ರಚನೆ : ಶ್ರೀ ಪುರಂದರ ವಿಠ್ಠಲ
ಹರಿ ನಿನ್ನೊಲುಮೆ ಆಗುವ ತನಕ
ಅರಿತು ಸುಮ್ಮನಿರುವುದೇ ಲೇಸು ||ಪ||
ಮರಳಿ ಮರಳಿ ತಾ ಪಡೆಯದ ಭಾಗ್ಯಕೆ
ಹೊರಳಿ ಹೊರಳಿ ಅತ್ತರೆ ಬಂದೀತೆ ||ಅ.ಪ||
ದೂರು ಬರುವ ತೆರ ನಂಬಿಕೆ ಕೊಟ್ಟರೆ |
ದುರ್ಜನ ಬರುವುದು ತಪ್ಪಿತೆ |
ದೂರದಿ ನಿಂತು ಮೊರೆಯಿಟ್ಟು ಕೂಗಲು|
ಚೋರರಿಗೆ ದಯ ಪುಟ್ಟಿತೆ||೧||
ಬಾರಿ ಬಾರಿಗೆ ಪತಿವೃತತನ ಬೋಧಿಸೆ |
ಜಾರೆಗದರ ನಿಜ ಸೊಗಸೀತೆ |
ಊರು ಬಿಟ್ಟು ಪರ ಊರಿಗೆ ಹೋದರೆ |
ಪ್ರಾರಬ್ದವು ಬೇರಾದೀತೆ||೨||
ಪಟ್ಟೆ ಮಂಚ ತಿರುವಿಟ್ಟರೆ ಫಣೆಯೊಳು |
ಹುಟ್ಟಿದ ಭ್ರಮೆಯ ಬಿಟ್ಟೀತೆ|
ಹೊಟ್ಟೆಲಿ ಸುತರಿಲ್ಲೆಂದತ್ತು ಕರೆದರೆ |
ಹುಟ್ಟು ಬಂಜೆಗೆ ಮಕ್ಕಳಾದೀತೆ||೩||
ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ |
ಬೇಟೆಗಾರನಿಗೆ ದಯ ಪುಟ್ಟೀತೆ |
ಕೆಟ್ಟ ಹಾವು ಕಚ್ಚಿದ ಗಾಯಕ್ಕೆ ಹಳೆ |
ಬತ್ತೆಯೊರಸೆ ವಿಷ ಹೋದೀತೆ||೪||
ಧನಿಕರ ಕಂಡು ದೈನ್ಯವ ಪಟ್ಟರೆ |
ತನ್ನ ದ್ರಾರಿದ್ರ್ಯವು ಹಿಂಗೀತೆ|
ಎಣಿಸಿಕೊಂಡೇಳಹಂಜಿಯ ನೂತರೆ |
ಮಣಿಯದ ಸಾಲವು ತೀರೀತೆ ||೫||
ಮುನಿಸಿಂದ ಬೈದಾಡುತಲಿದ್ದರೆ |
ಮುರಹರ ಭಜನೆಯು ಆದೀತೇ|
ಅನುದಿನ ನಮ್ಮ ಪುರಂದರ ವಿಠ್ಠಲನ |
ನೆನೆದಲ್ಲದೆ ಭವ ಹಿಂಗೀತೇ||೬||