ಬೆಂಗಳೂರು: ನಟ ದರ್ಶನ್‌ಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ಮಧ್ಯಂತರ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಕನ್ನಡದಲ್ಲಿರುವ ಪ್ರಕರಣದ ಚಾರ್ಜ್‌ಶೀಟ್‌ನ ಪ್ರಮುಖ ಅಂಶಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಗೊಳಿಸಲಾಗುತ್ತಿದೆ. ಮಂಗಳವಾರ ಹೈಕೋರ್ಟ್‌ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ ಇತ್ಯರ್ಥವಾಗುವ ಸಾಧ್ಯತೆಗಳಿದ್ದು, ಇದಾದ ನಂತರ ದರ್ಶನ್‌ಗೆ ದೊರೆತಿರುವ ಮಧ್ಯಂತರ ಜಾಮೀನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ದರ್ಶನ್ ಅವರು ತುರ್ತು ಸರ್ಜರಿ ಅಗತ್ಯ ಎಂದು ಮಧ್ಯಂತರ ಜಾಮೀನು ಕೇಳಿದ್ದರು.
ದರ್ಶನ್ ಮನವಿ ಪರಿಗಣಿಸಿ 6 ವಾರಗಳ ಕಾಲ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ವೈದ್ಯಕೀಯ ಚಿಕಿತ್ಸೆ ಆಧಾರದ ಮೇಲೆ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿದೆ. 19 ದಿನಗಳಾ ದರೂ ದರ್ಶನ್‌ಗೆ ಸರ್ಜರಿ ಆಗಿಲ್ಲ. ಸದ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಫಿಜಿಯೋಥೆರಪಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.