನು ಆ ದ್ವಿಜರಿಗೆ ಪುನಃ ಕೇಳಿದನು: “ಆ ವೀರರಿಬ್ಬರು ಎಲ್ಲಿದ್ದಾರೆ? ಅವರು ಎಲ್ಲಿ ಜನಿಸಿದ್ದಾರೆ? ಅವರು ಏನು ಮಾಡುತ್ತಿದ್ದಾರೆ? ಅವರು ಯಾರು?”

ಬ್ರಾಹ್ಮಣರು ಹೇಳಿದರು: “ಪಾರ್ಥಿವ! ನರ-ನಾರಾಯಣರೆಂಬ ತಾಪಸರು ಮನುಷ್ಯಲೋಕಕ್ಕೆ ಬಂದಿದ್ದಾರೆಂದು ಕೇಳಿದ್ದೇವೆ. ಅವರಿಬ್ಬರೊಂದಿಗೆ ಯುದ್ಧಮಾಡು! ಆ ಮಹಾತ್ಮ ನರ-ನಾರಯಣರು ಗಂಧಮಾದನದಲ್ಲಿ ವಿವರಿಸಲಸಾಧ್ಯ ಘೋರ ತಪಸ್ಸನ್ನು ತಪಿಸುತ್ತಿದ್ದಾರೆ ಎಂದು ಕೇಳಿದ್ದೇವೆ.”

ಆ ರಾಜನು ಅತಿದೊಡ್ಡ ಷಡಂಗ ಸೇನೆಯನ್ನು ಒಟ್ಟುಗೂಡಿಸಿಕೊಂಡು ಅವಸರದಲ್ಲಿ ಆ ಇಬ್ಬರು ಅಪರಾಜಿತರಿರುವಲ್ಲಿಗೆ ಪ್ರಯಾಣಿಸಿದನು. ಅವನು ಆ ವಿಷಮ, ಘೋರ ಗಂಧಮಾದನ ಪರ್ವತಕ್ಕೆ ಹೋಗಿ, ಆ ಅಪರಾಜಿತ ತಾಪಸರನ್ನು ಬೇಟೆಯಾಡುತ್ತಾ ಮುಂದುವರೆದನು. ಹಸಿವು-ಬಾಯಾರಿಕೆಗಳಿಂದ ಬಳಲಿ ಕೃಶರಾಗಿದ್ದ, ಮೂಳೆ-ನರಗಳು ಕಾಣಿಸಿಕೊಳ್ಳುತ್ತಿದ್ದ, ಛಳಿ-ಗಾಳಿ-ಬಿಸಿಲುಗಳಿಗೆ ಸಿಕ್ಕಿ ಒರಟಾಗಿದ್ದ ಆ ಪುರುಷೋತ್ತಮರಿಬ್ಬರನ್ನು ನೋಡಿ, ಬಳಿಸಾರಿ, ಕಾಲುಗಳನ್ನು ಹಿಡಿದು, ಕುಶಲವನ್ನು ಕೇಳಿದನು. ಅವರು ರಾಜನಿಗೆ ಗೆಡ್ಡೆ, ಹಣ್ಣು, ಆಸನ, ನೀರನ್ನಿತ್ತು ಸ್ವಾಗತಿಸಿ “ಯಾವ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದರು.

ದಂಭೋದ್ಭವನು ಹೇಳಿದನು: “ಈ ಬಾಹುಗಳೆರಡರಿಂದ ನಾನು ಭೂಮಿಯಲ್ಲಿರುವ ಸರ್ವ ಶತ್ರುಗಳನ್ನು ಗೆದ್ದಿದ್ದೇನೆ. ನಿಮ್ಮಿಬ್ಬರೊಡನೆ ಯುದ್ಧವನ್ನು ಅಪೇಕ್ಷಿಸಿ ಈ ಪರ್ವತಕ್ಕೆ ಬಂದಿದ್ದೇನೆ. ಬಹುಕಾಲದಿಂದ ಬಯಸುತ್ತಿರುವ ಇದನ್ನೇ ಆತಿಥ್ಯವಾಗಿ ನೀಡಬೇಕು.”

