ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನೇತೃತ್ವದ 25ನೇ ವರ್ಷದ ದತ್ತಜಯಂತಿ ಆಚರಣೆಗೆ ಚಾಲನೆ ದೊರೆತಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಚಂದ್ರದ್ರೋಣ ಪರ್ವತದ ಸಾಲಿನ ಪ್ರವಾಸಿ ತಾಣಗಳಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಗಾಳಿಕೆರೆ, ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ಡಿಸೆಂಬರ್ 11ರ ಬೆಳಗ್ಗೆ 6 ರಿಂದ ಡಿಸೆಂಬರ್15ರ ಬೆಳಗ್ಗೆ 10 ಗಂಟೆವರೆಗೂ ನಾಲ್ಕು ದಿನಗಳ ಕಾಲ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಡಿಸೆಂಬರ್ 6ರಂದು ಕರ್ನಾಟಕಾದ್ಯಂತ ದತ್ತಮಾಲಾ ಧಾರಣೆ ಮಾಡಲಾಗುತ್ತದೆ.
ಡಿಸೆಂಬರ್ 12ರಂದು ಮಹಿಳೆಯರಿಂದ ಅನುಸೂಯ ಜಯಂತಿ, ದತ್ತ ಪಾದುಕೆ ದರ್ಶನ ಪಡೆಯಲಾಗುತ್ತದೆ.
ಡಿಸೆಂಬರ್ 13ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಡಿಸೆಂಬರ್ 14ರಂದು ದತ್ತಪಾದುಕೆ ದರ್ಶನ ಹಾಗೂ ಹೋಮ ಪೂಜೆ ನೆರವೇರಲಿದೆ.
ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ದತ್ತಜಯಂತಿ ನಡೆಯುತ್ತಿದೆ.
ರಾಜ್ಯದ ವಿವಿಧೆಡೆಯಿಂದ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಗಮಿಸಲಿದ್ದಾರೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿಗರ ಭೇಟಿಗೆ ನಿಷೇಧ ಹೇರಿದೆ.
ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಗೋರಿಗಳಿಲ್ಲ ಇದು ಹಿಂದೂಗಳ ಪವಿತ್ರ ದತ್ತಪೀಠ ಅನ್ನುತ್ತಿದ್ದರೇ, ಮುಸ್ಲೀಮರು ಬಾಬಾ ಬುಡನ್ ಜೊತೆ ದಾದಾಹಯಾತ್ ಖಲಂದರ್ ಸೇರಿದಂತೆ ಅವರ ಶಿಷ್ಯರ ಗೋರಿಗಳಿರುವ ಪವಿತ್ರ ಸ್ಥಳ ಎನ್ನುತ್ತಿದ್ದಾರೆ. ಹಿಂದೂ-ಮುಸ್ಲಿಂ ನಡುವಿನ ದೇವರ ಹೆಸರಿನ ಭೂ ವಿವಾದ 25 ವರ್ಷಗಳಿಂದ ಜೀವಂತವಾಗಿದೆ.
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪಕ್ಕದಲ್ಲಿರುವ ಔದುಂಬರ ವೃಕ್ಷಕ್ಕೆ ಪೂಜೆ ಮಾಡದಂತೆ ಬೇಲಿ ಹಾಕಲಾಗಿದೆ ಎಂಬ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ದತ್ತಾತ್ರೇಯರು ಇದ್ದ ಸ್ಥಳದಲ್ಲಿ ಔದುಂಬರ ಮರ ಇರುತ್ತೆ. ದತ್ತ ಪಾದುಕೆ ದರ್ಶನ ಪಡೆದವರು ವೃಕ್ಷಕ್ಕೂ ಪೂಜೆ ಮಾಡಬೇಕು. ಆದರೆ, ವೃಕ್ಷ ಇರುವ ಸ್ಥಳದಲ್ಲಿ ಗೋರಿಗಳಿರುವುದರಿಂದ ವೃಕ್ಷದ ಬಳಿ ತೆರಳದಂತೆ ಬೇಲಿ ಹಾಕಿದ್ದಾರೆ ಎಂಬ ಆರೋಪವನ್ನ ಜಿಲ್ಲಾಡಳಿತದ ಮೇಲೆ ಹಿಂದೂ ಸಂಘಟನೆಗಳು ಮಾಡುತ್ತಿವೆ.