ಮನೆ ಕಾನೂನು ಆಶ್ರಯ ಶಿಬಿರಗಳ ದಯನೀಯ ಸ್ಥಿತಿ: ಅಸ್ಸಾಂ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ, ಜಾನುವಾರಗಳಂತೆ ಇರಿಸಿದ್ದೀರಿ ಎಂದು ಬೇಸರ

ಆಶ್ರಯ ಶಿಬಿರಗಳ ದಯನೀಯ ಸ್ಥಿತಿ: ಅಸ್ಸಾಂ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ, ಜಾನುವಾರಗಳಂತೆ ಇರಿಸಿದ್ದೀರಿ ಎಂದು ಬೇಸರ

0

ಅಸ್ಸಾಂನಲ್ಲಿ ತೆರವು ಕಾರ್ಯಾಚರಣೆ ಬಳಿಕ ನಿರಾಶ್ರಿತರಾಗಿ ಆಶ್ರಯ ಶಿಬಿರಗಳಲ್ಲಿ ದಿನದೂಡುತ್ತಿರುವ ಒಂದು ಸಮುದಾಯಕ್ಕೆ ಸೇರಿದ ಮಕ್ಕಳು ಮತ್ತು ಕುಟುಂಬಗಳ ದಯನೀಯ ಸ್ಥಿತಿಯನ್ನು ಕಂಡ ಗುವಾಹಟಿ ಹೈಕೋರ್ಟ್ ಶುಕ್ರವಾರ ಅಸ್ಸಾಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ .

Join Our Whatsapp Group

[ತಾತ್ಕಾಲಿಕ ಆಶ್ರಯ ಗೃಹಗಳಲ್ಲಿ ವಾಸಿಸುತ್ತಿರುವ ಮಕ್ಕಳ ಬಗೆಗಿನ ಸ್ವಯಂಪ್ರೇರಿತ ಅರ್ಜಿ].

ಅಂತಹ ಒಂದು ಶಿಬಿರದ ಸ್ಥಿತಿ ಬಗ್ಗೆ ಅಮಿಕಸ್ ಕ್ಯೂರಿಯಾದ ಹಿರಿಯ ವಕೀಲ ಬಿ ಡಿ ಕೊನ್ವಾರ್ ಅವರು ನೀಡಿದ ವರದಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆ) ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಮೃದುಲ್ ಕುಮಾರ್ ಕಲಿತಾ ಅವರಿದ್ದ ಪೀಠ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿತು.

“ಅತ್ಯಂತ ದುರದೃಷ್ಟಕರ ಸಂಗತಿ ಎಂದರೆ, ಈ ಪಟ್ಟಿ ನೋಡಿ, ಒಂದೇ ಸಮುದಾಯಕ್ಕೆ ಸೇರಿದ ಎಲ್ಲರೂ ಟಾರ್ಪಾಲಿನ್ನಿಂದ ನಿರ್ಮಿಸಿದ ತಾತ್ಕಾಲಿಕ ಮನೆಗಳಲ್ಲಿದ್ದಾರೆ. ನೀವು ಜಾನುವಾರುಗಳಂತೆ ಜನರನ್ನು ಎಷ್ಟು ದಿನ ಇರಿಸಲು ಸಾಧ್ಯ? ನಿಮ್ಮ ಮಗು (ಇಲ್ಲಿ) ವಾಸಿಸುವ ಬಗ್ಗೆ ಯೋಚಿಸಿ, ಅದನ್ನು ಊಹಿಸಿಕೊಳ್ಳಲಾದರೂ ನಿಮಗೆ ಸಾಧ್ಯವೇ?” ಎಂದು ಮುಖ್ಯ ನ್ಯಾಯಮೂರ್ತಿಗಳು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದರು.

ಅರಣ್ಯ ಪ್ರದೇಶ ಅತಿಕ್ರಮಿಸಿಕೊಂಡರೆ ತೆರವುಗೊಳಿಸುವ ಅಗತ್ಯವಿದೆ ಎಂಬುದನ್ನು ಒಪ್ಪಿದ ನ್ಯಾಯಾಲಯ ಅಲ್ಲಿಂದ ಸ್ಥಳಾಂತರಗೊಂಡವರಿಗೆ ಪುನರ್ವಸತಿ ಕಲ್ಪಿಸುವ ಕುರಿತಂತೆ ಸರ್ಕಾರ ಯೋಜನೆ ರೂಪಿಸಬೇಕಿತ್ತು ಎಂದು ಬುದ್ಧಿಮಾತು ಹೇಳಿತು.

“ಈ ವಿಷಯಗಳಲ್ಲಿ ಅಮಾನವೀಯವಾಗಿ ವರ್ತಿಸಲು ಸಾಧ್ಯವಿಲ್ಲ. ಇದು ಅತ್ಯಂತ ಕಟುವಾದ ಅಮಾನವೀಯತೆಯಾಗಿದೆ. ಇದು ಮಾನವ ಸಂಕಷ್ಟದ ಬಗೆಗಿನ ಸಂಗತಿ, ಈ ವಿಚಾರದ ಬಗ್ಗೆ ಸಂವೇದನಾಶೀಲರಾಗಿರಬೇಕು” ಎಂದು ಸಿಜೆ ಹೇಳಿದರು.

ವಿಚಾರಣೆ ವೇಳೆ ಅಮಿಕಸ್ ಅವರು ಕೆಲ ಶಿಬಿರಗಳ ಸ್ಥಿತಿ ದನದ ಕೊಟ್ಟಿಗೆಗಳಿಗಿಂತ ಕಡೆಯಾಗಿದೆ ಎಂದರು.  ಶುದ್ಧ ಕುಡಿಯು ನೀರಿನ ಕೊರತೆಯನ್ನು ಎತ್ತಿ ತೋರಿಸಿದರು. ಈಗ ಸರಬರಾಜು ಮಾಡುತ್ತಿರುವ ನೀರಿನಲ್ಲಿ ಯಥೇಚ್ಛ ಕಬ್ಬಿಣದ ಅಂಶ ಇದೆ ಎಂದು ವಿವರಿಸಿದರು. ಆಗ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಡಿ ನಾಥ್ ಅವರು ಪ್ರತಿಕ್ರಿಯಿಸಿ ಯಾವುದೇ ಕಾಯಿಲೆ ಬಂದರೂ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದು ಸಮಜಾಯಿಷಿ ನೀಡಿದರು.

ಈ ಮಾತಿನಿಂದ ತೃಪ್ತರಾಗದ ಸಿಜೆ “ಚಿಕಿತ್ಸೆಯ ನಂತರ ಅವರು ಎಲ್ಲಿಗೆ ಹೋಗಬೇಕು, ಮತ್ತೆ ಅದೇ ನರಕಕ್ಕೆ ತಾನೆ? ಮತ್ತದೇ ಕಬ್ಬಿಣಾಂಶ ಇರುವ ನೀರನ್ನು ಮಕ್ಕಳು ಕುಡಿಯುತ್ತಾರೆ, ಇದು ಸರಿಯೇ? ರಾಜಸ್ಥಾನದಲ್ಲಿ ಫ್ಲೋರೈಡ್ಯುಕ್ತ ನೀರು ಸೇವಿಸಿ ಜನರ ಮೂಳೆಗಳು ಏನಾಗಿವೆ ಎಂಬುದನ್ನು ನೋಡಿದ್ದೇವೆ” ಎಂದು ಹೇಳಿದರು.

ಸ್ಥಳಾಂತರಗೊಂಡ ಬಳಿಕ ಆಶ್ರಯ ಶಿಬಿರಗಳಲ್ಲಿರುವ ಮಕ್ಕಳ ದುಸ್ಥಿತಿಗೆ ಸಂಬಂಧಿಸಿದಂತೆ ಗುವಾಹಟಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. 

ಆಶ್ರಯ ಶಿಬಿರಗಳಿಗೆ ಶುದ್ಧ, ಸಂಸ್ಕರಿತ ನೀರನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ ಅಂತಹ ಎಷ್ಟು ಶಿಬಿರಗಳಿವೆ ಎಂಬುದರ ಲೆಕ್ಕ ನೀಡಬೇಕು. ಮಕ್ಕಳ ಲಿಂಗವಾರು ಗಣತಿ ಒದಗಿಸಬೇಕು ಎಂದು ಸೂಚಿಸಿ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 8ರಂದು ನಡೆಸುವುದಾಗಿ ತಿಳಿಸಿತು. ಸಮಸ್ಯೆಯಿಂದ ವಿಮುಖರಾಗುವಂತಿಲ್ಲ ಎಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಅದು ಎಚ್ಚರಿಕೆ ನೀಡಿತು. 

ಹಿಂದಿನ ಲೇಖನಗುಂಡ್ಲುಪೇಟೆಯಲ್ಲಿ ಚಾಣಕ್ಯ ಅಮಿತ್ ಶಾ ಭರ್ಜರಿ ರೋಡ್ ಶೋ
ಮುಂದಿನ ಲೇಖನಯಾರ ಮೀಸಲಾತಿ ಕಡಿಮೆ ಮಾಡಿ, ಮುಸ್ಲಿಮರಿಗೆ ಕೊಡುತ್ತೀರಿ ?: ಡಿಕೆಶಿಗೆ ಅಮಿತ್ ಶಾ ಪ್ರಶ್ನೆ