ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುತ್ತಿಲ್ಲ. ಇತ್ತೀಚೆಗಷ್ಟೇ ದರ್ಶನ್ ಅವರು ಬೇಲ್ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿದೆ.
ಸದ್ಯ ಅವರು ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 25ಕ್ಕೆ ಮುಂದೂಡಿಕೆ ಆಗಿದೆ.
ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಕಾಲಾವಕಾಶ ಕೋರಿದ್ದಾರೆ. ಅದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ. ವಿಚಾರಣೆಯನ್ನು ಮುಂದೂಡಿ 57ನೇ ಸಿಸಿಹೆಚ್ ನ್ಯಾಯಾಲಯದ ಜಡ್ಜ್ ಜೈಶಂಕರ್ ಆದೇಶ ನೀಡಿದ್ದಾರೆ. ಯಾವಾಗ ಜಾಮೀನು ಸಿಗತ್ತೋ ಎಂಬ ಚಿಂತೆಯಲ್ಲೇ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನಿತರ ಆರೋಪಿಗಳು ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ರೇಣುಕಾ ಸ್ವಾಮಿ ಕೊಲೆ ಕೇಸ್ನ ತನಿಖೆ ಅಂತ್ಯವಾಗಿದ್ದು, ಚಾರ್ಜ್ಶೀಟ್ ಕೂಡ ಸಲ್ಲಿಕೆ ಆಗಿದೆ. ಈ ಚಾರ್ಜ್ಶೀಟ್ನಲ್ಲಿ ಶಾಕಿಂಗ್ ಅಂಶಗಳು ಬಹಿರಂಗ ಆಗಿವೆ. ರೇಣುಕಾ ಸ್ವಾಮಿಯ ಕೊಲೆ ನಡೆದಿದ್ದು ಹೇಗೆ, ಯಾರೆಲ್ಲ ಭಾಗಿಯಾಗಿದ್ದರು ಎಂಬಿತ್ಯಾದಿ ವಿವರಗಳು ಚಾರ್ಜ್ಶೀಟ್ನಲ್ಲಿ ಇವೆ. ಚಾರ್ಜ್ಶೀಟ್ ಸಲ್ಲಿಕೆ ಬಳಿಕ ದರ್ಶನ್ ಹಾಗೂ ಇತರ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ದರ್ಶನ್ ಅವರು ರಾಜಾತಿಥ್ಯ ಪಡೆದಿದ್ದರು. ಜೈಲಿನ ನಿಯಮಗಳನ್ನ ಉಲ್ಲಂಘನೆ ಮಾಡಿದ್ದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೋ ಮತ್ತು ವಿಡಿಯೋಗಳು ಬಹಿರಂಗ ಆಗಿದ್ದವು. ಅವರು ಪ್ರಭಾವಿ ವ್ಯಕ್ತಿ ಆಗಿದ್ದರಿಂದ ಜೈಲಿನೊಳಗೆ ಇದ್ದಾಗಲೇ ಈ ಅಕ್ರಮಗಳನ್ನು ಎಸಗಿದರು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಒಂದು ವೇಳೆ ಜಾಮೀನು ಸಿಕ್ಕರೆ ಅವರು ತಮ್ಮ ಪ್ರಭಾವ ಬಳಸಿ ಸಾಕ್ಷಿನಾಶಕ್ಕೆ ಪ್ರಯತ್ನಿಸಬಹುದು. ಈ ಹಿನ್ನೆಲೆಯಲ್ಲಿ ಅವರ ಜಾಮೀನು ಅರ್ಜಿ ವಜಾಗೊಂಡರೂ ಅಚ್ಚರಿ ಇಲ್ಲ.
ಎ16 ಕೇಶವಮೂರ್ತಿಗೆ ಜಾಮೀನು:
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ16 ಆಗಿರುವ ಕೇಶವಮೂರ್ತಿಗೆ ಜಾಮೀನು ಮಂಜೂರು ಮಾಡಲಾಗಿದೆ. ಹೈಕೋರ್ಟ್ನಿಂದ ಕೇಶವಮೂರ್ತಿಗೆ ಜಾಮೀನು ನೀಡಲಾಗಿದೆ. ತುಮಕೂರು ಜೈಲಿನಲ್ಲಿರುವ 16ನೇ ಆರೋಪಿ ಕೇಶವಮೂರ್ತಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಇನ್ನುಳಿದ ಆರೋಪಿಗಳು ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ.