ಹೈದರಾಬಾದ್: 11ನೇ ಶತಮಾನದ ಸಮಾಜ ಸುಧಾರಕ ಮತ್ತು ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ತೆಲಂಗಾಣದ ಹೈದರಾಬಾದ್‌ನಲ್ಲಿ ನಿರ್ಮಾಣಗೊಂಡಿರುವ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ ಇಂದು ಲೋಕಾರ್ಪಣೆಗೊಳ್ಳಲಿದೆ.
ಬಹು ಎತ್ತರದ ದೈತ್ಯ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 5 ಗಂಟೆಗೆ ಅನಾವರಣಗೊಳಿಸಲಿದ್ದಾರೆ.
ಕುಳಿತುಕೊಂಡಿರುವ ಭಂಗಿಯಲ್ಲಿರುವ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ವಿಶ್ವದ ಎರಡನೇ ಅತಿದೊಡ್ಡ ಪ್ರತಿಮೆಯಾಗಿದೆ. ಇದನ್ನು ನಗರದ ಹೊರವಲಯದಲ್ಲಿರುವ 45 ಎಕರೆ ಸಂಕೀರ್ಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ.
1,000-ಕೋಟಿ ಯೋಜನೆ ಇದಾಗಿದ್ದು, ಜಾಗತಿಕವಾಗಿ ಭಕ್ತರ ದೇಣಿಗೆಯಿಂದ ಹಣವನ್ನು ಸಂಗ್ರಹಿಸಿ ಪ್ರತಿಮೆ ನಿರ್ಮಿಸಲಾಗಿದೆ. ಶ್ರೀ ರಾಮಾನುಜಾಚಾರ್ಯರು ಜೀವಿಸಿದ 120 ವರ್ಷಗಳ ನೆನಪಿಗಾಗಿ ಶ್ರೀ ರಾಮಾನುಜಾಚಾರ್ಯರ ಒಳಾಂಗಣ ಮೂರ್ತಿಯನ್ನು 120 ಕೆಜಿ ಚಿನ್ನದಿಂದ ನಿರ್ಮಿಸಲಾಗಿದೆ. ಈ ಮೂರ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಫೆಬ್ರವರಿ 13 ರಂದು ಅನಾವರಣಗೊಳಿಸಲಿದ್ದಾರೆ.
ಹೊರಾಂಗಣದಲ್ಲಿ ನಿರ್ಮಿತವಾಗಿರುವ 216 ಅಡಿ ಸಮಾನತೆಯ ಪ್ರತಿಮೆಯು ಕುಳಿತುಕೊಳ್ಳುವ ಭಂಗಿಯನ್ನು ಹೊಂದಿರುವ ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಥೈಲ್ಯಾಂಡ್‌ನಲ್ಲಿರುವ ಬುದ್ಧನ ಪ್ರತಿಮೆಯು ಕುಳಿತಿರುವ ಭಂಗಿಯಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಹೇಳಲಾಗುತ್ತದೆ.
2.45 ಬೇಸ್ ಕಟ್ಟಡದ ಮೇಲೆ ಪ್ರತಿಮೆ ನಿರ್ಮಿಸಲಾಗಿದ್ದು, ಇದಕ್ಕೆ ಭದ್ರಾ ವೇದಿಕೆ ಎಂದು ಹೆಸರಿಡಲಾಗಿದೆ. ಇನ್ನು ನೆಲಮಾಳಿಗೆಯಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದ್ದು, ಇಲ್ಲಿ ಪ್ರಾಚೀನ ಭಾರತೀಯ ಗ್ರಂಥಗಳು, ರಾಮಾನುಜಾಚಾರ್ಯರ ಅನೇಕ ಕೃತಿಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ತೆಲಂಗಾಣದ ಮುಚಿಂತಲ್ ಎಂಬ ಹಳ್ಳಿಯಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಯು ಶಂಶಾಬಾದ್ ನಲ್ಲಿರುವ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲಿದೆ. ಇದು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವನ್ನು ಒಳಗೊಂಡಿರುವ ಐದು ಲೋಹಗಳ ಸಂಯೋಜನೆಯಾದ ಪಂಚಲೋಹದ ಪ್ರತಿಮೆಯಾಗಿದೆ. ಶ್ರೀ ರಾಮಾನುಜಾಚಾರ್ಯರು 120 ವರ್ಷಗಳ ಕಾಲ ಜೀವಿಸಿರುವುದರ ನೆನಪಿಗಾಗಿ ಒಳಾಂಗಣ ದೇವರನ್ನು 120 ಕೆಜಿ ಚಿನ್ನದಿಂದ ಮಾಡಲಾಗಿದೆ. ರೂ 1,000 ಕೋಟಿ ಯೋಜನೆಗೆ ಜಾಗತಿಕವಾಗಿ ಭಕ್ತರ ದೇಣಿಗೆಯಿಂದ ಹಣವನ್ನು ಪಡೆಯಲಾಗಿದೆ.
ಈ ಪ್ರತಿಮೆಯು ಶ್ರೀ ರಾಮಾನುಜಾಚಾರ್ಯರ ಆಶ್ರಮದ ಶ್ರೀ ಚಿನ್ನ ಜೀಯರ್ ಸ್ವಾಮಿಗಳ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ.