ಮನೆ ಕಾನೂನು ಆರ್’ಟಿಐ ಕಾಯಿದೆ ಜಾರಿ ನಿರ್ದೇಶನಾಲಯಕ್ಕೂ ಅನ್ವಯಿಸುತ್ತದೆ ಎಂಬ ದೆಹಲಿ ