ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ 15 ದಿನಗಳಲ್ಲಿ ಒಟ್ಟು ಐವರು ಬಾಣಂತಿಯರು ಮೃತಪಟ್ಟಿದ್ದು, ಜನರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಸರ್ಕಾರ ತನಿಖೆ ನಡೆಸಲು ಮತ್ತೊಂದು ಸಮಿತಿ ರಚಿಸಿದೆ. ಆದರೆ, ಈ ಹಿಂದೆ ರಚಿಸಲಾಗಿದ್ದ ತನಿಖಾ ಸಮಿತಿ ವರದಿ ಸಿದ್ದಪಡಿಸಿ ಈಗಾಗಲೆ ಸರ್ಕಾರಕ್ಕೆ ನೀಡಿದೆ. ಈ ವರದಿಯನ್ನು ಸರ್ಕಾರ ಗೌಪ್ಯವಾಗಿಟ್ಟಿದ್ದು, ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗು ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಲ್ಲಿ 5 ಮಂದಿ ಬಾಣಂತಿಯರ ಸಾವಾಗಿದ್ದು, ಈ ಬಗ್ಗೆ ತಜ್ಞರ ತಂಡ ತನಿಖೆ ಮಾಡಿ ನೀಡಿರುವ ವರದಿಯನ್ನ ಕರ್ನಾಟಕ ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರ್ ಅಶೋಕ್ ಟ್ವಿಟ್ ಮಾಡಿದ್ದಾರೆ.
“ಈ ಸರಣಿ ಸಾವಿನ ಬೆನ್ನಲ್ಲೇ, ನವೆಂಬರ್ 16ನೆ ತಾರೀಖಿನಂದು ಖಾಸಗಿ ಕಂಪನಿಯೊಂದು ಸರಬರಾಜು ಮಾಡಿರುವ Ringer Lactate Infusion ಔಷದಿಯನ್ನ ಬಳಕೆ ಮಾಡದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸುತ್ತೋಲೆ ಹೊರಡಿಸಿದೆ.”
ಎಕ್ಸ್ ಪೋಸ್ಟ್
“ಬಳ್ಳಾರಿಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿಗೂ ಈ ಸುತ್ತೋಲೆಗೂ ಏನಾದರೂ ಸಂಬಂಧವಿದೆಯೇ? ಈ ಕಳಪೆ ಗುಣಮಟ್ಟದ ಔಷಧಿ ಪೂರೈಕೆಗೆ, ಬಳಕೆಗೆ ಹೊಣೆ ಯಾರು? ಸರ್ಕಾರ ವರದಿಯನ್ನ ಮುಚ್ಚಿಡುವ ಮೂಲಕ ಯಾರನ್ನು ರಕ್ಷಿಸುತ್ತಿದೆ?”
“ಇಡೀ ಕರ್ನಾಟಕವೇ ಬೆಚ್ಚಿ ಬೀಳುವ ಇಂತಹ ಆಘಾತಕಾರಿ ಘಟನೆ ನಡೆದಿದ್ದರೂ ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿಸಿಎಂ ಡಿಕೆ ಶಿವಕುಮಾರ್ ಅವರಾಗಲಿ ಇದರ ಬಗ್ಗೆ ಕ್ರಮ ಕೈಗೊಳ್ಳುವುದಿರಲಿ, ಕನಿಷ್ಠ ಪಕ್ಷ ಸಂತಾಪ ಕೂಡ ಸೂಚಿಸಿಲ್ಲ. ಇನ್ನು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಈವರೆಗೂ ಜಿಲ್ಲೆಗೆ ಭೇಟಿ ನೀಡುವ ಗೋಜಿಗೂ ಹೋಗಿಲ್ಲ.”
“ಈ ಪ್ರಕರಣದ ನೈತಿಕೆ ಹೊಣೆ ಹೊತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರು ಕೂಡಲೇ ರಾಜೀನಾಮೆ ನೀಡಬೇಕು. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನ ಒತ್ತಾಯಿಸುತ್ತೇನೆ.” ಎಂದರು.