ಮನೆ ಸುದ್ದಿ ಜಾಲ ದಸರಾ ಆನೆ ಗೋಪಾಲಸ್ವಾಮಿ ಇನ್ನಿಲ್ಲ

ದಸರಾ ಆನೆ ಗೋಪಾಲಸ್ವಾಮಿ ಇನ್ನಿಲ್ಲ

0

ಮೈಸೂರು(Mysuru): ಎರಡು ತಿಂಗಳ ಹಿಂದಷ್ಟೇ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ದಸರಾ ಆನೆ ಗೋಪಾಲಸ್ವಾಮಿ ಕಾಡಾನೆಯೊಂದಿಗೆ ಕಾದಾಟಕ್ಕಿಳಿದು ದಾರುಣವಾಗಿ ಸಾವನ್ನಪ್ಪಿದೆ.

ಹುಣಸೂರು ತಾಲ್ಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲ ಸ್ವಾಮಿಯನ್ನು ಕಾಡಿಗೆ ಬಿಡಲಾಗಿತ್ತು. ತಾಲ್ಲೂಕಿನ ಹನಗೋಡು ಸಮೀಪದ ಕೊಳವಿಗೆ ಎಂಬಲ್ಲಿ ಇತ್ತೀಚೆಗಷ್ಟೇ ಸೆರೆ ಹಿಡಿಯಲಾಗಿದ್ದ ಅಯ್ಯಪ್ಪ ಎಂಬ ಆನೆಯ ಜತೆ ಮಂಗಳವಾರ ಕಾದಾಟಕ್ಕಿಳಿದು ಪ್ರಾಣ ಕಳೆದುಕೊಂಡಿದೆ.

ಕಾದಾಟದ ವೇಳೆ ಗೋಪಾಲಸ್ವಾಮಿ ಆನೆ ಮಸ್ತಿಯಲ್ಲಿತ್ತು ಎನ್ನಲಾಗಿದೆ. ಗಾಯಗೊಂಡಿದ್ದ ಆನೆಯನ್ನು ಉಳಿಸಲು ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ..

ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಎಸಿಎಫ್ ದಯಾನಂದ್ ಸೇರಿದಂತೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು. ಇಂದು ಸಂಜೆ ಕೊಳುವಿಗೆ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.

41 ವರ್ಷಗಳ ಗೋಪಾಲ ಸ್ವಾಮಿ ಆನೆ 2012 ರಿಂದ ಮೈಸೂರು ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಆನೆಯನ್ನು 2009 ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾರೆಕೊಪ್ಪಿ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು.

ಕಾಡಾನೆ ಮತ್ತು ಹುಲಿಯನ್ನು ಸೆರೆಹಿಡಿಯುವ ನೂರಾರು ಕಾರ್ಯಾಚರಣೆಗಳಲ್ಲಿ ಗೋಪಾಲಸ್ವಾಮಿ ಭಾಗಿಯಾಗಿತ್ತು. ಮಂಜು ಜೆ ಡಿ ಈ ಆನೆಯ ಮಾವುತನಾಗಿ ಕೆಲಸ ಮಾಡುತ್ತಿದ್ದರು. ಸೃಜನ್ ತರಬೇತುದಾರರಾಗಿದ್ದರು.

ಎತ್ತರದ ಆನೆ !

ದಸರಾದಲ್ಲಿ ತನಗೆ ವಹಿಸಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ಗೋಪಾಲಸ್ವಾಮಿ,ದಸರಾ ಗಜಪಡೆಯಲ್ಲೇ ಅತಿ ಎತ್ತರದ ಆನೆ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.. 5 ಸಾವಿರಕ್ಕೂ ಹೆಚ್ಚು ತೂಕ ಹೊಂದಿದ್ದ 40 ವರ್ಷದ ಗೋಪಾಲಸ್ವಾಮಿ ಇನ್ನೂ 20 ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಅವಕಾಶವಿತ್ತು.ಅಂಬಾರಿ ಆನೆ ಅಭಿಮನ್ಯುವಿಗೆ ಪರ್ಯಾಯ ಆನೆಯನ್ನಾಗಿ ಗೋಪಾಲಸ್ವಾಮಿಯನ್ನು ಗುರ್ತಿಸಿದ್ದ ಅರಣ್ಯ ಇಲಾಖೆ ಮುಂದಿನ ದಿನಗಳಲ್ಲಿ ಮತ್ತಷ್ಟು ಟ್ರೈನಿಂಗ್ ಕೊಡುವ ಯೋಜನೆಯಲ್ಲಿತ್ತು.

ಅಂಬಾರಿ ಹೊರುವ ಭರವಸೆ ಹುಸಿ

ಅತ್ಯಂತ ಆಕರ್ಷಕ ಮೈಕಟ್ಟನ್ನು ಹೊಂದಿದ್ದ ಗೋಪಾಲಸ್ವಾಮಿ ಮುಂಬರುವ ವರ್ಷಗಳಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲು ಅಣಿಯಾಗುತ್ತಿದ್ದ. ಈ ಬಾರಿಯ ದಸರಾ ಮಹೋತ್ಸವದಲ್ಲೂ ಮರದ ಅಂಬಾರಿಯನ್ನು ಹೊರುವ ತಾಲೀಮಿನಲ್ಲೂ ಭಾಗಿಯಾಗಿ ಸೈ ಎನಿಸಿಕೊಂಡಿದ್ದ ಗೋಪಾಲಸ್ವಾಮಿ ಹಲವರ ಫೇವರೇಟ್ ಆನೆಯಾಗಿತ್ತು. ಗೋಪಾಲಸ್ವಾಮಿಯ ಹಠಾತ್ ನಿಧನದಿಂದ ಅರಣ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅನುಭವಿ ಆನೆಗಳ ಕೊರತೆ ಎದುರಿಸುತ್ತಿರುವ ಅರಣ್ಯ ಇಲಾಖೆಗೆ ಭಾರೀ ಹೊಡೆತ ಬಿದ್ದಿದೆ. ಎಲ್ಲರ ಆಕರ್ಷಣೆಯ ಧೃಡಕಾಯದ ಗೋಪಾಲಸ್ವಾಮಿಯ ಸಾವು ಮಾವುತ, ಕವಾಡಿಗಳು ಹಾಗೂ ಅರಣ್ಯ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

ಹಿಂದಿನ ಲೇಖನಮೈಸೂರು ಉಗ್ರರ ಪಾಲಿಗೆ ಸ್ಲೀಪಿಂಗ್ ಸೆಲ್ ಆಗುತ್ತಿದೆ: ಪ್ರಮೋದ್ ಮುತಾಲಿಕ್
ಮುಂದಿನ ಲೇಖನಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾಗೆ ಜೀವಮಾನ ಸಾಧನೆ ಪ್ರಶಸ್ತಿ