ಮನೆ ಸುದ್ದಿ ಜಾಲ ದತ್ತಪೀಠ: ಫೆ.7ರಂದು ಸಾರ್ವಜನಿಕರ ಅಹವಾಲು ಸ್ವೀಕಾರ

ದತ್ತಪೀಠ: ಫೆ.7ರಂದು ಸಾರ್ವಜನಿಕರ ಅಹವಾಲು ಸ್ವೀಕಾರ

0

ಚಿಕ್ಕಮಗಳೂರು : ದತ್ತಪೀಠ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಉಪ ಸಮಿತಿ ಫೆಬ್ರವರಿ 7ರಂದು ನಗರಕ್ಕೆ ಆಗಮಿಸಿ ಸಾರ್ವಜನಿಕರಿಂದ ಲಿಖಿತವಾಗಿ ಅಹವಾಲು ಸ್ವೀಕರಿಸುತ್ತಿದ್ದು, ಅದಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಕೆ ಎನ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠ ಎಂ ಹೆಚ್ ಅಕ್ಷಯ್, ಅಪರ ಜಿಲ್ಲಾಧಿಕಾರಿ ರೂಪ ಜಿಲ್ಲಾಧಿಕಾರಿ ಆವರಣವನ್ನು ಪರಿಶೀಲಿಸಿ ಸಿದ್ಧತೆ ಕುರಿತು ಸಭೆ ನಡೆಸಿದರು.

ಈ ಸಮಿತಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಫೆಬ್ರವರಿ 7ರಂದು ಬೆಳಗ್ಗೆ 10.30ಕ್ಕೆ ಅಗತ್ಯ ದಾಖಲೆಗಳನ್ನೊಳಗೊಂಡ ಲಿಖಿತ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಸಾರ್ವಜನಿಕರಾಗಲಿ, ವಿವಿಧ ಸಂಘ-ಸಂಸ್ಥೆಗಳಾಗಲಿ ಐದು ಜನರು ಮೀರದಂತೆ ತೆರಳಿ ಉಪಸಮಿತಿಗೆ ಮಾಹಿತಿ ನೀಡಬಹುದಾಗಿದೆ.

ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಶಾಮಿಯಾನ, ಕುರ್ಚಿಯನ್ನು ಹಾಕುತ್ತಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಿದೆ.ಧ್ವನಿವರ್ಧಕದ ಮೂಲಕ ಟೋಕನ್ ನಂಬರ್ ಹೇಳುತ್ತಿದ್ದಂತೆ ಸಂಬಂಧಿಸಿದವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಕ್ಕೆ ತೆರಳಿ ಲಿಖಿತ ಅಹವಾಲು ಸಲ್ಲಿಸಬಹುದಾಗಿದೆ.

ದತ್ತಪೀಠ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನ್ಯಾಯಾಲಯ ಸರ್ಕಾರಕ್ಕೆ ನೀಡಿದೆ. ಕಾನೂನು ಸಚಿವ ಮಾಧುಸ್ವಾಮಿ, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅವರನ್ನೊಳಗೊಂಡ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದೆ.

ಲಿಖಿತ ದಾಖಲಾತಿ ಸಲ್ಲಿಸುವ ಮೊದಲು ಮುಜರಾಯಿ ಇಲಾಖೆಯಲ್ಲಿ ಟೋಕನ್ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಟೋಕನ್ ಸಂಖ್ಯೆಯ ಪ್ರಕಾರ ಅಹವಾಲು ಸಲ್ಲಿಕೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಡುತ್ತಿದೆ. ಆದರೆ ಚರ್ಚೆ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಹೇಳಿದರು.