ಮನೆ ರಾಜ್ಯ ‘ತಾಮರ ಹೆಲ್ತ್ ಕೇರ್ ಸೆಂಟರ್’ನಲ್ಲಿ ಯುವತಿ ಸಾವು: ಕೊಲೆ ಶಂಕೆ

‘ತಾಮರ ಹೆಲ್ತ್ ಕೇರ್ ಸೆಂಟರ್’ನಲ್ಲಿ ಯುವತಿ ಸಾವು: ಕೊಲೆ ಶಂಕೆ

0

ಮೈಸೂರು: ತಾಮರ್ ಹೆಲ್ತ್ ಕೇರ್’ನಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ  ಮಮತಾ (25) ಬಾತ್ ರೂಂ’ನಲ್ಲಿ ಬಿದ್ದು ಮೃತಪಟ್ಟಿರುವುದಾಗಿ ಸಂಸ್ಥೆಯವರು ಹೇಳಿದ್ದು, ಆಕೆಯ ದೇಹದ ಮೇಲಾಗಿದ್ದ ಗಾಯಗಳಿಂದಾಗಿ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಮೃತರ ಪೋಷಕರು ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಕೊಳ್ಳೇಗಾಲ ಸಹಾಯಕ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್  ಅವರ ನೇತೃತ್ವದಲ್ಲಿ ದೇಹವನ್ನು ಸಮಾಧಿಯಿಂದ ಹೊರ ತೆಗೆಯಲಾಗುತ್ತಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪರಾರಿ :

ಯುವತಿ ಮಮತಾಳ ಸಾವಿನ ಬಳಿಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಭಿ ತಲೆ ಮರೆಸಿಕೊಂಡಿದ್ದು, ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆತ ಮಮತಾಳ ಮನೆಯವರೊಂದಿಗೆ ಸಾವಿಗೆ ಮುಂಚೆ ಸಂಪರ್ಕದಲ್ಲಿದ್ದ, ಆದರೆ ಮಮತಾಳ ಸಾವಿನ ಬಳಿಕ ಫೋನ್  ಆಫ್ ಮಾಡಿ  ಧಿಡೀರ್ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನವನ್ನು ಹುಟ್ಟುಹಾಕಿದೆ.

ದೈಹಿಕ ಹಲ್ಲೆಯ ಗುರುತು :

ಮೃತ ಯುವತಿಯ ಅಂತ್ಯಕ್ರಿಯೆ ವೇಳೆ ಆಕೆಯ ಹಣೆಯ ಮೇಲೆ, ಕೈ ಹಾಗೂ ಪಕ್ಕೆಯ ಬಳಿ ಗಾಯಗಳಾಗಿದ್ದು, ಆಕೆಯ ಖಾಸಗಿ ಭಾಗದಲ್ಲಿ ರಕ್ತ ಸ್ರಾವವಾಗಿರುವುದು ಕಂಡು ಬಂದಿರುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಪೋಷಕರು ಮಗಳ ಸಾವಿನ ನೋವಿನಲ್ಲಿದ್ದ ಕಾರಣ ಆ ಕ್ಷಣಕ್ಕೆ ಅದನ್ನು ಗಮನಿಸಿರುವುದಿಲ್ಲ. ಇದರಿಂದಾಗಿ ದೈಹಿಕ ಹಲ್ಲೇ ಮಾಡಿ ಕೊಲೆ ಮಾಡಿರುವ ಶಂಕೆ ಮೇಲ್ನೋಟಕ್ಕೆ ಕಂಡು ಬಂದಿದೆ.

ಪ್ರಕರಣದ ವಿವರ:

ಹೆಬ್ಬಾಳ್ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ತಾಮರ ಹೆಲ್ತ್ ಕೇರ್ ನಲ್ಲಿ ಪಿಯುಸಿ ಫೇಲ್ ಆದ ಯುವತಿ ಮಮತಾಳನ್ನು ನರ್ಸ್ ಆಗಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ಪಿಯುಸಿ ಫೇಲ್ ಆದ ಯುವತಿ ನರ್ಸ್ ಆಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂಬು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಇದರ ಬಗ್ಗೆ ಸಂಸ್ಥೆಯ ಮಾಲೀಕರಾದ ಆಶಿಕಾ ಮಂದಣ್ಣ ಮತ್ತು ಅವಳ ಪತಿ ಮಂದಣ್ಣ ಸ್ಪಷ್ಟಪಡಿಸಬೇಕು.