ನರ-ನಾರಾಯಣರು ಹೇಳಿದರು: “ರಾಜಸತ್ತಮ! ಕ್ರೋಧ-ಲೋಭಗಳು ಈ ಅಶ್ರಮದಲ್ಲಿ ಸರಿಯಲ್ಲ. ಈ ಆಶ್ರಮದಲ್ಲಿ ಎಲ್ಲಿಯ ಯುದ್ಧ? ಎಲ್ಲಿಯ ಶಸ್ತ್ರ? ಎಲ್ಲಿ ಸಿಟ್ಟು? ಬೇರೆ ಎಲ್ಲಿಯಾದರೂ ಹೋಗಿ ಯುದ್ಧವನ್ನು ಕೇಳು. ಭೂಮಿಯಲ್ಲಿ ಬಹಳಷ್ಟು ಕ್ಷತ್ರಿಯರಿದ್ದಾರೆ!”

ಅವರು ಹೇಳಿದರೂ ಅವನು ಒತ್ತಾಯಿಸಿದನು. ಅವನು ಪುನಃ ಪುನಃ ಕ್ಷಮೆಯನ್ನು ಕೇಳಿದರೂ, ಸಂತವಿಸಿದರೂ ಯುದ್ಧವನ್ನು ಬಯಸಿದ ದಂಭೋದ್ಭವನು ಆ ತಾಪಸರಿಬ್ಬರನ್ನೂ ಹೋರಾಟಕ್ಕೆ ಕರೆದನು. ಆಗ ನರನು ಒಂದು ಮುಷ್ಟಿ ಹುಲ್ಲನ್ನು ಹಿಡಿದು ಹೇಳಿದನು: “ಯುದ್ಧಕಾಮುಕ ಕ್ಷತ್ರಿಯ! ಇದೋ ಯುದ್ಧಮಾಡು! ಸರ್ವಶಸ್ತ್ರಗಳನ್ನೂ ಪ್ರಯೋಗಿಸು! ಸೇನೆಯನ್ನು ಒಂದುಗೂಡಿಸು! ಯುದ್ಧದಲ್ಲಿ ನಿನಗಿರುವ ಶ್ರದ್ಧೆಯನ್ನು ಶಾಶ್ವತವಾಗಿ ತೆಗೆದುಹಾಕುತ್ತೇನೆ!”

ದಂಭೋದ್ಭವನು ಹೇಳಿದನು: “ತಾಪಸ! ನಮಗೆ ಇದೇ ಸರಿಯಾದ ಅಸ್ತ್ರ ಎಂದು ತಿಳಿದರೆ ಅದನ್ನೇ ನೀನು ಬಳಸಿ ಯುದ್ಧಾರ್ಥಿಯಾಗಿ ಇಲ್ಲಿಗೆ ಬಂದಿರುವ ನಮ್ಮೊಂದಿಗೆ ಯುದ್ಧಮಾಡು!”

