ಬೆಂಗಳೂರು : ಬೆಂಗಳೂರು ನಗರದ ಹೆಚ್‌ಬಿಆರ್ ಬಡಾವಣೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಪತ್ನಿ ಶಾಲಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರ ರಾತ್ರಿ ಮನೆಯೊಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಳಕಲ್ ಮೂಲದ ಶಾಲಿನಿ ಮತ್ತು ನಾಗರಾಜ್ ಹೈಸ್ಕೂಲ್ ದಿನಗಳಿಂದಲೂ ಪರಸ್ಪರ ಪರಿಚಿತರಾಗಿದ್ದು, ಇಬ್ಬರೂ ಟ್ಯೂಷನ್ ಮೆಟ್ಸ್ ಆಗಿದ್ದರು. ಕಾಲಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿ, ಶಾಲಿನಿ ಮೊದಲ ಪತಿಗೆ ವಿಚ್ಛೇದನ ನೀಡುವವರೆಗೂ ವಿಷಯ ಮುಂದುವರಿಯಿತು. ನಂತರ ನಾಗರಾಜ್‌ನನ್ನು 2024ರ ಆಗಸ್ಟ್‌ನಲ್ಲಿ ಮದುವೆಯಾಗಿ, ಇಬ್ಬರೂ ಹೆಚ್‌ಬಿಆರ್ ಲೇಔಟ್‌ನಲ್ಲಿ ವಾಸ ಮಾಡುತ್ತಿದ್ದರು. ಶಾಲಿನಿಗೆ ಈಗ 7 ವರ್ಷದ ಮಗು ಇದ್ದು, ಕುಟುಂಬದ ಪ್ರತಿ ಜವಾಬ್ದಾರಿ ಆಕೆಯ ಮೇಲೇ ಇದ್ದಿತು.
2020ರಲ್ಲಿ ಪಿಎಸ್‌ಐ ಪರೀಕ್ಷೆ ಪಾಸಾದ ನಾಗರಾಜ್, ಕುಟುಂಬದಿಂದ ದೂರ ಸರಿದರೆಂದು ಆರೋಪಗಳಿವೆ. ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಕಳೆದೆರಡು ತಿಂಗಳಿನಿಂದ ನಾಗರಾಜ್ ಬೇರೆಡೆ ವಾಸಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಶಾಲಿನಿ ಕೊನೆಯ ಬಾರಿ ಕರೆ ಮಾಡಿ ರೈಲಿಗೆ ಸಿಕ್ಕಿ ಸಾವನ್ನಪ್ಪುವುದಾಗಿ ಹೇಳಿದ್ದಳು. ಈ ವೇಳೆ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಮನೆಗೆ ಬಿಟ್ಟು ತೆರಳಿದ್ದರು. ಆದ್ರೆ, ಹೊಯ್ಸಳ ಸಿಬ್ಬಂದಿ ಮನೆಗೆ ಬಿಟ್ಟು ತೆರಳುತ್ತಿದ್ದಂತೆ ಶಾಲಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಲಿನಿ, ಮುಂಚೆಯೇ ನಾಗರಾಜ್ ವಿರುದ್ಧ ಮದುವೆಯಾಗದೆ ಮೋಸ ಮಾಡಿದಾನೆ ಎಂಬ ಆರೋಪದಡಿ ಕೋಣನಕುಂಟೆ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ, ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆ ಮೂಲಕ ವಿಚಾರ ಬಗೆಹರಿಸಲಾಗಿತ್ತು. ದಾಂಪತ್ಯಕ್ಕೆ ಪರಿವಾರದ ವಿರೋಧವಿದ್ದರೂ ಸಹ, ಎರಡನೇ ಮದುವೆಯ ನಿರ್ಧಾರ ತೆಗೆದುಕೊಂಡಿದ್ದ ಶಾಲಿನಿಯ ಆತ್ಮಹತ್ಯೆ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಕುರಿತು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್‌ಪೆಕ್ಟರ್ ನಾಗರಾಜ್‌ನನ್ನು ಹಿರಿಯ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಆತ್ಮಹತ್ಯೆಗೆ ನೈಜ ಕಾರಣಗಳೇನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.