ಜೈವಿಕ ತಂದೆಯ (ಗಂಡನ) ವೀರ್ಯದ ಮಾದರಿ ಬಳಸದೆ ತಮ್ಮ ಅವಳಿ ಮಕ್ಕಳ ಗರ್ಭಾಂಕುರ ಮಾಡಲಾಗಿದೆ ಎಂದು ಸುಮಾರು 15 ವರ್ಷಗಳ ನಂತರ ತಿಳಿದು ಬಂದ ಮಹಿಳೆ ಮತ್ತು ಆಕೆಯ ಪತಿಗೆ ತಿಳಿದುಬಂದ ಹಿನ್ನೆಲೆಯಲ್ಲಿ ತಪ್ಪೆಸಗಿದ ಪಶ್ಚಿಮ ದೆಹಲಿಯ ಆಸ್ಪತ್ರೆಯೊಂದಕ್ಕೆ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ (ಎನ್ ಸಿಡಿಆರ್ ಸಿ) ₹1.5 ಕೋಟಿ ದಂಡ ವಿಧಿಸಿದೆ.
ಎನ್ ಸಿಡಿಆರ್ ಸಿ ಅಧ್ಯಕ್ಷಿಯ ಸದಸ್ಯ ಡಾ ಎಸ್ ಎಂ ಕಾಂತಿಕರ್ ಅವರು ಈಚೆಗೆ ಆದೇಶ ಜಾರಿಗೊಳಿಸಿದ್ದು ಈ ವೇಳೆ ಅವರು ʼಬಂಜೆತನದ ಸಮಸ್ಯೆ ಇರುವ ದಂಪತಿಗೆ ಸಹಾಯ ಮಾಡುವ ಉದ್ದೇಶದಿಂದ ದೇಶದಲ್ಲಿ ತಲೆಎತ್ತಿರುವ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ಎಆರ್ ಟಿ) ಚಿಕಿತ್ಸಾಲಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ದಾನಪಡೆದ ವೀರ್ಯ ಬಳಸುವಾಗ ರೋಗಿಯ ಅರಿವಿಗೂ ಬಾರದಂತೆ ಅದಲು ಬದಲು ನಡೆಯುತ್ತಿದೆ. ನಾಯಿಕೊಡೆಗಳಂತೆ ತಲೆ ಎತ್ತಿರುವ ಎಆರ್ ಟಿ ಚಿಕಿತ್ಸಾಲಯಗಳು ರೋಗಿಗಳಿಗೆ ದೋಷಪೂರಿತ ಚಿಕಿತ್ಸೆ ನೀಡುತ್ತಿವೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ.
“ಕ್ಲಿನಿಕ್ನ ಯಶಸ್ಸಿನ ಪ್ರಮಾಣ ಹೆಚ್ಚಿಸಲು ಸೂಚನೆ ಇಲ್ಲದಿದ್ದಾಗಲೂ ಎಆರ್ಟಿ ಚಿಕಿತ್ಸಾಲಯಗಳು ದಾನಿಗಳಿಗಾಗಿ ಬಹಬೇಗ ಹಾತೊರೆಯುತ್ತವೆ. ಎಆರ್ ಟಿ ತಜ್ಞರಿಗೆ ಅಂಡೋತ್ಪತ್ತಿ ಮತ್ತು ಸಂತಾನೋತ್ಪತ್ತಿ ವಿಜ್ಞಾನದ ಕುರಿತು ಸೂಕ್ತ ಜ್ಞಾನದ ಅಗತ್ಯವಿದೆ. ಆಳ ಜ್ಞಾನ ಇಲ್ಲದ ಸಾಮಾನ್ಯ ಸ್ತ್ರೀ ರೋಗ ತಜ್ಞರು ಕೂಡ ಹಣ ದೊರೆಯುತ್ತದೆ ಎಂದು ಭಾವಿಸಿ ಇಂತಹ ಕ್ಲಿನಿಕ್ಗಳನ್ನು ತೆರೆಯುತ್ತಾರೆ… ಮೇಲಾಗಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಚಿಕಿತ್ಸಾಲಯಗಳು ನಮ್ಮ ದೇಶದಲ್ಲಿ ಅತಿರೇಕದ ಅನೈತಿಕ ನಡೆಗೆ ಕಾರಣವಾಗಿವೆ… ಬಂಜೆತನದ ರೋಗಿಗಳು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ದೋಷಪೂರಿತ ಚಿಕಿತ್ಸೆ ಇದನ್ನು (ಈ ಒತ್ತಡವನ್ನು) ಹೆಚ್ಚಿಸುತ್ತದೆ” ಎಂದು ಎನ್ಸಿಡಿಆರ್ಸಿ ಆದೇಶ ತಿಳಿಸಿದೆ.
ಮಕ್ಕಳನ್ನು ಪಡೆಯುವುದಕ್ಕಾಗಿ 2008 ರಲ್ಲಿ ನವದೆಹಲಿಯಲ್ಲಿರುವ ಭಾಟಿಯಾ ಗ್ಲೋಬಲ್ ಹಾಸ್ಪಿಟಲ್ ಮತ್ತು ಎಂಡೋಸರ್ಜರಿ ಸಂಸ್ಥೆಯನ್ನು ದಂಪತಿ ಸಂಪರ್ಕಿಸಿದ್ದರು. ಚಿಕಿತ್ಸೆಯ ನಂತರ, ಮಹಿಳೆ 2009ರಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಈ ಎರಡು ಮಕ್ಕಳ ಜೈವಿಕ ತಂದೆ ತನ್ನ ಪತಿ ಎಂದು ಅವರು ಭಾವಿಸಿದ್ದರು. ಆದರೆ ಒಂದು ಮಗುವಿನ ರಕ್ತದ ಗುಂಪು ಪೋಷಕರಲ್ಲಿ ಅನುಮಾನ ಮೂಡಿಸಿ ದಂಪತಿಯ ಪಿತೃತ್ವ ಪರೀಕ್ಷೆ ನಡೆಸುವಂತೆ ಮಾಡಿತು. ಪಿತೃತ್ವ ಪರೀಕ್ಷೆಯಲ್ಲಿ ಮಗುವಿನ ಜೈವಿಕ ತಂದೆ ಬೇರೊಬ್ಬರು ಎಂದು ತಿಳಿದುಬಂದಿತ್ತು.
ಈ ಹಿನ್ನೆಲೆಯಲ್ಲಿ ಸೇವೆಯಲ್ಲಿನ ನಿರ್ಲಕ್ಷ್ಯ ಮತ್ತು ಲೋಪಕ್ಕಾಗಿ ₹2 ಕೋಟಿ ಪರಿಹಾರ ನೀಡುವಂತೆ ದಂಪತಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗೆ ವೀರ್ಯ ಮಿಶ್ರಣ ಮಾಡಿದ್ದು ಭಾವನಾತ್ಮಕ ಒತ್ತಡ, ಕೌಟುಂಬಿಕ ಭಿನ್ನಾಭಿಪ್ರಾಯ ಹಾಗೂ ತಳಿ ಅನುವಂಶಿಕವಾಗಿ ಬರುವ ರೋಗಗಳ ಭೀತಿ ಸೃಷ್ಟಿಸಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು.
ಆಸ್ಪತ್ರೆ ವಿರುದ್ಧ ಸ್ಪಷ್ಟ ವಾದ ಮಂಡನೆಯಾಗಿದ್ದು ಆಸ್ಪತ್ರೆ ಅನ್ಯಾಯದ ವ್ಯಾಪಾರಾಭ್ಯಾಸದಲ್ಲಿ ತೊಡಗಿಕೊಂಡಿರುವಂತೆ ತೋರುತ್ತದೆ ಎಂಬುದಾಗಿ ಎನ್ಸಿಡಿಆರ್ಸಿ ತೀರ್ಪಿನಲ್ಲಿ ದಾಖಲಿಸಿದೆ. “ನಿಸ್ಸಂಶಯವಾಗಿ ಮತ್ತೆ ಮರಳಿ ತರಲಾಗದಂತೆ ವಂಶಾವಳಿಯನ್ನು ಬದಲಿಸಲಾಗಿದೆ. ದಂಪತಿ ಕಳಂಕ ಹೊತ್ತು ನಡೆಯಬೇಕಾಗಬಹುದು ಮತ್ತು ಭವಿಷ್ಯದಲ್ಲೂ ತೊಂದರೆಗಳನ್ನು ಎದುರಿಸಬಹುದು” ಎಂದು ಅದು ಹೇಳಿದೆ.
ಅಧಿಕಾರಿಗಳು ತ್ವರಿತ ಮತ್ತು ನಿಗದಿತ ಕಾಲಾವಧಿಯಲ್ಲಿ ಎಆರ್ ಟಿ ಕ್ಲಿನಿಕ್ ಗಳಿಗೆ ಮಾನ್ಯತೆ ನೀಡಬೇಕು. ಅಲ್ಲದೆ ಇಂತಹ ಕ್ಲಿನಿಕ್ ಗಳು ಎಆರ್ ಟಿ ಪ್ರಕ್ರಿಯೆ ಮೂಲಕ ಜನಿಸಿದ ಶಿಶುಗಳ ಡಿಎನ್ಎ ಪ್ರೊಫೈಲ್ ನೀಡುವುದನ್ನು ಕಡ್ಡಾಯಗೊಳಿಸಬೇಕು ಎಂದು ವೇದಿಕೆ ಶಿಫಾರಸು ಮಾಡಿದೆ.














