ಮನೆ ದೇವರನಾಮ ಭಜಿಸಿ ಬದುಕೆಲೋ ಮಾನವಾ

ಭಜಿಸಿ ಬದುಕೆಲೋ ಮಾನವಾ

0

ಭಜಿಸಿ ಬದುಕೆಲೋ ಮಾನವಾ,

ಮನಮುಟ್ಟಿ ಶ್ರೀ ಹರಿಯ ||ಪ||

ಅಜ ಸುರೇಂದ್ರಾದಿಗಳು ವಂದಿಸುವ ಪಾದವನು||a.pa||

ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ

ಕಾಕು ಶಕಟನ ತುಳಿದು ಕೊಂದ ಪಾದ

ಲೋಕೇಶನಿಗೆ ಒಲಿದು ಪೂಜೆಗೊಂಬುವ ಪಾದ

ಲೋಕಪಾವನೆ ಗಂಗೆ ಜನಿಸಿದ ಪಾದವನು ||

ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಪಾದ

ಒಲಿದು ಪಾರ್ಥಂಗೆ ಧರೆಯನೊತ್ತಿದ ಪಾದ

ಕೊಲಿಸಿ ಕಾಳಗದಿ ಕೌರವರ ಕೆಡುಹಿದ ಪಾದ

ಬಲಿದ ಕಾಲಿಂಗನನು ತುಳಿದ ಆ ಪಾದವನು|

ಗರುಡ ಶೇಷಾದಿಗಳು ಹೊತ್ತುಕೊಂಡಿಹ ಪಾದ

ಧರೆಯ ಈರಡಿಮಾಡಿ ಅಳೆದ ಪಾದ

ಸಿರಿ ತನ್ನ ತೊಡೆಯ ಮೇಲಿರಿಸಿ ಸೇವಿಸಿದ ಪಾದ

ವರಕಾಗಿನೆಲೆಯಾದಿ ಕೇಶವನ ಪಾದವನು||