ಇದೇ ತಿಂಗಳ 15 ರಂದು ಬೆಳಗ್ಗಿನ ಜಾವ 2.45ರ ಸಮಯದಲ್ಲಿ ತಾಮರ್ ಹೆಲ್ತ್ ಕೇರ್’ನ ಮಾಲೀಕರಾದ ಆಶಿಕಾ ಮಂದಣ್ಣ ಮತ್ತು ಅವಳ ಪತಿ ಮಂದಣ್ಣ ಮಮತಾ ತಾಯಿಗೆ ಕರೆ ಮಾಡಿ ನಿಮ್ಮ ಮಗಳು ಬಾತ್ ರೂಂನಲ್ಲಿ ತಲೆ ತಿರುಗಿ ಬಿದ್ದಿದ್ದಾಳೆ. ಆಕೆಯನ್ನು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಬಳಿಕ 3.30ಕ್ಕೆ ಕರೆ ಮಾಡಿ ಜಯದೇವ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿಲ್ಲ. ಅಲ್ಲದೇ ನಿಮ್ಮ ಮಗಳ ನಾಡಿ ಮಿಡಿತ ನಿಂತು ಹೋಗಿದ್ದು, ನಾವೇ ಖುದ್ದಾಗಿ ಪರಿಕ್ಷಿಸಿದ್ದೇವೆ, ನಿಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

ಇದರಿಂದ ಗಾಬರಿಗೊಂಡ ತಾಯಿ ಕೆ.ಜೆ.ಕೊಪ್ಪಲಿನಲ್ಲಿರುವ ಅವರ ಸಂಬಂಧಿಕನಾದ ಸಾಗರ್ ಎಂಬುವವನಿಗೆ ಕರೆ ಮಾಡಿ ಆತನನ್ನು ಸ್ಥಳಕ್ಕೆ ತೆರಳುವಂತೆ ತಿಳಿಸಿದ್ದಾರೆ.

ಸಾಗರ್, ತಾಮರ ಹೆಲ್ತ್ ಕೇರ್ ವಿಳಾಸ ಹುಡುಕಿಕೊಂಡು ಹೆಬ್ಬಾಳ ರಿಂಗ್ ರಸ್ತೆಯ ಶುಭೋದಿನಿ ಛತ್ರ ಬಳಿ ವಿಳಾಸ ತಿಳಿಯದೇ ಅಲ್ಲೇ ರಸ್ತೆಯಲ್ಲಿ ನಿಂತಿದ ಹುಡುಗರನ್ನು ತಾಮರ ಹೆಲ್ತ್ ಸೆಂಟರ್ ವಿಳಾಸವನ್ನು  ವಿಚಾರಿಸಿದಾಗ ಅವರು, ನೇರವಾಗಿ ನೀವು, ‘ಮಮತಾಳ ಸಂಬಂಧಿಕರೇ?’ ಎಂದು ಪ್ರಶ್ನಿಸಿದ್ದಾರೆ. ಆಗ ಸಾಗರ್ ಹೌದೆಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಸ್ಥಳದಲ್ಲಿ ಸಿಕ್ಕ ಹುಡುಗರು, ತಾಮರ ಹೆಲ್ತ್ ಕೇರ್ ಮಾಲೀಕರಾದ ಆಶಿಕಾರೊಂದಿಗೆ ಸಾಗರ್’ಗೆ ಮಾತನಾಡಿಸಿದಾಗ ತನ್ನ ಹುಡುಗರೊಂದಿಗೆ ಬರಲು ಆಶಿಕಾ ತಿಳಿಸಿದ್ದಾರೆ. ಆ ಸಮಯದಲ್ಲಿ ತಾವು ಐದು ನಿಮಿಷದಲ್ಲಿ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿ ಹೋದ ಹುಡುಗರು ಅರ್ಧಗಂಟೆಯ ನಂತರ ಹಿಂತಿರುಗುತ್ತಾರೆ. ಬಳಿಕ ತಾಮರ್ ಹೆಲ್ತ್ ಕೇರ್ ಬಳಿ ಆತನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿಯೂ ಸಮಯ ವ್ಯರ್ಥ ಮಾಡಿ ಸೆಂಟರ್’ನ ಗೇಟ್ ಕೀ ಮಾಲೀಕರ ಬಳಿ ಇದೆ, ಅವರು ಬಂದು ತೆಗೆಯುತ್ತಾರೆ ಎಂದು ಕಾಯಿಸುತ್ತಾರೆ. ಅಲ್ಲಿಯೂ ಅರ್ಧ ಗಂಟೆ ಕಾದ ಬಳಿಕ ಸಂಸ್ಥೆಯ ಒಳಗಡೆಯಿಂದ ಬಂದ ಓರ್ವ ಯುವತಿ ಬಂದು ಗೇಟ್ ಅನ್ನು ತೆರೆಯುತ್ತಾಳೆ.

ಆ ಸಮಯದಲ್ಲಿ ಕೇರ್ ನ ಆವರಣದಲ್ಲಿ ನಿಂತಿದ್ದ ಆ್ಯಂಬುಲೆನ್ಸ್’ನಲ್ಲಿ ಮಮತಾಳ ಶವ ಇರುತ್ತದೆ. ತಾಮರ ಹೆಲ್ತ್ ಕೇರ್ ಸಂಸ್ಥೆಯವರು ತನ್ನ ಕಛೇರಿಯಾದಲ್ಲಿ ಹಲವಾರು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದ ನೌಕರಳ ಶವವನ್ನು ಕೆಳಗಿಳಿಸುವ ಕೆಲಸವನ್ನು ಮಾಡಿರುವುದಿಲ್ಲ. ಕೆಲ ಸಮಯದಲ್ಲಿ ಸಂಸ್ಥೆಯ ಮಾಲೀಕರು ಸ್ಥಳಕ್ಕೆ ಬರುತ್ತಾರೆ. ಬೆಳಗಿನ ಜಾವಕ್ಕೆ ಕುಟುಂಬದವರೊಡನೆ ಆಗಮಿಸಿದ ಮಮತಾಳ ತಾಯಿ ಅವರಿಂದ ಆಶಿಕಾ ಮಂದಣ್ಣ ಕೆಲವು ಪೇಪರ್’ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಮಗಳ ಸಾವಿನ ದುಃಖದಲ್ಲಿದ್ದ ಅವರು ಯಾವ ಪೇಪರ್ ಎಂದು ಗಮನಿಸದೇ ಸಹಿ ಹಾಕಿದ್ದಾರೆ.

ಈ ವೇಳೆ ಮಮತಾಳ ವಸ್ತುಗಳನ್ನು ಹಸ್ತಾಂತರಿಸುವಂತೆ ಮಮತಾ ತಾಯಿ, ಆಶೀಕಾ ಮಂದಣ್ಣ ಬಳಿ ಕೇಳಿದಾಗ, ನಾವೇ ಅಂತ್ಯಕ್ರಿಯೆಗೆ ಬರುವಾಗ ತಂದು ಕೊಡುತ್ತೇವೆ ಎಂದು ಹೇಳಿದ್ದಾರೆ. ಮೃತ ದೇಹವನ್ನು ಸ್ವಗ್ರಾಮವಾದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದು, ಅಲ್ಲಿಯ ಗ್ರಾಮಸ್ಥರು ಅಂತ್ಯಕ್ರಿಯೆಯನ್ನು ಬೇಗ ಮುಗಿಸುಂತೆ ಹೇಳಿದ ಕಾರಣ ಆತುರಾತುರವಾಗಿ ಅಂತ್ಯಕ್ರಿಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶವವನ್ನು ತೊಳೆಯುವಾಗ ಆಕೆಯ ಮೈಮೇಲೆ ಆಗಿದ್ದ ಗಾಯಗಳು ಕಂಡು ಬಂದಿವೆ. ಆದರೂ ಊರಿನವರ ಒತ್ತಡಕ್ಕೆ ಮೃತ ದೇಹದ ಅಂತ್ಯ ಕ್ರಿಯೆಯನ್ನು ನಡೆಸಲಾಗಿದೆ.

