ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಹೈಕೋರ್ಟ್ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಸೋಮವಾರದಿಂದ ಜಾರಿಗೆ ಬರುವಂತೆ ಹೊಸ ಎಸ್‌ಒಪಿ ಹೊರಡಿಸಲಾಗಿದೆ. ಹೈಕೋರ್ಟ್ ಕಲಾಪಗಳಿಗೆ ಸಂಬಂಧಿಸಿದಂತೆ ನೂತನ ಎಸ್‌ಒಪಿ ಪ್ರಕಟಿಸಿ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದು, ಬೆಂಗಳೂರು ಪ್ರಧಾನ ಪೀಠದಲ್ಲಿ ಭೌತಿಕ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಅನ್ವಯವಾಗುವಂತೆ ಹೊರಡಿಸಲಾಗಿರುವ ನೂತನ ಮಾರ್ಗಸೂಚಿಗಳು ಫೆ.7ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿವೆ ಎಂದು ಹೇಳಲಾಗಿದೆ.
ಎಸ್ಒಪಿಯಲ್ಲಿರುವುದೇನು?
ಹೈಕೋರ್ಟ್‌ನ ಎಲ್ಲ ಪೀಠಗಳಲ್ಲೂ ವರ್ಚುವಲ್ ಹಾಗೂ ಭೌತಿಕ ಕಲಾಪಗಳು ನಡೆಯಲಿವೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ನಿಗದಿಯಾದ ಪ್ರಕರಣಗಳ ವಕೀಲರು ಹಾಗೂ ಪಾರ್ಟಿ-ಇನ್-ಪರ್ಸನ್‌ಗಳು ಕೋರ್ಟ್ ಆವರಣ ಪ್ರವೇಶಿಸಬಹುದು. ಕೋವಿಡ್ ನಿಯಮ ಪಾಲನೆ ಕಡ್ಡಾಯ. ನ್ಯಾಯಾಲಯದ ನಿರ್ದೇಶನವಿದ್ದರೆ ಅಥವಾ ಅನುಮತಿ ಇದ್ದರೆ ಮಾತ್ರ ಕಕ್ಷಿದಾರರು ಆ ಕುರಿತ ದಾಖಲೆ ತೋರಿಸಿ ಕೋರ್ಟ್ ಆವರಣ ಪ್ರವೇಶಿಸಬೇಕು.
ಪ್ರಕರಣಗಳನ್ನು ಇ-ಫೈಲಿಂಗ್ ಜತೆಗೆ ಭೌತಿಕವಾಗಿಯೂ ದಾಖಲಿಸಬಹುದು. ತುರ್ತು ವಿಚಾರಣೆ ಅಗತ್ಯವಿದ್ದಲ್ಲಿ ನಿಗದಿತ ಕೌಂಟರ್‌ನಲ್ಲಿ ಮೆಮೋ ಸಲ್ಲಿಸಬೇಕು. ನಿರೀಕ್ಷಣಾ ಜಾಮೀನು, ಜಾಮೀನು, ಪ್ರಕರಣ ರದ್ದತಿ ಕೋರಿ ಸಲ್ಲಿಸುವ ರಿಟ್ ಅರ್ಜಿಗಳು, ಕ್ರಿಮಿನಲ್ ಅಪೀಲ್ ಮತ್ತು ಕ್ರಿಮಿನಲ್ ರಿವಿಷನ್ ಅರ್ಜಿಗಳು, ಸಲ್ಲಿಕೆಯಾದ 4ನೇ ದಿನ ಪೀಠದ ಎದುರು ಬರಲಿವೆ. ಇತರ ರಿಟ್ ಅರ್ಜಿಗಳು ಹಾಗೂ ಸಿವಿಲ್ ಪ್ರಕರಣಗಳು 5ನೇ ದಿನ ಪೀಠದ ಎದುರು ನಿಗದಿಪಡಿಸಲಾಗುತ್ತದೆ. ಕೋರ್ಟ್ ಶುಲ್ಕವನ್ನು ಹೈಕೋರ್ಟ್ ವೆಬ್‌ಸೈಟ್ ಮುಖಾಂತರ ಆನ್‌ಲೈನ್ ಮೂಲಕ ಹಾಗೂ ನೇರವಾಗಿ ಕೌಂಟರ್‌ನಲ್ಲಿಯೂ ಪಾವತಿಸಬಹುದಾಗಿದೆ. ವಕೀಲರ ಸಂಘ ಹಾಗೂ ಕ್ಯಾಂಟೀನ್‌ಗೆ ಅನುಮತಿ ನೀಡಲಾಗಿದೆ. ಕೋರ್ಟ್ ಹಾಲ್ಗಳಲ್ಲಿ ಲಭ್ಯವಿರುವ ಕುರ್ಚಿಗಳಲ್ಲಿ ಶೇ. 50 ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವಿಚಾರಣಾ ಕೋರ್ಟ್‌ಗಳಿಗೆ ಪ್ರತ್ಯೇಕ ಎಸ್‌ಒಪಿ
ಎಲ್ಲ ನ್ಯಾಯಾಲಯಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಮೊದಲಿನಂತೆ ಕಾರ್ಯನಿರ್ವಹಿಸಬಹುದಾಗಿದೆ. ಆದರೆ, ಕಕ್ಷಿದಾರರು ಅನಗತ್ಯವಾಗಿ ಕೋರ್ಟ್‌ಗೆ ಬರದಂತೆ ವಕೀಲರು ನೋಡಿಕೊಳ್ಳಬೇಕು. ಕೋರ್ಟ್ ಸಂಕೀರ್ಣ ಪ್ರವೇಶಿಸುವ ಪ್ರತಿಯೊಬ್ಬರೂ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಬೇಕು. ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಂಥವರ ಪ್ರವೇಶ ನಿರ್ಬಂಧಿಸಬೇಕು. ಪ್ರತಿ ಕಾರಿಡಾರ್‌ನಲ್ಲಿ ಸ್ಯಾನಿಟೈಸರ್ ಇರುವಂತೆ ನೋಡಿಕೊಳ್ಳಬೇಕು. ಮಾಸ್ಕ್‌ಗಳನ್ನು ಸರಿಯಾಗಿ ಧರಿಸದ ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳದ ವ್ಯಕ್ತಿಗಳನ್ನು ಕೋರ್ಟ್ ಸಂಕೀರ್ಣದಿಂದ ಹೊರ ಕಳುಹಿಸುವ ಅಧಿಕಾರವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಥವಾ ಕೋರ್ಟ್‌ನ ಹಿರಿಯ ನ್ಯಾಯಾಧೀಶರು ಹೊಂದಿರುತ್ತಾರೆ. ಪ್ರಕರಣಗಳನ್ನು ಇ-ಫೈಲಿಂಗ್ ಜತೆಗೆ ಭೌತಿಕವಾಗಿಯೂ ದಾಖಲಿಸಬಹುದು. ತುರ್ತು ವಿಚಾರಣೆ ಅಗತ್ಯವಿದ್ದಲ್ಲಿ ನಿಗದಿತ ಕೌಂಟರ್‌ನಲ್ಲಿ ಮೆಮೋ ಸಲ್ಲಿಸಬೇಕು.