ಮನೆ ಮನರಂಜನೆ ʼಹಲಗಲಿʼ ಚಿತ್ರದಲ್ಲಿ ನಟ ಡಾರ್ಲಿಂಗ್‌ ಕೃಷ್ಣ

ʼಹಲಗಲಿʼ ಚಿತ್ರದಲ್ಲಿ ನಟ ಡಾರ್ಲಿಂಗ್‌ ಕೃಷ್ಣ

0

ಲವರ್‌ ಬಾಯ್‌ ಆಗಿ ಅಭಿಮಾನಿಗಳ ರಂಜಿಸುತ್ತಿರುವ ನಟ ಡಾರ್ಲಿಂಗ್‌ ಕೃಷ್ಣ ಈಗ ದೊಡ್ಡದೊಂದು ಪ್ರಾಜೆಕ್ಟ್ ಗೆ ಅಣಿಯಾಗಿದ್ದಾರೆ. ಅದು ಐತಿಹಾಸಿಕ ಸಿನಿಮಾ.

ಕೃಷ್ಣ ಐತಿಹಾಸಿಕ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಅವರ ಹೊಸ ಚಿತ್ರದ ಹೆಸರು “ಹಲಗಲಿ’. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ಕೇಳಿರಬಹುದು. ಈಗ ಆ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್‌ ಡಿ. ಕೆ.

ಅದ್ಧೂರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಬಳ್ಳಾರಿಯ ಕಲ್ಯಾಣ್‌ ಚಕ್ರವರ್ತಿ ಧೂಳಿಪಾಳ್ಯ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲುಗಿನಲ್ಲಿ ಒಂದು ಚಿತ್ರವನ್ನು ನಿರ್ಮಿಸಿದ್ದು, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ. ಈ ಹಿಂದೆ ಸಂಚಾರಿ ವಿಜಯ್‌ ನಟನೆಯ ಕೃಷ್ಣ ತುಳಸಿ ನಿರ್ದೇಶಿಸಿರುವ ಸುಕೇಶ್‌ ಡಿ.ಕೆ ಅವರ ಜೊತೆಗಿನ ಚಿತ್ರವಿದು.

ಈ ಚಿತ್ರಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ದೇಹ ದಂಡಿಸುತ್ತ, ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುವ ಡಾರ್ಲಿಂಗ್‌ ಕೃಷ್ಣ, ಈ ಚಿತ್ರದ ಭರ್ಜರಿ ತಯಾರಿಯಲ್ಲಿದ್ದಾರೆ. ಇತಿಹಾಸದ ನೆರಳಿನಲ್ಲಿ ಮೂಡಿ ಬರುತ್ತಿರುವ ಈ ಐತಿಹಾಸಿಕ ಚಿತ್ರಕ್ಕೆ ಇತ್ತೀಚೆಗಷ್ಟೆ ಮುಹೂರ್ತ ಆಗಿದೆ. ಮೈಸೂರಿನ ಲಲಿತ್‌ ಮಹಲ್‌ ನಲ್ಲಿ ಚಿತ್ರಕ್ಕೆ ಮುಹೂರ್ತ ನಡೆದಿದೆ. ಜತೆಗೆ ಚಿತ್ರೀಕರಣಕ್ಕೆ ಚಾಲನೆಯೂ ನೀಡಲಾಗಿದೆ.

ಮೊದಲ ದಿನದ ಶೂಟಿಂಗ್‌ ನಲ್ಲಿ 200ಕ್ಕೂ ಹೆಚ್ಚು ಅಮೆರಿಕಾ ಹಾಗೂ ರಷ್ಯನ್‌ ಕಲಾವಿದರು ಹಾಗೂ ಸ್ಥಳೀಯ ಕಲಾವಿದರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ದೃಶ್ಯಗಳನ್ನು ನಿರ್ದೇಶಕ ಸುಕೇಶ್‌ ನಾಯಕ ಹಾಗೂ ನೃತ್ಯ ನಿರ್ದೇಶಕ ಧನು ಅವರ ಸಾರಥ್ಯದಲ್ಲಿ ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ಹಲಗಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ 80 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೆ ತೆರೆಕಂಡು ಸೂರ್ಪ ಹಿಟ್‌ ಆದ ಹನುಮಾನ್‌, ಕಲ್ಕಿ, ನಾ ಸಾಮಿರಂಗ, ಮಂಗಳವಾರಂ ಮುಂತಾದ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ದಶರಥಿ ಶಿವೇಂದ್ರ ಹಾಗೂ ಅತ್ಯುತ್ತಮ ಸಾಯಿ ಶ್ರೀರಾಮ್‌ ಅವರು ಹಲಗಲಿ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ.

ಚಿತ್ರದಲ್ಲಿ ಹೆಸರಾಂತ ಬಹು ಭಾಷೆಯ ಕಲಾವಿದರು ಕಾಣಿಸಿ ಕೊಳ್ಳುತ್ತಿದ್ದಾರೆ. ಇನ್ನೂ ಕನ್ನಡದ ವಾಸುಕಿ ವೈಭವ್‌ ಸಂಗೀತ ಇದೆ. ವಿಕ್ರಮ್‌ ಮೋರ್‌ ಅವರ ಸಾಹಸ “ಹಲಗಲಿ’ ಚಿತ್ರಕ್ಕಿದೆ. ಚಿತ್ರಕ್ಕಾಗಿ ನಾಲ್ಕೈದು ಬೃಹತ್‌ ಹಳ್ಳಿಯ ಸೆಟ್‌ ಗಳನ್ನು ಹಾಕುತ್ತಿದ್ದು, ತಿಪಟೂರಿನಲ್ಲಿ ಹಲಗಲಿ ಊರಿನ ಸೆಟ್‌ ಅನ್ನೇ ವಿಶೇಷವಾಗಿ ನಿರ್ಮಿಸಲಾಗುತ್ತಿದೆ.