ಆದರೆ ಅಂತ್ಯಕ್ರಿಯೆಗೆ ತಾಮರ ಹೆಲ್ತ್ ಸೆಂಟರ್’ನ ಯಾರೊಬ್ಬರು ಆಗಮಿಸಿಲ್ಲ. ಮಾತ್ರವಲ್ಲದೇ ಮೃತಳ ಫೋನ್ ಅನ್ನು ಮಾತ್ರ ಶವ ಹಸ್ತಾಂತರಿಸುವಾಗ ನೀಡಿದ ಮಾಲೀಕರು ನೀಡಿರುತ್ತಾರೆ.  ಶವ ಸಂಸ್ಕಾರದ ನಂತರ ಮೃತಳ ಫೋನ್ ಅನ್ನು ಕುಟುಂಬದವರು, ಪರಿಶೀಲಿಸಿದಾಗ ಫೋನ್ ಫ್ಲಾ ಶ್ ಮಾಡಲಾಗಿರುವುದು ತಿಳಿದು ಬರುತ್ತದೆ. ಪೋಷಕರ ನಂಬರ್ ಕೂಡ ಆ ಫೋನ್ ನಲ್ಲಿ ಸೇವ್ ಆಗಿರುವುದಿಲ್ಲ ಮತ್ತು ಫೋನಿನ ಪಾಸ್ ವರ್ಡ್ ತಿಳಿದಿದ್ದ ಮನೆಯವರು ಫೋನ್ ತೆರೆಯಲು ಪ್ರಯತ್ನಿಸಿದಾಗ, ಫೋನಿನ ಲಾಕ್ ಬದಲಾಯಿಸಲಾಗಿರುತ್ತದೆ. ಇದರಿಂದಾಗಿ ಪೋಷಕರಿಗೆ ಮಮತಾಳ ಸಾವು ಸಹಜ ಸಾವಲ್ಲ ಎಂಬುದು ಅರಿವಿಗೆ ಬರುತ್ತದೆ.

ಮಗಳ ಸಾವಿನ ದುಃಖದಿಂದ ಹೊರಬಂದ ನಂತರ ಕೆಲವು ಸಾಮಾಜಿಕ ಹೋರಾಟಗಾರರ ಸಹಕಾರದಿಂದ ಡಿಹೆಚ್’ಓ ಕಚೇರಿಗೆ ತೆರಳಿ ಮಗಳ ಕೆಲಸದ ಬಗ್ಗೆ ವಿವರವನ್ನು ಕಲೆ ಹಾಕಲು ಹೋದಾಗ ಅಲ್ಲಿ ಯಾವುದೇ ದಾಖಲೆಗಳು ಲಭ್ಯವಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಾಮರ ಹೆಲ್ತ್ ಸೆಂಟರ ಸರ್ಕಾರದಿಂದ ನೊಂದಾವಣೆಯಾಗಿರುವುದಿಲ್ಲ.  ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಕುಮಾರ್ ಸ್ವಾಮಿ ತಮ್ಮ ಕೊಠಡಿಯ ಹೊರಗೆ ಹೋಗಿ ಕುಳಿತು, ಲಿಖಿತ ದೂರು ನೀಡುವಂತೆ ಹೇಳಿ, ಕಳಿಸಿದ್ದಾರೆ. ಸದರಿ ಸಮಯದಲ್ಲಿ ಕೆ.ಪಿ.ಎಂ.ಇ ಘಟಕದ ಕಾನೂನು ಸಲಹೆಗಾರರಾದ ಸುಚಿತ್ರರವರಿಗೆ ಕರೆ ಮಾಡಲು ತಮ್ಮ ಸಿಬ್ಬಂದಿಗೆ ಹೇಳಿದ್ದಾರೆ.

ನಾಟಕೀಯ ಪ್ರಸಂಗವೆಂದರೆ, ಮಗಳ ಸಾವಿನ ದಿನದಿಂದ ಒಂದು ಕರೆಯನ್ನು ಮಾಡಿ ವಿಚಾರಿಸದ ತಾಮರ ಹೆಲ್ತ್ ಸೆಂಟರ್’ನ ಆಶಿಕ ಮಂದಣ್ಣ, ಜಿಲ್ಲಾಧಿಕಾರಿಗೆ ದೂರು ನೀಡಿದ ಹತ್ತು ನಿಮಿಷದಲ್ಲಿ ಮೃತಳ ತಾಯಿ ಮತ್ತು ತಂಗಿಗೆ ನಿರಂತರವಾಗಿ ದೂರವಾಣಿ ಕರೆ ಮಾಡುತ್ತಾರೆ ಮತ್ತು ಕರೆ ಸ್ವೀಕರಿಸುವಂತೆ ವಾಟ್ಸಪ್ ಸಂದೇಶಗಳನ್ನು ಕಳಿಸುತ್ತಾರೆ. ಈ ವೇಳೆ ಇಷ್ಟು ದಿನಗಳು ಕರೆ ಮಾಡದ ಆಕೆಯ ಕರೆಯನ್ನು ಸ್ವೀಕರಿಸದ ಕುಟುಂಬಸ್ಥರು ಡಿಹೆಚ್ ಓಗೆ ದೂರು ನೀಡಲು ಬಂದ ಸಮಯದಿಂದ ನಿರಂತರವಾಗಿ ಕರೆ ಬರುತ್ತಿರುವ ಬಗ್ಗೆ ಡಿ.ಹೆಚ್.ಓ ಕುಮಾರ ಸ್ವಾಮಿ ಬಗ್ಗೆ ಅನುಮಾನಗಳನ್ನು ವ್ಯಕ್ತ ಪಡಿಸಿರುತ್ತಾರೆ.

ಬಳಿಕ ಕಾರ್ಮಿಕ ಇಲಾಖೆಗೆ ತೆರಳಿ ಮಮತಾಳ ಕೆಲಸದ ದಾಖಲೆಯ ಮಾಹಿತಿ ಕೇಳಿದಾಗ ಅಲ್ಲಿಯೂ ಆಕೆಯ ಮಾಹಿತಿ ದೊರೆಯುವುದಿಲ್ಲ. ಇದರಿಂದಾಗಿ ತಾಮರ ಹೆಲ್ತ್ ಕೇರ್ ಮಮತಾಳ ಯಾವುದೇ ದಾಖಲೆಗಳನ್ನು ಆರೋಗ್ಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗೆ ತಾಮರ ಹೆಲ್ತ್ ಸೆಂಟರ್’ನವರು ನೀಡಿಲ್ಲ ಎಂಬುದು ತಿಳಿದುಬರುತ್ತದೆ. ಅಲ್ಲದೇ ಆರೋಗ್ಯ ಇಲಾಖೆ ಮತ್ತು ಕಾರ್ಮಿಕ ಇಲ್ಲಾಖೆಯವರು, ತಾಮರ ಹೆಲ್ತ ಕೇರ್’ಗೆ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ, ದಾಖಲೆಗಳನ್ನು ಹಾಗೂ ಅಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ಮಾಹಿತಿಯನ್ನು ಪಡೆಯದೇ, ಮೂಲಭೂತ ಸೌಕರ್ಯಗಳು ಸಮಪರ್ಕವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸದೇ ಇರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಸೋಮವಾರ ಆರೋಗ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆಯಲ್ಲಿ ನಡೆದ ಘಟನೆಗಳ ನಂತರ ಅನುಮಾನಗೊಂಡು ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಮಗಳ ಸಾವಿನ ಬಗ್ಗೆ ಅನುಮಾನವಿರುವುದಾಗಿ ಪೋಷಕರು ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ನಂತರ ಹೆಬ್ಬಾಳ ಪೊಲೀಸರು ಕೊಳ್ಳೆಗಾಲದ ತಹಶೀಲ್ದಾರ್ ಮತ್ತು ವಿಭಾಗಾಧಿಕಾರಿಗಳಿಗೆ ಪತ್ರ ಮುಖೇನ ಶವ ಪರೀಕ್ಷೆಗೆ ಪತ್ರವನ್ನು ಬರೆದಿದ್ದಾರೆ.

ಸಾವಿನ ಕುರಿತು ಹಲವು ಶಂಕೆ

ಮೃತ ಮಮತಾ 4ನೇ ಮಹಡಿಯ ಬಾತ್ ರೂಂನಲ್ಲಿ ತಲೆತಿರುಗಿ ಬಿದ್ದಿದ್ದಾಳೆ ಎಂದು ಹೇಳಿದ್ದು, ಅಲ್ಲಿದ್ದ  ರೋಗಿಗಳು ಕಿರುಚಿದರು ಎಂದು ಆಶಿಕ ಮಂದಣ್ಣ ತಿಳಿಸಿದ್ದಾರೆ. ಸದರಿ ಮಹಡಿಯಲ್ಲಿರುವುದು ಹಾಸಿಗೆ ಹಿಡಿದ ರೋಗಿಗಳಾಗಿದ್ದು (ಬೆಡ್ ರಿಡನ್), ಅವರು ಬಾತ್ ರೂಂನೊಳಗೆ ಬಂದು ನೋಡಲು ಹೇಗೆ ಸಾಧ್ಯ ?

