ಮನೆ ರಾಜಕೀಯ ರಾಜಕೀಯ ವ್ಯವಸ್ಥೆ ಸುಧಾರಣೆಗೆ ಮಠಾಧೀಶರು ಅಗತ್ಯ: ಸಚಿವ ಸಿ. ಸಿ. ಪಾಟೀಲ

ರಾಜಕೀಯ ವ್ಯವಸ್ಥೆ ಸುಧಾರಣೆಗೆ ಮಠಾಧೀಶರು ಅಗತ್ಯ: ಸಚಿವ ಸಿ. ಸಿ. ಪಾಟೀಲ

0

ಗದಗ(Gadag): ರಾಜಕೀಯ ವ್ಯವಸ್ಥೆ ಸುಧಾರಣೆಗೆ ಮಠಾಧೀಶರ ಅಗತ್ಯವಿದೆ. ರಾಜಕಾರಣಿಗಳು ತಪ್ಪು ಮಾಡಿದಾಗ ಕಿವಿ ಹಿಡಿದು ಬುದ್ಧಿ ಹೇಳುವ ಅಧಿಕಾರ ಅವರಿಗಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ಹೇಳಿದರು.

ಇಲ್ಲಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಗುರುವಾರ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ 4ನೇ ಪುಣ್ಯ ಸ್ಮರಣೆ, ಮರಣವೇ ಮಹಾನವಮಿ ಹಾಗೂ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ, ಸನ್ಮಾನ ಹಾಗೂ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜಕಾರಣಿಗಳನ್ನು ತಿದ್ದಿ ಬುದ್ದಿ ಹೇಳುವ ಅಧಿಕಾರ ಮಠಾಧೀಶರಿಗಿರುವ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಕಳೆದ ಒಂದು ವರ್ಷದಲ್ಲಿ 400 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಮಠ – ಮಂದಿರಗಳಿಗೆ ನೀಡಿದೆ ಎಂದರು.

ಜ. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂಚಣಿ ಅಲ್ಲಮ ಪ್ರಭು ಸ್ವಾಮೀಜಿ, ಬೀದರ ಬಸವ ಸೇವಾ ಪ್ರತಿಷ್ಠಾನದ ಶರಣೆ ಅಕ್ಕ ಅನ್ನಪೂರ್ಣಾತಾಯಿ, ಮುಂಡರಗಿ ಶಾಖಾ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ, ಭೈರನಹಟ್ಟಿ ದೊರೆಸ್ವಾಮಿ, ವಿರಕ್ತಮಠದ ಸಾಂತಲಿಂಗ ಸ್ವಾಮೀಜಿ, ಆಳಂದದ ಕೋರಣೇಶ್ವರ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ, ಅರಸಿಕೆರೆಯ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಬಸವ ಕಲ್ಯಾಣದ ಶಿವಾನಂದ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಮಾಜಿ ಸಚಿವ ಎಸ್. ಎಸ್. ಪಾಟೀಲ, ಲಿಂಗಾಯತ ಪ್ರಗತಿ ಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಜಾತ್ರಾ ಮಹೋತ್ಸವ ಅಧ್ಯಕ್ಷ ಅಮರೇಶ ಅಂಗಡಿ ಉಪಸ್ಥಿತರಿದ್ದರು. ತೋಂಟದಾರ್ಯ ವಿದ್ಯಾ ಪೀಠದ ಕಾರ್ಯದರ್ಶಿ ಎಸ್. ಎಸ್. ಪಟ್ಟಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

ಭಾಲ್ಕಿ ಶ್ರೀಗಳಿಗೆ ರಾಷ್ಟ್ರೀಯ ಪ್ರಶಸ್ತಿ

ಲಿಂ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಷ್ಟ್ರೀಯ ಪ್ರಶಸ್ತಿಯನ್ನು ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರಿಗೆ ಸಚಿವ ಸಿ. ಸಿ. ಪಾಟೀಲ ಪ್ರದಾನ ಮಾಡಿದರು. ಪ್ರಶಸ್ತಿ 5 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಹಿಂದಿನ ಲೇಖನಏಷ್ಯಾ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಭಾರತಕ್ಕೆ ಗೆಲುವು
ಮುಂದಿನ ಲೇಖನನಕ್ಕು ನಲಿಯಿರಿ