ಬೆಂಗಳೂರು: ರಾಜ್ಯದಲ್ಲೇ ಭಾರಿ ಕುತೂಹಲ ಮೂಡಿಸಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜಯಭೇರಿ ಬಾರಿಸಿದ್ದಾರೆ.
ಪೆನ್ ಡ್ರೈವ್ ಪ್ರಕರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿರುವ , ಪಕ್ಷದಿಂದಲೂ ಅಮಾನತಾಗಿರುವ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದರೆ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಆ ಗೊಂದಲಕ್ಕೆ ಈಗ ತೆರೆ ಬಿದ್ದಿದೆ.
ಮಂಡ್ಯದಲ್ಲಿ ಮಾಜಿ ಸಿಎಂ ಎಚ್. ಡಿ. ಕುಮಾರ ಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಸ್ಪರ್ಧಿಸಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ನಿರೀಕ್ಷೆಯಂತೆ ಎರಡು ಕ್ಷೇತ್ರ ತನ್ನದಾಗಿಸಿಕೊಂಡಿದೆ.
ಸಂಡೂರು ಶಾಸಕ ಇ. ತುಕಾರಾಂ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ತುಕಾರಾಂ ಅವರು ಜಯ ಸಾಧಿಸಿರುವುದರಿಂದ ಸಂಡೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ರಣತಂತ್ರ ನಡೆಸಿ ಹಾಲಿ ಶಾಸಕ ತುಕಾರಾಂ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಚಾಮರಾಜನಗರದಲ್ಲಿ ಸಚಿವ ಎಚ್. ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರು ಬಿಜೆಪಿ ಅಭ್ಯರ್ಥಿ ಬಾಲರಾಜ್ ವಿರುದ್ಧ ಜಯ ಸಾಧಿಸಿದ್ದಾರೆ. ಕ್ಷೇತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ವರುಣ ಕ್ಷೇತ್ರವೂ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವುದು ಇದಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ ಕರ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.