ದುಡು(ರಾಜಸ್ಥಾನ): ಮೂವರು ಸಹೋದರಿಯರು, ಇಬ್ಬರು ಮಕ್ಕಳು ಸೇರಿ ಐವರ ಮೃತದೇಹ ಬಾವಿವೊಂದರಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ದುಡುದಲ್ಲಿ ನಡೆದಿದೆ.
ಮೃತ ಮಹಿಳೆಯರ ಪೈಕಿ ಇಬ್ಬರು ಗರ್ಭಿಣಿಯರಾಗಿದ್ದರೆಂಬುದು ಗೊತ್ತಾಗಿದೆ. ವರದಕ್ಷಿಣೆಗೋಸ್ಕರಗೋಸ್ಕರ ಕೊಲೆ ಮಾಡಿ, ಬಾವಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಮೃತ ಸಹೋದರಿಯರನ್ನ ಕಾಳುದೇವಿ(25), ಮಮತಾ(23) ಹಾಗೂ ಕಮಲೇಶಿ(20) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳಲ್ಲಿ ಒಂದು ನಾಲ್ಕು ವರ್ಷ ಹಾಗೂ ಮತ್ತೊಂದು ಕೇವಲ 27 ದಿನದ ಮಗು ಎಂಬ ಮಾಹಿತಿ ಲಭ್ಯವಾಗಿದೆ.
ಮಮತಾ ಹಾಗೂ ಕಮಲೇಶಿ ಗರ್ಭಿಣಿಯರಾಗಿದ್ದರು. ಮನೆಯಿಂದ ಎರಡು ಕಿಲೋಮೀಟರ್ ದೂರದ ಬಾವಿಯಲ್ಲಿ ಇವರೆಲ್ಲರ ಶವಗಳು ಪತ್ತೆಯಾಗಿವೆ. ಈಗಾಗಲೇ ಎಲ್ಲರ ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆಯಲಾಗಿದೆ.
ಮೇ 25ರಂದು ದುಡು ಪೊಲೀಸ್ ಠಾಣೆಯಲ್ಲಿ ಮೂವರು ಸಹೋದರಿಯರು ಕಾಣೆಯಾದ ಬಗ್ಗೆ ಎಫ್ಐಆರ್ ದಾಖಲಾಗಿತ್ತು. ಈ ಮಧ್ಯೆ ಮೃತನ ಸಹೋದರ ವರದಕ್ಷಿಣೆಗೋಸ್ಕರ ತಮ್ಮ ಸಹೋದರಿಯರಿಗೆ ಅತ್ತೆಯಂದಿರು ಹಿಂಸೆ ನೀಡಿದ್ದರ ಬಗ್ಗೆ ಪತ್ರ ಬರೆದು, ಆರೋಪ ಮಾಡಿದ್ದರು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು, ಎಲ್ಲರ ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.