ವಿಜಯನಗರ: ವಿಜಯನಗರದ ಭವ್ಯತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹತ್ವ ಪಡೆದಿರುವ ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಹಂಪಿಯಲ್ಲಿ ಫೆಬ್ರವರಿ 2ರಿಂದ ಹಂಪಿ ಉತ್ಸವ ಆರಂಭವಾಗಲಿದೆ. ಈ ಉತ್ಸವ ಫೆಬ್ರವರಿ 02, 03 ಮತ್ತು 04ರವರೆಗೆ 3 ದಿನಗಳ ಕಾಲ ನಡೆಯಲಿದೆ. ಹಾಗೆಯೇ ಉತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಬರಗಾಲ ನಿಮಿತ್ಯ ಹಂಪಿ ಉತ್ಸವ ದಿನಾಂಕವನ್ನು ಸರ್ಕಾರ ಮುಂದೂಡಿತ್ತು. ಸದ್ಯ ಈಗ ಅಂತಿಮವಾಗಿ ಫೆಬ್ರವರಿ ತಿಂಗಳಲ್ಲಿ ಹಂಪಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಮೂರು ದಿಗಳ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ. ಅಗತ್ಯ ಸಿದ್ದತೆ ಮಾಡಿಕೊಳ್ಳಲು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ವಿಜಯನಗರ ಡಿಸಿಗೆ ಸೂಚನೆ ನೀಡಿದ್ದಾರೆ.
ಹಂಪಿ ಉತ್ಸವದಲ್ಲಿ ಇಡೀ ದಕ್ಷಿಣ ಭಾರತಕ್ಕೆ ರಾಜಧಾನಿಯಾಗಿದ್ದ ವಿಜಯನಗರದ ನೆಲದ ಗತವೈಭವ ಮರುಕಳಿಸಲಿದೆ. ಈ ಉತ್ಸವಕ್ಕೆ ಲಕ್ಷಾಂತರ ಜನರು ಬರ್ತಾರೆ. ವಿಜಯನಗರದ ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಅನೇಕ ವಿಧದ ಕಾರ್ಯಗಳ ಮೂಲಕ ಜನರಿಗೆ ಹಂಪಿಯ ಸಿರಿವಂತಿಕೆಗೆ ಪರಿಚಯ ಮಾಡಿಸಲಾಗುತ್ತೆ. ಹಾಗೆಯೇ ಹಂಪಿಯ ಸ್ಮಾರಕಗಳ ಗುಚ್ಛವನ್ನು ಈಗಾಗಲೇ 1986ರಲ್ಲಿ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಹಾಗಾಗಿ ಈ ಉತ್ಸವವು ಜನೋತ್ಸವದೊಂದಿಗೆ ವಿಜಯನಗರದ ಕಲಾ ಪ್ರಪಂಚವನ್ನೂ ಉಣಬಡಿಸಲಿದೆ.
16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರ ಆದೇಶದ ಮೇರೆಗೆ ಕಲ್ಲಿನ ರಥವನ್ನು ನಿರ್ಮಿಸಲಾಯಿತು. ಕಾಳಿಂಗದೊಂದಿಗಿನ ಯುದ್ಧದ ಸಮಯದಲ್ಲಿ ಚಕ್ರವರ್ತಿಯು ಕೋನಾರ್ಕ್‌ನ ಸೂರ್ಯ ದೇವಾಲಯದಿಂದ ಪ್ರಭಾವಿತನಾಗಿ ಹಂಪಿಯಲ್ಲಿ ಇದೇ ರೀತಿಯ ದೇವಾಲಯವನ್ನು ಮರುಸೃಷ್ಟಿಸಲು ಬಯಸಿದ್ದನೆಂದು ಇತಿಹಾಸದಲ್ಲಿ ಉಲ್ಲೇಖವಿದೆ.
ಬೆಂಗಳೂರಿನಿಂದ ಹಂಪಿಯು ಸುಮಾರು 342 ಕಿಲೋ ಮೀಟರ್ ದೂರದಲ್ಲಿದೆ. ರಸ್ತೆ, ರೈಲು ಅಥವಾ ವಿಮಾನದ ಮೂಲಕವೂ ಇಲ್ಲಿಗೆ ತಲುಪಬಹುದಾಗಿದೆ. ಹಂಪಿಗೆ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಪ್ರತಿದಿನ ವಿಮಾನಗಳಿವೆ. ಹಂಪಿಯಲ್ಲಿ ಟ್ಯಾಕ್ಸಿ, ಬೈಕ್ ಅಥವಾ ಬೈಸಿಕಲ್ ಬಾಡಿಗೆಗೆ ಪಡೆದು ವಿಜಯ ವಿಠ್ಠಲ ದೇವಸ್ಥಾನವನ್ನು ತಲುಪಬಹುದಾಗಿದೆ. ಅಲ್ಲದೇ ಎಲೆಕ್ಟ್ರಿಕ್ ಬಂಡಿಗಳನ್ನು ಕೂಡ ಪ್ರವಾಸ ಮಾಡಬಹುದಾಗಿದೆ. ಹೊಸಪೇಟೆ ಹತ್ತಿರದ ರೈಲು ನಿಲ್ದಾಣದಿಂದ ಹಂಪಿಗೆ 15 ಕಿ.ಮೀ. ಆಗುತ್ತದೆ.