ಮನೆ ಸುದ್ದಿ ಜಾಲ ಹಲವು ರಾಜ್ಯಗಳಲ್ಲಿ ಮುಂದಿನ 3 ದಿನ ಭಾರೀ ಮಳೆ

ಹಲವು ರಾಜ್ಯಗಳಲ್ಲಿ ಮುಂದಿನ 3 ದಿನ ಭಾರೀ ಮಳೆ

0

ಬೆಂಗಳೂರು: ರಾಜ್ಯದ ಹಲವೆಡೆ ಹಗುರ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ನಡುವೆ ದಕ್ಷಿಣ ಕರ್ನಾಟಕ ಮತ್ತು ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ ಸೇರಿ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗಿದೆ.

ಸದ್ಯ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಬೇರೆ ರಾಜ್ಯಗಳಲ್ಲಿ ಇನ್ನೂ ಸಹ ವರುಣನ ಅಬ್ಬರ ನಿಂತಿಲ್ಲ. ಜನವರಿ 21ರಿಂದ 23ರವರೆಗೆ ದೆಹಲಿ, ಉತ್ತರ ಪ್ರದೇಶ, ಉತ್ತರ ರಾಜಸ್ಥಾನ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು, ಇದೇ ವೇಳೆ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ, ಅರುಣಾಚಲ ಪ್ರದೇಶ, ಲಡಾಖ್​ನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶದಲ್ಲಿ ಜನವರಿ 21ರವರೆಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.


ತಮಿಳುನಾಡಿನಲ್ಲಿ ಭಾರೀ ಮಳೆ: ಚೆನ್ನೈ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಸೋಮವಾರ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜನವರಿ 19 ರವರೆಗೆ ಮಳೆ ಮುಂದುವರಿಯಲಿದೆ. ಚೆನ್ನೈ ನೆರೆಯ ಜಿಲ್ಲೆಗಳಲ್ಲಿಯೂ ಹಗುರವಾದ ಮಳೆಯಾಗುವ ನಿರೀಕ್ಷೆಗಳಿವೆ. ತಿರುವಳ್ಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು IMD ಅಧಿಕಾರಿಗಳು ತಿಳಿಸಿದ್ದಾರೆ.
ತಿರುವಳ್ಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ತಿಳಿಸಿದೆ. ಚೆನ್ನೈ, ಚೆಂಗಲ್ಪಟ್ಟು, ರಾಣಿಪೇಟ್, ಕಾಂಚೀಪುರಂ, ವೆಲ್ಲೂರು, ಕಡಲೂರು, ವಿಲ್ಲುಪುರಂ, ತಿರುವರೂರ್, ತಂಜಾವೂರು, ನಾಗಪಟ್ಟಣಂ, ಮೈಲಾಡುತುರೈ ಮತ್ತು ತಮಿಳುನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ಒಂದು ಅಥವಾ ಎರಡು ಗಂಟೆಗಳಲ್ಲಿ ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಮಳೆಯಾಗಲಿದೆ.

ರಾಜ್ಯಗಳಲ್ಲಿ ದಟ್ಟವಾದ ಮಂಜು:
ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ದಿನದ ಪರಿಸ್ಥಿತಿಗಳನ್ನು ಮುನ್ಸೂಚಿಸಲಾಗಿದೆ. ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ನಿರೀಕ್ಷಿಸಲಾಗಿದೆ. ಪಂಜಾಬ್, ಹರಿಯಾಣ, ದೆಹಲಿ, ಬಿಹಾರ ಮತ್ತು ಸಿಕ್ಕಿಂನ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಇರುವ ಸಾಧ್ಯತೆಯಿದೆ.