ಮನೆ ಕಾನೂನು ಮಾನಹಾನಿ ಹೇಳಿಕೆ: ಆರೋಗ್ಯ ಸಚಿವ ಸುಧಾಕರ್ ವಿರುದ್ಧದ ವಿಚಾರಣೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಮಾನಹಾನಿ ಹೇಳಿಕೆ: ಆರೋಗ್ಯ ಸಚಿವ ಸುಧಾಕರ್ ವಿರುದ್ಧದ ವಿಚಾರಣೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

0

ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದ ಆರೋಪದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ವಿರುದ್ಧ ನಡೆಯುತ್ತಿರುವ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಪ್ರಶ್ನಿಸಿ ಡಾ. ಕೆ ಸುಧಾಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿರುವ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು ಅರ್ಜಿದಾರರ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಅಲ್ಲದೆ, ಅರ್ಜಿದಾರರು ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ. ಆದರೂ ತಮ್ಮ ಕಕ್ಷಿದಾರರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಲಾಗಿದೆ ಎಂದರು.

ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಆಂಜನೇಯ ರೆಡ್ಡಿ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಆದರೂ ಅವರು ತಮ್ಮ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬುದಾಗಿ ಊಹೆ ಮಾಡಿಕೊಂಡು ನಮ್ಮ ಕಕ್ಷಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ಪ್ರಕರಣ ರದ್ದು ಮಾಡಬೇಕು ಎಂದು ವಾದಿಸಿದರು.

ಪ್ರಕರಣದ ಹಿನ್ನೆಲೆ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ  ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಶಾಸಕ ಡಾ. ಕೆ ಸುಧಾಕರ್ ಅವರನ್ನು ನೇಮಿಸಲಾಗಿತ್ತು. ಶಾಸಕರ ಅರ್ಹತೆ ಮತ್ತು ಮಾನದಂಡ ಪ್ರಶ್ನಿಸಿ ಆಂಜನೇಯ ರೆಡ್ಡಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ನಡುವೆ, ಸುಧಾಕರ್ ಅವರು ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ರೈತರಿಗೆ ಕಳ್ಳಬಟ್ಟಿ ಕುಡಿಸಿ ಜೈಲು ಸೇರಿದ್ದ ವ್ಯಕ್ತಿ ತನ್ನ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ರೀತಿಯ ಹೇಳಿಕೆ ನೀಡುವ ಮೂಲಕ ತನ್ನನ್ನು ತೇಜೋವಧೆ ಮಾಡಲಾಗಿದೆ ಎಂದು ಆಂಜನೇಯ ರೆಡ್ಡಿ ನ್ಯಾಯಾಲಯದಲ್ಲಿ ಸುಧಾಕರ್ ಮತ್ತು ಎರಡು ಮಾಧ್ಯಮಗಳ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಚಿವ ಸುಧಾಕರ್ಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಕೋರಿ ಸುಧಾಕರ್ ಅವರು ಹೈಕೋರ್ಟ್’ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.