4ನೇ ಮಹಡಿಯಿಂದ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋದವರು ಯಾರು ?

ಜಯದೇವದಂತಹ ಹೆಸರಾಂತ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾದ ವಿಷಯ. ರಾತ್ರಿ ಪಾಳಿಯ ವೈದ್ಯರು ಆಸ್ಪತ್ರೆಯಲ್ಲಿ ಇದ್ದೇ ಇರುತ್ತಾರೆ. ಅಲ್ಲಿಯೇ ಆಕೆ ಮೃತಪಟ್ಟಿದ್ದರೆ ಮರಣೋತ್ತರ ಪರೀಕ್ಷೆಯನ್ನು ಆ ಆಸ್ಪತ್ರೆಯಲ್ಲಿ ಯಾಕೆ ಮಾಡಲಿಲ್ಲ?

ತಲೆ ತಿರುಗಿ ಬಿದ್ದ ಮಾತ್ರಕ್ಕೆ ದೇಹದ ಭಾಗಗಳಲ್ಲಿ ತೀವ್ರ ಸ್ವರೂಪದ ಗಾಯಗಳಾಗಲು ಸಾಧ್ಯವಿಲ್ಲ. ಇದು ಆಕೆಯ ಮೇಲೆ ಹಲ್ಲೆ ನಡೆದಿರುವುದನ್ನು ಸ್ಪಷ್ಟಪಡಿಸುತ್ತದೆ.

ತಂಗಿ ರಾತ್ರಿ ಹಾಕಿದ ವಾಟ್ಸ್ ಅಪ್ ಸ್ಟೇಟಸ್ ನ್ನು 2 ಗಂಟೆಗೆ ಮಮತಾ ವೀಕ್ಷಿಸಿರುತ್ತಾಳೆ, ಅಂದರೆ ಅವರಿಬ್ಬರ ದೂರವಾಣಿ ಸಂಖ್ಯೆ ಇಬ್ಬರ ಫೋನ್ ಗಳಲ್ಲಿ ದಾಖಲಾಗಿರುತ್ತದೆ ಎಂಬುದು ಸತ್ಯಾಂಶ. ಮಮತಾಳ ಸಾವಿನ ನಂತರ ತಂಗಿಯ ನಂಬರ ಸೇರಿದಂತೆ ಸಂಪೂರ್ಣ ದಾಖಲೆಗಳನ್ನು ಅಳಿಸಿರುವುದು ಯಾರು  ಅಂದರೆ  ಆಕೆಯ ಫೋನ್ ಅನ್ನು ಹಸ್ತಾಂತರಿಸುವಾಗ ಫೋನ್ ಫ್ಲಾಶ್ ಮಾಡಿ ಕೊಡಲಾಗಿರುತ್ತದೆ. ಹಾಗಾದರೆ ಫೋನ್ ಫ್ಲಾಶ್ ಮಾಡಿದವರು ಯಾರು? ಮತ್ತು ಅದರ ಅವಶ್ಯಕತೆ ಏನಿತ್ತು?

ಆಕೆಯ ಫೋನ್ ಡಿಪಿ ಚಿತ್ರದಲ್ಲಿದ್ದ ವ್ಯವಸ್ಥಾಪಕ ನಿರ್ದೇಶಕ ಅಭಿ ತಲೆಮರೆಸಿಕೊಂಡಿರುವುದು ಯಾವ ಕಾರಣಕ್ಕೆ?

ತನ್ನ ಸಂಸ್ಥೆಯ ಸಿಬ್ಬಂದಿ ಮೃತ ಪಟ್ಟಿದ್ದರೂ ಅವಳ ಶವ ಸಂಸ್ಕಾರಕ್ಕೆ ಯಾಕೆ ಬರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಥೆಯ ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಂಸ್ಥೆಯಲ್ಲಿ ಏನು ನಡದೇ ಇಲ್ಲ ಎಂಬಂತೆ ರೀಲ್ಸ್ ಮಾಡಿ ವಿಕೃತ ಸಂತೋಷ ಪಡುತ್ತಿರುವುದು ಹಲವಾರು ಅನುಮಾನಗಳನ್ನು ಮೂಡಿಸುತ್ತದೆ.

