ರಾಜಕೀಯದ ಚದುರಂಗದಾಟವನ್ನು ದೂರದಿಂದ ನೋಡುವುದೇ ಒಂದು ಮಜ. ಅಭ್ಯರ್ಥಿಯನ್ನುಸೋಲಿಸಲು, ಗೆಲ್ಲಿಸಲು ನಡೆಯುವ “ಗೇಮ್’ಗಳು, ಸ್ಕೆಚ್ ಗಳು ಚಿತ್ರ-ವಿಚಿತ್ರವಾಗಿರುತ್ತವೆ. ಅದರಲ್ಲೂಹಳ್ಳಿ ರಾಜಕೀಯದ “ರಂಗು’ ಇನ್ನೂ ಜೋರು. ಇಂತಹ ಹಳ್ಳಿ ರಾಜಕೀಯದ ಆಟವನ್ನು ತೆರೆಮೇಲೆ ತಂದಿರುವ ಸಿನಿಮಾ “ದರ್ಬಾರ್’. ಇದು ನಿರ್ದೇಶಕ ವಿ.ಮನೋಹರ್ ಅವರ ಕನಸು ಕೂಡಾ.
ಸುಮಾರು 23 ವರ್ಷಗಳ ನಂತರ ಮನೋಹರ್ ನಿರ್ದೇಶಿಸಿರುವ ಸಿನಿಮಾ “ದರ್ಬಾರ್’. ಒಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾವನ್ನು ಹಳ್ಳಿ ಹಿನ್ನೆಲೆಯಲ್ಲಿ ಕಟ್ಟಿಕೊಡಬೇಕೆಂಬುದು ಮನೋಹರ್ ಅವರ ಕನಸು. ಅದನ್ನು ತೆರೆಮೇಲೆ ಅಚ್ಚುಕಟ್ಟಾಗಿ ತರುವಲ್ಲಿ ಮನೋಹರ್ ಯಶಸ್ವಿಯಾಗಿದ್ದಾರೆ.
ಜಬರ್ದಸ್ತ್ ನಾಯಕ, ಆತನದ್ದೇ ಆದ ಸ್ಟೈಲ್, ಜೊತೆಗೊಂದು ಲವ್.. ಆದರೆ, ಹೃದಯವಂತ… ಈ ನಡುವೆಯೇ ನಾಯಕನ ಅಹಂಕಾರ ಇಳಿಸಬೇಕೆಂಬುದು ಸ್ಕೆಚ್ ಹಾಕಿ ಚುನಾವಣೆಗೆ ನಿಲ್ಲಿಸುವ “ಜೊತೆಗಾರರು’ ಹಾಗೂ ಆತನ ವಿರುದ್ಧ ಅವರ ಸ್ಕೆಚ್.. ಇಂತಹ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಆರಂಭದಲ್ಲಿ ಎಲ್ಲಾ ಸಿನಿಮಾಗಳಂತೆ ನಾಯಕನ ಇಂಟ್ರೋಡಕ್ಷನ್, ಆತನ ಗುಣಗಾನ, ಲವ್… ಹೀಗೆ ಸಾಗುವ ಸಿನಿಮಾ ನಿಜವಾಗಿಯೂ ಟೇಕಾಫ್ ಆಗೋದು ಚುನಾವಣಾ ಪ್ರಕ್ರಿಯೆ ಅಖಾಡಕ್ಕಿಳಿದ ಮೇಲೆ. ಇಲ್ಲಿನ ತರಹೇವಾರಿ ಪ್ರಚಾರ, ಗಿಮಿಕ್… ಎಲ್ಲವೂ ಪ್ರೇಕ್ಷಕರಿಗೆ ಖುಷಿ ಕೊಡುತ್ತವೆ. ಜೊತೆಗೆ ನಗುವಿನೊಂದಿಗೆ ಪ್ರೇಕ್ಷಕ ಸಿನಿಮಾ ಎಂಜಾಯ್ ಮಾಡುವಂತಹ ಹಲವು ಸನ್ನಿವೇಶಗಳು ಸಿನಿಮಾದಲ್ಲಿವೆ. ಆ ಮಟ್ಟಿಗೆ ವಿ.ಮನೋಹರ್ ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ.
ಅಂದಹಾಗೆ, ನಾಯಕರಾಗಿ ನಟಿಸಿರುವ ಸತೀಶ್ ಅವರೇ ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಇವತ್ತಿನ ರಾಜಕೀಯ ಸನ್ನಿವೇಶಗಳಿಗೆ ಹಿಡಿದ ಕೈಗನ್ನಡಿಯಂತಿದೆ. ಇಡೀ ಸಿನಿಮಾ ಹಳ್ಳಿಯಲ್ಲೇ ನಡೆದಿದ್ದು, ಒಂದಷ್ಟು ವಿಚಿತ್ರ, ವಿಭಿನ್ನ ಮ್ಯಾನರಿಸಂನ ಪಾತ್ರಗಳು ನಗುತರಿಸುತ್ತವೆ.
ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಸತೀಶ್ ಅವರು ಆ್ಯಕ್ಷನ್ ಇಮೇಜ್ ಇರುವ ಹೀರೋ ಆಗಿ ಮಿಂಚಿದ್ದಾರೆ. ಸೆಂಟಿಮೆಂಟ್‌ಗಿಂತ ಖಡಕ್ ಲುಕ್‌ನಲ್ಲೇ ಗಮನ ಸೆಳೆದಿರುವ ಸತೀಶ್ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲೂ ಮೆಚ್ಚುಗೆ ಗಳಿಸುತ್ತಾರೆ. ನಾಯಕಿ ಜಾಹ್ನವಿಗೆ ಇಲ್ಲಿನ ಹೆಚ್ಚಿನ ಅವಕಾಶವಿಲ್ಲ.
ಆದರೆ, ಹುಲಿ ಕಾರ್ತಿಕ್ ತಾನೊಬ್ಬ ಪ್ರತಿಭಾವಂತ ಕಲಾವಿದ ಎನ್ನುವುದನ್ನು ಹಿರಿತೆರೆ ಮೇಲೂ ಸಾಬೀತು ಮಾಡಿದ್ದಾರೆ. “ನಾಗ’ ಎಂಬ ಪಾತ್ರದ ವಿವಿಧ ಶೇಡ್‌ಗಳಲ್ಲಿ ಕಾರ್ತಿಕ್ ಗಮನ ಸೆಳೆಯುತ್ತಾರೆ. ಒಂದು ಹಳ್ಳಿ ಕಾಮಿಡಿಯನ್ನು ಕಣ್ತುಂಬಿಕೊಳ್ಳುವ ಆಸೆ ಇರುವವರಿಗೆ “ದರ್ಬಾರ್’ ಒಳ್ಳೆಯ ಆಯ್ಕೆಯಾಗಬಹುದು.