ಮನೆ ರಾಷ್ಟ್ರೀಯ ದೆಹಲಿ ಅಬಕಾರಿ ನೀತಿ ಹಗರಣ: ವೈಎಸ್’ಆರ್ ಕಾಂಗ್ರೆಸ್ ಸಂಸದರ ಪುತ್ರ ಇಡಿ ವಶಕ್ಕೆ

ದೆಹಲಿ ಅಬಕಾರಿ ನೀತಿ ಹಗರಣ: ವೈಎಸ್’ಆರ್ ಕಾಂಗ್ರೆಸ್ ಸಂಸದರ ಪುತ್ರ ಇಡಿ ವಶಕ್ಕೆ

0

ಆಂಧ್ರಪ್ರದೇಶ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವೈಎಸ್‌’ಆರ್‌ ಕಾಂಗ್ರೆಸ್‌’ನ ಒಂಗೋಲ್ ಕ್ಷೇತ್ರದ ಸಂಸದ ಶ್ರೀನಿವಾಸುಲು ರೆಡ್ಡಿ ಅವರ ಮಗ ರಾಘವ ರೆಡ್ಡಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ.ಕವಿತಾ ಅವರೊಂದಿಗೆ ಇವರೂ ಸಹ ‘ಇಂಡೊಸ್ಪಿರಿಟ್’ ಕಂಪನಿಯ ಮಾಲೀಕರಾಗಿದ್ದಾರೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದೆ.

ಮದ್ಯದ ವ್ಯಾಪಾರಿ ಅರುಣ್ ರಾಮಚಂದ್ರ ಪಿಳ್ಳೈ ಅವರೊಂದಿಗೆ ಕವಿತಾ ವ್ಯವಹಾರ ನಡೆಸುತ್ತಿದ್ದಾರೆ. ಈ ವ್ಯಕ್ತಿ ಕವಿತಾ ಅವರ ಬೇನಾಮಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಇದೇ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಇಡಿ ಅಧಿಕಾರಿಗಳು ಮಾಗುಂಟ ರಾಘವ ಅವರನ್ನು ಬಂಧಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಮದ್ಯದ ದಂಧೆಗೆ ಸಂಬಂಧಿಸಿದಂತೆ ಮಾಗುಂಟ ಶ್ರೀನಿವಾಸಲು ರೆಡ್ಡಿ ಅವರನ್ನು ಭೇಟಿ ಮಾಡಿದ್ದನ್ನು ಇಡಿ ಈ ಪ್ರಕರಣದಲ್ಲಿ ಉಲ್ಲೇಖಿಸಿದೆ.

ಈಗಾಗಲೇ ಈ ಹಗರಣದಲ್ಲಿ ಇಡಿ ಇದುವರೆಗೆ ಎರಡು ಚಾರ್ಜ್ ಶೀಟ್ ದಾಖಲಿಸಿ, ಒಟ್ಟು ಒಂಬತ್ತು ಜನರನ್ನು ಬಂಧಿಸಿದೆ.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸರ್ಕಾರದ ಇತರ ಅಬಕಾರಿ ಅಧಿಕಾರಿಗಳನ್ನು ಸಿಬಿಐ ಮತ್ತು ಇಡಿ ಅಧಿಕಾರಿಗಳು ಆರೋಪಿಗಳೆಂದು ಉಲ್ಲೇಖಿಸಿದೆ.

ರಾಘವ ಮಾಗುಂಟ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್’ಎ) ಅಡಿಯಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ವರದಿ ತಿಳಿಸಿದೆ.