ನವದೆಹಲಿ (New Delhi)- ಕೋವಿಡ್ ನಾಲ್ಕನೇ ಅಲೆಯ (Covid Fourth Wave) ಆತಂಕ ಹೆಚ್ಚಾಗುತ್ತಿದ್ದಂತೆ ಮಕ್ಕಳಿಗೆ ತುರ್ತು ಬಳಕೆಗಾಗಿ ಕೋವ್ಯಾಕ್ಸಿನ್ (Covaxin), ಕೋರ್ಬೆವ್ಯಾಕ್ಸ್ (Corbevax) ಹಾಗೂ ಝೈಡಸ್ ಕ್ಯಾಡಿಲಾದ ಝೈಕೋವ್‌ಡಿ (ZyCoV-D) ಲಸಿಕೆ ಬಳಕೆಗೆ ಕೇಂದ್ರ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ಅನುಮತಿ ನೀಡಿದೆ.
ಡಿಸಿಜಿಐ 5-12 ವಯಸ್ಸಿನ ಮಕ್ಕಳಿಗೆ ಕೋರ್ಬೆವ್ಯಾಕ್ಸ್, 6-12 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝೈಡಸ್ ಕ್ಯಾಡಿಲಾದ ಝೈಕೋವ್‌ಡಿ ಲಸಿಕೆಯ ಎರಡು ಡೋಸ್ ತುರ್ತು ಬಳಕೆಗೆ ಅನುಮತಿ ನೀಡಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ (Minister of Health and Family Welfare) ಡಾ.ಮನಸುಖ್ ಮಾಂಡವೀಯ (Dr.Mansukh Mandaviya) ಅವರು ಟ್ವೀಟ್ ಮಾಡಿದ್ದಾರೆ. ವಿಷಯ ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಡಿಸಿಜಿಐ ಅನುಮತಿಯನ್ನು ನೀಡಿದೆ.

ಕರ್ನಾಟಕದ ಆರೋಗ್ಯ ಸಚಿವರಾದ (Health Minister) ಡಾ.ಕೆ.ಸುಧಾಕರ್ (Dr.K.Sudhakar) ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 6-12 ವರ್ಷ ವಯಸ್ಸಿನವರಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಯನ್ನು ಡಿಸಿಜಿಐ ಅನುಮೋದಿಸಿರುವುದರಿಂದ ಕೋವಿಡ್ -19 ವಿರುದ್ಧದ ಭಾರತದ ಯುದ್ಧಕ್ಕೆ ದೊಡ್ಡ ಉತ್ತೇಜನ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕುವಂತೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಸಾಮೂಹಿಕ ಹೋರಾಟವನ್ನು ಬಲಪಡಿಸಲು ಕೈಜೋಡಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

5 ರಿಂದ 12 ವರ್ಷದ ಮಕ್ಕಳು ಮತ್ತು 6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಕ್ರಮವಾಗಿ ಕೋರ್ಬೆವ್ಯಾಕ್ಸ್ ಮತ್ತು ಕೋವಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಕಳೆದ ವಾರ ಬಯಾಲಾಜಿಕಲ್–ಇ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸಮಿತಿ ಪರಿಶೀಲನೆ ಮಾಡಿತ್ತು. ಅದೇ ವೇಳೆ, ಕ್ಯಾಡಿಲಾ ಕಂಪನಿಯ ಅರ್ಜಿಯನ್ನೂ ಸಹ ಪರಿಶೀಲಿಸಲಾಗಿತ್ತು. ಆದರೆ ಈ ಕುರಿತ ಸೂಕ್ತ ವರದಿ ಇಲ್ಲದೆ ತಾನು ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿತ್ತು. ಆದರೆ ಇದೀಗ ಡಿಸಿಜಿಐ ಲಸಿಕೆ ಬಳಕೆಗೆ ಅನುಮತಿ ನೀಡಿದೆ.
ಬಯಾಲಾಜಿಕಲ್ ಇ ಕಂಪನಿಯ ಕೋರ್ಬೆವ್ಯಾಕ್ಸ್ ಲಸಿಕೆಯನ್ನು 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಈಗಾಗಲೇ ನೀಡಲಾಗುತ್ತಿದೆ. ಡಿಸೆಂಬರ್ 24, 2021ರಂದು 12 ರಿಂದ 18 ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು. ಭಾರತವು 2022 ರ ಮಾರ್ಚ್ 16 ರಿಂದ 12-14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಿದೆ.














