ಮೈಸೂರು(Mysuru): ಅಶೋಕಪುರಂ ರೈಲು ನಿಲ್ದಾಣದಲ್ಲಿ 28.78 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
ಇಲ್ಲಿನ ಅಶೋಕಪುರಂ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಲಾ ಮತ್ತೆರಡು ಅಂಕಣಗಳು, ಹಳಿಗಳನ್ನು ಅಲ್ಲಿ ನಿರ್ಮಿಸಲಾಗುತ್ತಿದ್ದು, ನಾಲ್ಕೈದು ತಿಂಗಳಲ್ಲಿ ಸಿದ್ಧಗೊಳ್ಳಲಿವೆ ಎಂದರು.
ಹಿಂದೆ ಇದ್ದ ಗೂಡ್ಸ್ ಶೆಡ್ ಜಾಗವನ್ನು ಬಳಸಿಕೊಂಡು ಹೆಚ್ಚುವರಿಯಾಗಿ ಅಂಕಣಗಳನ್ನು (ಪ್ಲಾಟ್’ಫಾರಂ) ನಿರ್ಮಿಸಲಾಗುತ್ತಿದೆ. ನಿಲ್ದಾಣದಲ್ಲಿ ಸದ್ಯ ಮೂರು ಅಂಕಣಗಳಿವೆ. ಹೆಚ್ಚುವರಿಯಾಗಿ ಮತ್ತೆರಡು ನಿರ್ಮಾಣಗೊಳ್ಳುತ್ತಿವೆ. ಇಲ್ಲಿ ರೈಲುಗಳನ್ನು ನಿಲುಗಡೆ ಮಾಡಬಹುದಾಗಿದೆ. ಇದರಿಂದ ಕೇಂದ್ರ ರೈಲು ನಿಲ್ದಾಣದ ಮೇಲಿನ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೇ, ಇಲ್ಲಿಂದಲೂ ರೈಲುಗಳು ಹೊರಡುವುದರಿಂದ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ₹ 15.25 ಕೋಟಿ ಹಾಗೂ 2ನೇ ಹಂತದಲ್ಲಿ ₹ 13.50 ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಿಲ್ದಾಣದಿಂದ ಚಿಕ್ಕಹರದನಹಳ್ಳಿ ಕಡೆಗೆ ಪಾದಚಾರಿ ಮೇಲ್ಸೇತುವೆಯನ್ನೂ ನಿರ್ಮಿಸಲಾಗುವುದು. ಇದರಿಂದಾಗಿ, ಚಿಕ್ಕಹರದನಹಳ್ಳಿ, ಶ್ರೀರಾಂಪುರ 2ನೇ ಹಂತ, ಜೆ.ಪಿ.ನಗರ, ಜಯನಗರದ ಮೊದಲಾದ ಕಡೆಗಳ ಪ್ರಯಾಣಿಕರು ಸುತ್ತಿ ಬಳಸಿಕೊಂಡು ರೈಲು ನಿಲ್ದಾಣಕ್ಕೆ ಬರುವುದು ತಪ್ಪಲಿದೆ. ಹೆಚ್ಚುವರಿಯಾಗಿ ಹಳಿಗಳು (ಸ್ಟೇಬಲಿಂಗ್ ಲೈನ್) ಲಭ್ಯವಾಗುವುದರಿಂದಾಗಿ ಅಲ್ಲಿ ರೈಲುಗಳನ್ನು ತೊಳೆಯುವುದಕ್ಕೆ ಹಾಗೂ ನಿರ್ವಹಣೆಗೆ ಸಹಕಾರಿಯಾಗಲಿದೆ. ನಿಲ್ದಾಣದ ಹಿಂಬದಿಯಿಂದಲೂ (ಚಿಕ್ಕಹರದನಹಳ್ಳಿ ಕಡೆಯಿಂದ) ಪ್ರಯಾಣಿಕರ ಪ್ರವೇಶಕ್ಕೆ ಅವಕಾಶ ಕೊಡಲಾಗುವುದು ಎಂದು ಮಾಹಿತಿ ನೀಡಿದರು.
ನಿಲ್ದಾಣದ ಬಳಿ 5ಸಾವಿರ ಚ.ಮೀ. ಸರ್ಕಾರಿ ಜಾಗ ಲಭ್ಯವಿದೆ. ಅದನ್ನು ಹಿಂದೆ ಮಹಾನಗರಪಾಲಿಕೆಗೆ ನೀಡಲಾಗಿತ್ತು. ಅದನ್ನು ಅವರು ಬಳಸಿಕೊಂಡಿಲ್ಲ. ಅಭಿವೃದ್ಧಿ ಕಾಮಗಾರಿಗಾಗಿ ಈಗ ವಾಪಸ್ ಪಡೆದುಕೊಳ್ಳಲಾಗುತ್ತಿದೆ. 318 ಚ.ಮೀ. ಜಾಗವನ್ನು ಖಾಸಗಿಯವರಿಂದ ಖರೀದಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮೈಸೂರಿನ ಬೆಳವಣಿಗೆ ಹಿನ್ನೆಲೆಯಲ್ಲಿ ದೂರದೃಷ್ಟಿಯಿಂದ ಕೈಗೊಂಡಿರುವ ಯೋಜನೆ ಇದಾಗಿದೆ. ಕೇಂದ್ರ ರೈಲು ನಿಲ್ದಾಣದ ನಂತರ 2ನೇ ದೊಡ್ಡ ನಿಲ್ದಾಣವನ್ನಾಗಿ ಮಾಡಲಾಗುತ್ತಿದೆ ಎಂದರು.
ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್’ಎಂ ರಾಹುಲ್ ಅಗರ್’ವಾಲ್, ಮೈಸೂರು ಉಪ ವಿಭಾಗಾಧಿಕಾರಿ ಕಮಲಾ ಬಾಯಿ ಇದ್ದರು.