ಮೈಸೂರು : ಆರ್ಸಿಬಿ ಗೆಲುವಿನ ಸಂಭ್ರಮವನ್ನು ಜನರು ತಮ್ಮ ಮನೆಯಲ್ಲೇ ಕುಳಿತು ಟಿವಿ ನೋಡುತ್ತಾ ಸಂಭ್ರಮಿಸುವುದನ್ನು ಬಿಟ್ಟು ಅಪಾರ ಪ್ರಮಾಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದು ತಪ್ಪು, ಇದೊಂದು ಅನಿರಿಕ್ಷಿತ ಘಟನೆಯಾದ್ದರಿಂದ ಪೊಲೀಸರು, ಸರ್ಕಾರ ಯಾವ ರೀತಿ ಕಂಟ್ರೋಲ್ ಮಾಡಲು ಸಾಧ್ಯ. ಜನರು ತಮ್ಮ ಸ್ವಯಂಕೃತ ಅಪರಾಧದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದರೇ, ಘಟನೆ ಕುರಿತು ಸರ್ಕಾರವನ್ನು, ಪೊಲೀಸರನ್ನು ತೆಗಳುವುದು ಸರಿಯಲ್ಲ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಜೀವಕ್ಕೆ ನಾವೇ ಜವಾಬ್ದಾರರಾಗಬೇಕು. ಎಲ್ಲವನ್ನೂ ಸರ್ಕಾರದ ಮೇಲೆ ಹಾಕಬಾರದು. ಸರ್ಕಾರ ನಿಮ್ಮನ್ನು ಸದಾಕಾಲ ಕಾಯಲು ಆಗುತ್ತಾ..ಬಿಸಿಲು ಅಂತಾ ಇಡೀ ಆಕಾಶಕ್ಕೆ ಚಪ್ಪರ ಹಾಕಲು ಆಗುತ್ತಾ..? ನೀರು ಫ್ರೀಯಾಗಿ ಕೊಡ್ತಾರೆ ಅಂದ್ರೂ ಜನ ಸೇರ್ತಾರೆ, ಕೊನೆಗೆ ಉಪ್ಪು ಫ್ರೀಯಾಗಿ ಕೊಡ್ತೀವಿ ಅಂದ್ರೂ ಜನ ಸೇರ್ತಾರೆ..ಕಾಲ್ತುಳಿತದಿಂದ ಸಾವು ಎನ್ನುವುದು ನಮ್ಮ ದೇಶಕ್ಕೆ ಅಂಟಿಕೊಂಡಿದೆ. ತಿರುಪತಿಯಲ್ಲಿ ಕಾಲ್ತುಳಿತ, ಕುಂಭಮೇಳದಲ್ಲಿ ಕಾಲ್ತುಳಿತ, ಇದೆಂತಹಾ ಅಭಿಮಾನ.. ಜನರು ಪರಿವರ್ತನೆಯಾಗಬೇಕು. ಬದುಕಿನಲ್ಲಿ ಶಿಸ್ತು ಕಲಿಯಬೇಕು. ಗುಡ್ಡ ಕುಸಿದು ಮನೆ ಬಿದ್ದರೆ ಅದಕ್ಕೂ ಸರ್ಕಾರವನ್ನು ದೂಷಿಸುತ್ತಾರೆ. ಆದರೇ, ಗುಡ್ಡದ ಕೆಳಗೆ ಮನೆ ಕಟ್ಟಬಾರದು ಅದು ತಪ್ಪು ಎನ್ನುವ ವಿಚಾರ ಯಾರೂ ಹೇಳುವುದಿಲ್ಲ.
ಮಳೆ ಬಂದ್ರೂ ಬೈಯ್ತಾರೆ, ಬರದಿದ್ರೂ ಸರ್ಕಾರದ ಮೇಲೆ ಕೋಪ ಮಾಡ್ಕೋತಾರೆ. ಇವೆಲ್ಲಾ ಪ್ರಕೃತಿಯ ಕೊಡುಗೆ ಇದಕ್ಕೆ ನಿಯಮಗಳು ಇಲ್ಲ, ಸರ್ಕಾರವೇನೋ ಸತ್ತವರ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ಕೊಟ್ಟಿದೆ. ಆದರೆ ಜೀವ ಬರುತ್ತಾ.. ಮನೆಯಲ್ಲಿ ಆರಾಮವಾಗಿ ಟಿವಿ ನೋಡುತ್ತಾ ಸಂಭ್ರಮಿಸುವುದನ್ನು ಬಿಟ್ಟು ಅನ್ಯಾಯವಾಗಿ ಜನಜಂಗುಳಿ ಸೇರಿ ಪ್ರಾಣ ಕಳೆದುಕೊಂಡಿದ್ದು ತಮಗೆ ಅತೀವ ನೋವು ತಂದಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.