ತನ್ನ ಕಛೇರಿಯಲ್ಲಿ ಸಿಬ್ಬಂದಿಯೊಬ್ಬರು ಅಸ್ವಾಭಾವಿಕ ಸಾವನಪ್ಪಿದಾರೂ ಸಂಸ್ಥೆಯ ಮಾಲೀಕರು ಪೊಲೀಸ್ ಠಾಣೆಗೆ ಮಾಹಿತಿಯನ್ನು ಯಾಕೆ ನೀಡಲಿಲ್ಲ.

ಸಂಜೀವಿನಿ ಆಂಬುಲೆನ್ಸ್ ವಾಹನದವರು ಶವವನ್ನು ಆಸ್ಪತ್ರೆಯಿಂದ ಬಂದ ನಂತರ ರಾತ್ರಿಪೂರ  ತಮ್ಮ ವಾಹನದಲ್ಲಿ ಇಟ್ಟುಕೊಂಡಿದ್ದೇಕೆ ಮತ್ತು ಸಂಬಂಧಿಕರಿಗೆ ತೋರಿಸಲು ವಿನಾಕಾರಣ ತಡ ಮಾಡಿದ್ದೇಕೆ.

ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸರು ತನಿಖೆ ನಡೆಸಿ, ಉತ್ತರ ನೀಡಬೇಕಾಗಿದೆ. ಪ್ರಕರಣವನ್ನು ಯಾರದೇ  ಒತ್ತಡಕ್ಕೂ ಮಣಿಯದೇ ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ಮಮತಾಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಕೂಡಲೇ ತಾಮರ ಹೆಲ್ತ್ ಸೆಂಟರ್’ಗೆ ಬೀಗ ಜಡಿದು ಇನ್ನಷ್ಟು ಅಸ್ವಾಭಾವಿಕ ಸಾವುಗಳನ್ನು ಮತ್ತು ಅಮಾಯಕ ಹೆಣ್ಣು ಮಕ್ಕಳ ಜೀವವನ್ನು ಕಾಪಾಡಬೇಕು ಎಂಬುದು ‘ಸವಾಲ್ ವಾಹಿನಿ’ಯ ಕಳಕಳಿಯ ಮನವಿಯಾಗಿದೆ.

ತಾಮರ ಹೆಲ್ತ್ ಕೇರ್ ಸಂಸ್ಥೆಗೂ ನನಗೂ ಯಾವುದೇ ಸಂಬಂಧವಿಲ್ಲ: ಹುಣಸೂರು ರಿಜೀಶ್ ಸ್ಪಷ್ಟನೆ: ತಾಮರ ಹೆಲ್ತ್ ಕೇರ್ ಸಂಸ್ಥೆಗೂ ನನಗೂ ಯಾವುದೇ ಸಂಬಂಧವಿಲ್ಲ. ನನಗೂ ತಾಮರ ಹೆಲ್ತ್ ಕೇರ್ ಸಂಸ್ಥೆಗೊ ಯಾವುದೇ ರೀತಿಯ ಪಾಲುದಾರಿಕೆಯಾಗಲಿ ಆಗಲಿ ಇಲ್ಲವೇ ಮಾಲೀಕತ್ವವಾಗಲಿ ಇರುವುದಿಲ್ಲ ಎಂದು ರಿಜೀಶ್ ಹುಣಸೂರು ಸ್ಪಷ್ಟನೆ ನೀಡಿದ್ದಾರೆ.

ಫೆ.20 ರಂದು ಸವಾಲ್ ವಾಹಿನಿಯಲ್ಲಿ ‘ತಾಮರ ಹೆಲ್ತ್ ಕೇರ್ ಸೆಂಟರ್ ನಲ್ಲಿ ಯುವತಿ ಸಾವು: ಕೊಲೆ ಶಂಕೆ’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ಸುದ್ದಿಯಲ್ಲಿ ಹುಣಸೂರು ರಿಜೀಶ್ ಅವರನ್ನು ಮಾಲೀಕರು ಎಂದು ತಿಳಿಸಲಾಗಿತ್ತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಮೈಸೂರು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಮಕ್ಷಮದಲ್ಲಿ ತಾಮರ ಹೆಲ್ತ್ ಕೇರ್ ಮಾಲೀಕರಾದ ಆಶಿಕಾ ಮಂದಣ್ಣ ಮತು ಅವರ ಪತಿಯಾದ ಮಂದಣ್ಣ ಅವರು, ಹುಣಸೂರಿನ ರಿಜೇಶ್ ಅವರನ್ನು ಸಂಸ್ಥೆಯ ಮಾಲೀಕರೆಂದು ಅಧಿಕಾರಿಗಳ ಸಮಕ್ಷಮದಲ್ಲಿ ತಿಳಿಸಿದ್ದರು.

ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ  ಹುಣಸೂರಿನ ರಿಜೇಶ್ ತಾನೂ ಪಾಲುದಾರನಲ್ಲ ಎಂದು ಆ ಸಮಯದಲ್ಲಿ ತಿಳಿಸಿರುವುದಿಲ್ಲ. ಅಧಿಕಾರಿಗಳು ಮತ್ತು  ಸಭೆಯಲ್ಲಿ ಭಾಗವಹಿಸಿದ್ದ ಕೆಲವು ಸಾರ್ವಜನಿಕರು ಸೇರಿದಂತೆ ಬಾತ್ಮಿದಾರರು ನೀಡಿದ ಹೇಳಿಕೆಯ ಆಧಾರದ ಮೇಲೆ ಸುದ್ದಿಯಲ್ಲಿ ಹುಣಸೂರಿನ ರಿಜೇಶ್ ಅವರನ್ನು ಮಾಲೀಕರು ಎಂದು ಸೇರಿಸಲಾಗಿತ್ತು. ಆದರೆ ಇಂದು ರಿಜೀಶ್ ಹುಣಸೂರು ಅವರು ವಾಹಿನಿಯ ಅಧೀಕೃತ ಇ-ಮೇಲ್ ಐಡಿಗೆ ಮತ್ತು ವಾಟ್ಸಪ್ ಸಂಖ್ಯೆಗೆ ಸ್ಪಷ್ಟನೆಯನ್ನು ಕಳುಹಿಸಿದ್ದಾರೆ.

ಸ್ಪಷ್ಟನೆ ಇಂತಿದೆ

ದಿನಾಂಕ 20 ಫೆಬ್ರವರಿ 2024 ರಂದು ಸವಾಲ್ ಮಾಧ್ಯಮದಲ್ಲಿ ನೀವು ಮಾಡಿರುವ ತಾಮರ ಹೆಲ್ತ್ ಕೇರ್ ಮೈಸೂರು ಈ ಸಂಸ್ಥೆಯ ಬಗ್ಗೆ ಮಾಡಿರುವ ಸುದ್ದಿಯಲ್ಲಿ ರಿಜೀಶ್ ಹುಣಸೂರು ಎಂಬ ನನ್ನನ್ನು ಈ ಸಂಸ್ಥೆಗೆ ಇವರು ಸಹ ಮಾಲೀಕರೆಂದು ಬಿಂಬಿಸಿರುತ್ತೀರಿ ಎಂದು ಛಾಯಾ ಚಿತ್ರದೊಂದಿಗೆ ಹೇಳಿರುತ್ತೀರಿ. ಇದು ಸತ್ಯಕ್ಕೆ ದೂರಾದ ಹೇಳಿಕೆಯಾಗಿದ್ದು, ನನಗೂ ತಾಮರ ಹೆಲ್ತ್ ಕೇರ್ ಸಂಸ್ಥೆಗೊ ಯಾವುದೇ ರೀತಿಯ ಶೇರ್ ಆಗಲಿ ಮಾಲಿಕತ್ವವಾಗಲಿ ಇರುವುದಿಲ್ಲ ಎಂದು ಈ ಮೂಲಕ ಖಚಿತಪಡಿಸುತ್ತಿದ್ದೇನೆ .

ಹುಣಸೂರು ರಿಜೇಶ್ ಅವರ ಹೇಳಿಕೆಯ ಆಧಾರದ ಮೇಲೆ ‘ತಾಮರ ಹೆಲ್ತ್ ಕೇರ್ ಸೆಂಟರ್ ನಲ್ಲಿ ಯುವತಿ ಸಾವು: ಕೊಲೆ ಶಂಕೆ’ ಸುದ್ದಿಯಲ್ಲಿ ಅವರ ಹೆಸರನ್ನು ಕೈಬಿಡಲಾಗಿರುತ್ತದೆ.

ಹಿಂದಿನ ಲೇಖನನಮ್ಮದು ಗುಡ್ ಎಕನಾಮಿಕ್ಸ್:  ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಅನೈತಿಕ ಸಂಬಂಧ ಶಂಕೆ: ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪತಿ