ಮನೆ ರಾಷ್ಟ್ರೀಯ ಕರ್ನಾಟಕದ ಮರಾಠಿಗರಿಗಾಗಿ ಎಂಥ ಹೋರಾಟಕ್ಕೂ ಸಿದ್ದ: ದೇವೇಂದ್ರ ಫಡಣವೀಸ್

ಕರ್ನಾಟಕದ ಮರಾಠಿಗರಿಗಾಗಿ ಎಂಥ ಹೋರಾಟಕ್ಕೂ ಸಿದ್ದ: ದೇವೇಂದ್ರ ಫಡಣವೀಸ್

0

ಮುಂಬೈ(Mumbai): ಕರ್ನಾಟಕದಲ್ಲಿನ ಮರಾಠಿಗರ ಸಲುವಾಗಿ ನಾವು ಎಂತಹ ಹೋರಾಟಕ್ಕಾದರೂ ಸಿದ್ದ. ಅವರ ಹಿತಾಸಕ್ತಿ ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಮಹಾರಾಷ್ಟ್ರ ಸರ್ಕಾರ ತನ್ನ ಇಂಚು ಭೂಮಿಯನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಅದಕ್ಕಾಗಿ ಎಂತಹ ಹೋರಾಟಕ್ಕಾದರೂ ಸೈ ಎಂದು ಗುಡುಗಿದ್ದಾರೆ.

ಇತ್ತ ಕರ್ನಾಟಕದ ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಣಯವನ್ನು ಅಂಗೀಕರಿಸಿದ ಬೆನ್ನಲ್ಲೇ ಫಡಣವೀಸ್ ಹೇಳಿಕೆ ಹೊರಬಂದಿದೆ.

ಇನ್ನು ಮಹಾ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು, ಇದುವರೆಗೆ ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಸರ್ಕಾರ ಏಕೆ ನಿರ್ಣಯ ಅಂಗೀಕಾರ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸುವಂತೆ ಶಿವಸೇನ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರ ವಿಧಾನಸಭೆಗೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಆಕ್ರಮಣಕಾರಿಯಾಗಿದ್ದು, ಮಹಾರಾಷ್ಟ್ರ ಸಿಎಂ ಶಿಂದೆ ಮೌನವಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಬರುವವರೆಗೂ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು. ಪ್ರಸ್ತಾವನೆಯಲ್ಲಿ ಇದನ್ನು ಸೇರಿಸಿ ಸದನ ಅಂಗೀಕರಿಸಬೇಕು ಎಂದು ಉದ್ಧವ್ ಹೇಳಿದ್ದಾರೆ.

ಉದ್ಧವ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಏಕನಾಥ್ ಶಿಂದೆ, ಸುಪ್ರೀಂ ಕೋರ್ಟ್‌ನಲ್ಲಾಗಲಿ ಅಥವಾ ಕೇಂದ್ರದ ಬಳಿಯಾಗಲಿ, ಪ್ರತಿ ಇಂಚು ಭೂಮಿಗಾಗಿ ಹೋರಾಡುತ್ತೇವೆ ಎಂದಿದ್ದಾರೆ.