ಮನೆ ರಾಜ್ಯ ರಾಯರ ಅನುಗ್ರಹಕ್ಕಾಗಿ ತುಲಾಭಾರ ನೆರವೇರಿಸಿದ ಡಿಸಿಎಂ ಡಿಕೆಶಿ

ರಾಯರ ಅನುಗ್ರಹಕ್ಕಾಗಿ ತುಲಾಭಾರ ನೆರವೇರಿಸಿದ ಡಿಸಿಎಂ ಡಿಕೆಶಿ

0

ರಾಯಚೂರು : ಡಿಸಿಎಂ ಡಿಕೆ ಶಿವಕುಮಾರ್ ಅವರಿಂದು (ಅ.22) ಪತ್ನಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಬಳಿಕ ರಾಯರ ಅನುಗ್ರಹಕ್ಕಾಗಿ ತುಲಾಭಾರ ನೆರವೇರಿಸಿದರು.

ಗುರುರಾಯರ ದರ್ಶನ ಬಳಿಕ ಡಿಕೆ ಶಿವಕುಮಾರ್‌ ಅವರು ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳನ್ನು ಭೇಟಿಯಾಗಿ ಶ್ರೀಮಠದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಶ್ರೀಮಠದಿಂದ ಡಿಕೆಶಿ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಶ್ರೀಗಳ ಭೇಟಿ ಬಳಿಕ ಮಾತನಾಡಿದ ಅವರು, ಶ್ರೀಮಠದಿಂದ ಮಂತ್ರಾಲಯಕ್ಕೆ ಬರಲು ಆಹ್ವಾನವಿತ್ತು. ರಾಯರ ಅನುಗ್ರಹಕ್ಕಾಗಿ ಬಹಳ ದಿನಗಳಿಂದ ಬರಬೇಕೆಂದು ಇದ್ದೆ. ಗುರುಗಳ ಅನುಗ್ರಹ ಎಲ್ಲಕ್ಕೂ ಅವಶ್ಯಕ. ಇಂದು ವಿಶೇಷ ದಿನವಾಗಿದ್ದು, ಶ್ರೀಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲೂ ಭಾಗಿಯಾದೆ.

ಕಳೆದ ಬಾರಿ ಸಂಕಲ್ಪ ಮಾಡಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ. ಎಲ್ಲರಿಗೆ, ನಾಡಿಗೆ ಒಳ್ಳೆಯದಾಗಲಿ ಅಂತ ಬೇಡಿಕೊಂಡಿದ್ದೇನೆ. ರಾಯರ ವೃಂದಾವನ ದರ್ಶನ ಪಡೆದು ಶ್ರೀಗಳಿಂದ ಡಿಕೆಶಿ ದಂಪತಿ ಆಶೀರ್ವಚನ ಪಡೆದರು. ಬಳಿಕ ಪಂಚಮುಖಿಗೆ ಭೇಟಿ ನೀಡಿ, ಆಂಜನೇಯನ ದರ್ಶನ ಪಡೆದರು. ಆನಂತರ ಸಂಕಲ್ಪ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ರಾಮನ ತಂದೆ ದಶರಥ ಮಹರಾಜ, ಆದರೆ ಎಲ್ಲೂ ದಶರಥ ಮಹಾರಾಜನ ದೇವಸ್ಥಾನ ಇಲ್ಲ. ಆದ್ರೆ ರಾಮನ ಬಂಟ ಆಂಜನೇಯನ ದೇವಸ್ಥಾನ ಇದೆ. ಆಂಜನೇಯ ಒಬ್ಬ ಸಮಾಜದ ಬಹುದೊಡ್ಡ ಸೇವಕ. ಅಂತ ಸೇವಕನ ಸ್ಥಾನಕ್ಕೆ ಬಂದು ಪ್ರಾರ್ಥನೆ ಪೂಜೆ ಮಾಡುವ ಅವಕಾಶವನ್ನ ನಮ್ಮ ಶಾಸಕರು, ಮಂತ್ರಿಗಳು ಕಲ್ಪಿಸಿಕೊಟ್ಟಿದ್ದಾರೆ. ನಾನು ಇಲ್ಲಿ ಪ್ರಾರ್ಥನೆ ಮಾಡಿದ್ದೇನೆ.

ಈ ದೇವಸ್ಥಾನದಲ್ಲಿ ವ್ಯವಹಾರ ಭಕ್ತನಿಗೂ ಭಗವಂತನಿಗೂ ಬಿಟ್ಟಿದ್ದು, ಸಾರ್ವಜನಿಕರಿಗಾಗಲಿ, ನಿಮಗಾಗಲಿ ಯಾರಿಗೂ ಸಂಬಂಧಿಸಿದ ವ್ಯವಹಾರ ಅಲ್ಲ, ನಾನುಂಟು ಆಂಜನೇಯ ಉಂಟು ಎಂದರು. ಪಂಚಮುಖಿ ದರ್ಶನದ ಬಳಿಕ ಮಂತ್ರಾಲಯಕ್ಕೆ ಮರಳಿದ ಡಿಕೆಶಿ ತುಲಾಭಾರ ನೆರವೇರಿಸಿದರು. ರಾಯರ ಅನುಗ್ರಹಕ್ಕಾಗಿ ಬೆಲ್ಲದ ಮೂಟೆಯನ್ನಿಟ್ಟು ಮಠದ ಅರ್ಚಕರಿಂದ ಡಿ.ಕೆ.ಶಿವಕುಮಾರ್ ಅವರಿಗೆ ತುಲಾಭಾರ ಮಾಡಲಾಯಿತು.

ಬಳಿಕ ಮಂತ್ರಾಲಯದಲ್ಲಿ ವರ್ಷಕ್ಕೆ ಎರಡು ಬಾರಿ ಮಾತ್ರ ನಡೆಯುವ ಧಾರ್ಮಿಕ ಕಾರ್ಯಕ್ರಮ ಮೂಲ ರಾಮದೇವರ ಪೂಜೆಯಲ್ಲಿ ಭಾಗಿಯಾಗಿದ್ದರು. ದೀಪಾವಳಿ ಬಲಿಪಾಡ್ಯ ಹಿನ್ನೆಲೆ ಮೂಲರಾಮ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಿದರು. ಸಂಜೆ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಗೋಶಾಲೆಗೆ ಭೇಟಿ ನೀಡಲಿದ್ದಾರೆ.