ಹೀಗೆ ಹೇಳಿ ದಂಭೋದ್ಭವನು ಸೈನಿಕರೊಡಗೂಡಿ ಆ ತಾಪಸನನ್ನು ಕೊಲ್ಲಲು ಬಯಸಿ ಎಲ್ಲ ಕಡೆಗಳಿಂದ ಬಾಣಗಳ ಮಳೆಸುರಿಸಿ ಆಕ್ರಮಣಿಸಿದನು. ಶತ್ರುಗಳ ಶರೀರವನ್ನು ಕತ್ತರಿಸಬಲ್ಲ ಆ ಘೋರ ಬಾಣಗಳನ್ನು ಆ ಮುನಿಯು ತನ್ನ ಹುಲ್ಲುಕಡ್ಡಿಗಳಿಂದ ತಡೆದು ನಿಷ್ಪ್ರಯೋಜಕಗಳನ್ನಾಗಿ ಮಾಡಿದನು. ಆಗ ಆ ಅಪರಾಜಿತನು ಎದುರಿಸಲಸಾಧ್ಯವಾದ ಆ ಘೋರ ಹುಲ್ಲುಗಳನ್ನು ಅವನ ಮೇಲೆ ಪ್ರಯೋಗಿಸಲು ಅದ್ಭುತವು ನಡೆಯಿತು. ಆ ಮುನಿಯು ಮಾಯೆಯಿಂದ ಆ ಹುಲ್ಲುಕಡ್ಡಿಗಳು ಅವರ ಕಣ್ಣು, ಕಿವಿ, ಮೂಗುಗಳನ್ನು ಹೊಡೆಯುವಂತೆ ಮಾಡಿದನು. ಆ ಹುಲ್ಲುಕಡ್ಡಿಗಳು ತುಂಬಿ ಬಿಳಿಯಾದ ಆಕಾಶವನ್ನು ನೋಡಿದ ರಾಜನು ನರನ ಪಾದಗಳ ಮೇಲೆ ಬಿದ್ದು “ನನ್ನನ್ನು ಆಶೀರ್ವದಿಸಿ!” ಎಂದು ಕೇಳಿದನು. ಶರಣರಿಗೆ ಶರಣ್ಯನಾದ ನರನು ರಾಜನಿಗೆ ಹೇಳಿದನು: “ಬ್ರಹ್ಮಣ್ಯ ಮತ್ತು ಧರ್ಮಾತ್ಮನಾಗಿರು! ಹೀಗೆ ಪುನಃ ಮಾಡಬೇಡ! ರಾಜನ್! ದರ್ಪಸಮಾವಿಷ್ಟನಾಗಿ ಇನ್ನು ಎಂದೂ, ಬೇರೆ ಯಾರನ್ನೂ – ನಿನಗಿಂಥ ಅಲ್ಪರಾಗಿರಲಿ ಅಥವಾ ವಿಶಿಷ್ಟರಾಗಿರಲಿ – ಕಾಡಿಸಬೇಡ! ಅದೇ ನಿನಗೆ ಪರಮ ಹಿತವಾಗಿರುವುದು. ಕೃತಪ್ರಜ್ಞನೂ, ಲೋಭವನ್ನು ತೊರೆದು, ನಿರಂಕಾರನಾಗಿ, ಆತ್ಮವಂತನಾಗಿ, ದಾಂತ, ಕ್ಷಾಂತ, ಮೃದುವಾಗಿದ್ದುಕೊಂಡು, ಪ್ರಜೆಗಳ ಕ್ಷೇಮವನ್ನು ಪಾಲಿಸು! ಅಪ್ಪಣೆ ಕೊಟ್ಟಿದ್ದೇನೆ. ಹೋಗು! ಮಂಗಳವಾಗಲಿ! ಇನ್ನು ಸರಿಯಾಗಿ ನಡೆದುಕೋ. ಬ್ರಾಹ್ಮಣರ ಕುಶಲವನ್ನು ಕೇಳು. ಕ್ರೂರ ಮಾತಿನಿಂದ ಅವರನ್ನು ಅಪಮಾನಿಸಬೇಡ!”

ಆಗ ರಾಜನು ಆ ಮಹಾತ್ಮರ ಪಾದಗಳಿಗೆ ವಂದಿಸಿ, ತನ್ನ ಪುರಕ್ಕೆ ತೆರಳಿ, ತುಂಬಾ ಧರ್ಮವನ್ನು ಸಂಗ್ರಹಿಸಿದನು.

ಹಿಂದಿನ ಲೇಖನಅಕ್ಕಿ ಬದಲಿಗೆ ನೀಡುವ ಹಣ ಆಹಾರ ಪದಾರ್ಥಗಳ ಖರೀದಿಗೆ ಮಾತ್ರ ಬಳಸಿ:  ಸಿಎಂ ಸಿದ್ಧರಾಮಯ್ಯ
ಮುಂದಿನ ಲೇಖನಕಾವೇರಿ ನದಿಗೆ ಹಾರಿ ದೇವನೂರು ಮಠದ ಕಿರಿಯ ಸ್ವಾಮೀಜಿ ಆತ್ಮಹತ್ಯೆ