ಮನೆ ಸಾಹಿತ್ಯ ದಸರಾ ಕವಿಗೋಷ್ಟಿ: ಡಾ.ಚಂದ್ರಶೇಖರ ಕಂಬಾರರಿಂದ ಉದ್ಘಾಟನೆ

ದಸರಾ ಕವಿಗೋಷ್ಟಿ: ಡಾ.ಚಂದ್ರಶೇಖರ ಕಂಬಾರರಿಂದ ಉದ್ಘಾಟನೆ

0

ಮೈಸೂರು(Mysuru): ನಾಡ ಹಬ್ಬ ದಸರೆಯಲ್ಲಿ ಕಾವ್ಯಾಸಕ್ತರು ಕಾತುರದಿಂದ ಕಾಯುವ ಕಾರ್ಯಕ್ರಮಗಳಲ್ಲಿ ಒಂದಾದ ಪ್ರಧಾನ ಕವಿಗೋಷ್ಟಿಯನ್ನು , ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ದಸರಾ ಕವಿಗೋಷ್ಠಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಅ.3ರಂದು ನಡೆಯಲಿರುವ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಕವಿ ಡಾ.ಎಚ್‌.ಎಸ್.ಶಿವ‍ಪ್ರಕಾಶ್‌ ವಹಿಸಲಿದ್ದಾರೆ ಎಂದು ತಿಳಿಸಿದರು.

ಜಗನ್ಮೋಹನ ಅರಮನೆ ಸಭಾಂಗಣ ಅಥವಾ ಮೈಸೂರು ವಿ.ವಿ ಸೆನೆಟ್ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಸಲಾಗುವುದು. ಕನ್ನಡದೊಂದಿಗೆ ತುಳು, ಕೊಡವ, ಅರೆಭಾಷೆ, ಸಂಸ್ಕೃತ, ಕೊಂಕಣಿ ಮೊದಲಾದ ಭಾಷೆಗಳ 40 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ. ಬಹು ಭಾಷಾ ಕವಿಗೋಷ್ಠಿ ಇದಾಗಿರಲಿದೆ ಎಂದು ತಿಳಿಸಿದರು.

ಪ್ರಸಿದ್ಧ ಕವಿಗಳನ್ನು ನಾವೇ ಆಹ್ವಾನಿಸಲಿದ್ದೇವೆ. ರಾಜ್ಯದ ಎಲ್ಲ ಭಾಗದವರಿಗೂ ಪ್ರಾತಿನಿಧ್ಯ ಇರಲಿದೆ. ಕವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ವ್ಯವಸ್ಥಿತ, ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ನಡೆಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ₹ 25 ಲಕ್ಷ ಅನುದಾನ ಕೋರಲಾಗಿದೆ ಎಂದು ಹೇಳಿದರು.

‘ದಸರಾ ಕಾವ್ಯ ಸಂಭ್ರಮ’: ಈ ಬಾರಿ ಕವಿಗೋಷ್ಠಿಗಳೊಂದಿಗೆ ‘ದಸರಾ ಕಾವ್ಯ ಸಂಭ್ರಮ’ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.28ರಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದಾರೆ. ಖ್ಯಾತ ಕವಿ ಡಾ.ದೊಡ್ಡರಂಗೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12ಕ್ಕೆ ಹಾಸ್ಯ ಕವಿಗೋಷ್ಠಿ ಜರುಗಲಿದೆ. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸಲಿದ್ದಾರೆ. ಬಿ.ಆರ್.ಲಕ್ಷ್ಮಣರಾವ್, ಡುಂಡಿರಾಜ್‌, ಈರಪ್ಪ ಕಂಬಳಿ ಸೇರಿದಂತೆ 20 ಮಂದಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಜನಪದ ಕಾವ್ಯ ಸಂಭ್ರಮ ನಡೆಯಲಿದೆ. ಡಾ.ಪಿ.ಕೆ.ರಾಜಶೇಖರ್‌ ಮತ್ತು ತಂಡದವರು ಹಾಗೂ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರು ಜನಪದ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ವಿವರಿಸಿದರು.

ಯುವ ಕವಿಗೋಷ್ಠಿ : ಸೆ.30ರಂದು ಬೆಳಿಗ್ಗೆ 10.30ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ನಡೆಯಲಿದೆ. 40 ಕವಿಗಳು ಭಾಗವಹಿಸಲಿದ್ದಾರೆ. ಆ ಸಭಾಂಗಣದಲ್ಲೇ, ಅ.1ರಂದು ಬೆಳಿಗ್ಗೆ 10.30ಕ್ಕೆ ‘ಚಿಗುರು’ ಕವಿಗೋಷ್ಠಿ ನಡೆಸಲಾಗುತ್ತದೆ. 40 ಮಂದಿ ಉದಯೋನ್ಮುಖ ಕವಿಗಳು, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು  ಎಂದು ತಿಳಿಸಿದರು.