ನವ ದೆಹಲಿ: ದಟ್ಟ ಮಂಜು ಕವಿದ ಕಾರಣ ಇಂದು ಮಂಗಳವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ಸಂಚಾರ ಪಥವನ್ನು ಬದಲಿಸಲಾಗಿದ್ದು, ಸುಮಾರು 30 ವಿಮಾನಗಳ ಹಾರಾಟ ವಿಳಂಬವಾಗಿವೆ.
ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನ ತಲಾ ಒಂದು ವಿಮಾನವನ್ನು ಜೈಪುರಕ್ಕೆ ಕಳುಹಿಸಲಾಗಿದೆ. ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 30 ವಿಮಾನಗಳು ಹಾರಾಟದಲ್ಲಿ ವಿಳಂಬವಾಗಿವೆ.
ಈ ಕುರಿತು ಟ್ವೀಟ್ ಮಾಡಿರುವ, ದೆಹಲಿ ವಿಮಾನ ನಿಲ್ದಾಣದ ಟ್ವಿಟ್ಟರ್ ಪೇಜ್ ನಲ್ಲಿ, ಇಂದು ಬೆಳಗಿನ ಜಾವ 7.30ರ ಸುಮಾರಿಗೆ ಮಂಜು ದಟ್ಟವಾಗಿ ಕವಿದು ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮತ್ತು ಟೇಕ್‌ಆಫ್‌ಗಳು ವೇಳೆ, ಕ್ಯಾಟ್ III ಅನುಸರಣೆ ಆಗದ ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.
ವಾತಾವರಣದಲ್ಲಿ ದಟ್ಟ ಮಂಜು ಕವಿದಾಗ ಗೋಚರ ಸ್ಪಷ್ಟವಾಗಿಲ್ಲದಿರುವಾಗ ಹಾರಾಟ ನಡೆಸುವ ವಿಮಾನಗಳು ಕ್ಯಾಟ್ III ವಿಮಾನಗಳಾಗಿವೆ.
ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ. ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲತೆಗೆ ತೀವ್ರವಾಗಿ ವಿಷಾದಿಸುತ್ತೇವೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (DIAL) ಟ್ವಿಟ್ಟರ್ ನಲ್ಲಿ ತಿಳಿಸಿದೆ.