ಮೈಸೂರು: ಪ್ರಜ್ವಲ್ ರೇವಣ್ಣ ಪ್ರಕರಣದಿಂದ ದೇವೇಗೌಡರ ಕುಟುಂಬಕ್ಕೆ ಡ್ಯಾಮೇಜ್ ಆಗಿರೋದು ಸತ್ಯ ನಾನು ಈಗಾಲೂ ಪ್ರಜ್ವಲ್ಗೆ ಹೇಳುತ್ತೇನೆ, ಯಾವ ಲಾಯರ್ ಮಾತನ್ನು ಕೇಳ್ಬೇಡ ಬಂದು ತನಿಖೆಗೆ ಸಹಕರಿಸು ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದಿಂದ ದೇವೇಗೌಡರ ಕುಟುಂಬಕ್ಕೆ ಡ್ಯಾಮೇಜ್ ಆಗಿರೋದು ಸತ್ಯ, ನಾನು ಈಗಾಲೇ ಈ ವಿಚಾರವನ್ನು ಹೇಳಿದ್ದೇನೆ. ತಪ್ಪು ಮಾಡಿಲ್ಲ, ಅಂದರೆ ಬಂದು ತನಿಖೆಗೆ ಸಹಕರಿಸಲಿ, ತಪ್ಪು ಸಾಬೀತಾದ್ರೆ ಶಿಕ್ಷೆಯಾಗಲಿ. ಆದರೆ ಈ ವಿಚಾರದಲ್ಲಿ ಯಾವುದೇ ಲಾಯರ್ಗಳ ಮಾತನ್ನು ಕೇಳಬೇಡ ಎಂದು ಪ್ರಜ್ವಲ್ ರೇವಣ್ಣಗೆ ಮನವಿ ಮಾಡಿದರು.
ಲೋಕಸಭೆ ಚುನಾವಣೆಯ ಮತದಾನಕ್ಕೆ 4 ದಿನ ಮುಂಚೆಯೇ ಪೆನ್ಡ್ರೈವ್ ಹಂಚಿದ್ದಾರೆ. ಪಾಪ ಮಹಿಳೆಯರ ಮುಖವನ್ನೂ ಬ್ಲರ್ ಮಾಡಿಲ್ಲ, ಆ ಹೆಣ್ಣುಮಕ್ಕಳ ಕುಟುಂಬದ ಪಾಡು ಏನು ಎಂದು ಪ್ರಶ್ನಿಸಿದರು. 1980 ರಲ್ಲಿ ಸಿಡಿ ಫ್ಯಾಕ್ಟರಿ ಆರಂಭವಾಗಿದೆ. ನಾನು ನಮ್ಮ ಸಿಡಿ ಶಿವುಗೆ, ಹೇಳುತ್ತೇನೆ ನಮ್ಮ ಕುಟುಂಬದವರು ಎಲ್ಲಾ ಅಧಿಕಾರವನ್ನು ನೋಡಿದ್ದೇವೆ, ದೇಶದ ಪ್ರಧಾನಿ ಸ್ಥಾನವನ್ನು ತೊರೆದು ಬಂದ ಕುಟುಂಬ ನಮ್ಮದು. ಪ್ರಧಾನಿ ಹುದ್ದೆ ಉಳಿಸಿಕೊಳ್ಳುವ ಎಲ್ಲಾ ಅವಕಾಶವಿದ್ದರೂ ಅದನ್ನು ದೇವೇಗೌಡ್ರು ಬಿಟ್ಟು ಬಂದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿಯನ್ನು ಟೀಕಿಸಿದರು.
ಪೆನ್ಡ್ರೈವ್ ಪ್ರಕರಣದ ಬಗ್ಗೆ ದೇವರಾಜೇಗೌಡ ಜೊತೆ ನಡೆದ ಆಡಿಯೋ ಸಂಭಾಷಣೆಯಲ್ಲಿ ದೇವರಾಜೇಗೌಡ 4 ಜನ ಸಚಿವರ ಹೆಸರನ್ನು ಹೇಳಿದ್ದು ಇದರ ಜತೆ ಇನ್ನೂ ಯಾರೆಲ್ಲ ಇದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಹೆಚ್ಡಿಕೆ ಆಗ್ರಹಿಸಿದರು.
ಸರ್ಕಾರ ಗ್ಯಾರಂಟಿ ಹೊರತುಪಡಿಸಿ ಯಾವುದರ ಬಗ್ಗೆಯೂ ಮಾತನಾಡುತ್ತಿಲ್ಲ. ನಗರ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಅನಾಹುತ ಉಂಟಾಗಿದೆ. ಯಾವುದೇ ಸಚಿವರಾಗಲಿ, ಸಿಎಂ ಸಹ ಆ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಸರ್ಕಾರ ಯಾರೊಬ್ಬರಿಗೂ ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ. ಈ ಸರ್ಕಾರದ ಸಾಧನೆ ಶೂನ್ಯ. ಹಿಂದೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದ ಇವರು, ಈಗ ಅವರದ್ದೇ ಸರ್ಕಾರವಿದ್ದು, ಭ್ರಷ್ಟಾಚಾರ ನಿಯಂತ್ರಣಕ್ಕೆ ತರಲು ಆಗುತ್ತಿಲ್ಲ. ಇದು ಇವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಅವ್ರೇ ಅಧಿಕಾರ ಶಾಶ್ವತ ಅಲ್ಲ. ನಿಮ್ಮ ಅಧಿಕಾರದ ದುರುಪಯೋಗದ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ. ದೇವೇರಾಜೇಗೌಡ, ಶಿವರಾಮೇಗೌಡ, ಡಿ.ಕೆ. ಶಿವಕುಮಾರ್, ಫೆನ್ಡ್ರೈವ್ ವಿತರಣೆಯ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲಿ ಎಲ್ಲಾ ತೀರ್ಮಾನವಾಗಿದೆ. 8 ಜನ ಪೊಲೀಸರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ. ಯಾವ ಕಾರಣಕ್ಕೆ ಇನ್ನೂ ಕಾರ್ತಿಕನನ್ನು ಬಂಧನ ಎಂದು ತೋರಿಸಿಲ್ಲ. ಕೋರ್ಟ್ ಗೆ ಹಾಜರುಪಡಿಸಿಲ್ಲ ಎಂದು ಹೆಚ್ಡಿಕೆ ಪ್ರಶ್ನಿಸಿದರು.
ನನ್ನ ಬಳಿಯಿರುವ ಪೆನ್ಡ್ರೈವ್ ನಿಮ್ಮ ಸರ್ಕಾರದ ವರ್ಗಾವಣೆಯ ಭ್ರಷ್ಟಚಾರದ ಪೆನ್ಡ್ರೈವ್. ಆದರೆ ಕುಮಾರಸ್ವಾಮಿಯೇ ಪೆನ್ಡ್ರೈವ್ ಸೃಷ್ಟಿ ಮಾಡಿದ್ದಾರೆ ಎಂದು ಹೇಳುವ ಸರ್ಕಾರ ಇದು. ಇಲ್ಲಿಯವರೆಗೆ SITಗೆ ಕೊಟ್ಟ ಯಾವ ಪ್ರಕರಣವೂ ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ಎಸ್ಐಟಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ಪೆನ್ಡ್ರೈವ್ ಪ್ರಕರಣದ ಬಗ್ಗೆ ಯಾರೂ ಮಾತನಾಡಬೇಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಪ್ರಕರಣ ಅವರ ಬುಡಕ್ಕೆ ಬರುತ್ತಿದೆ. ಹಾಗಾಗಿ ಈಗ ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಗೂ ಪೆನ್ಡ್ರೈವ್ಗೂ ಯಾವುದೇ ಸಂಬಂಧವಿಲ್ಲ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ತಿಳಿಸಿದರು.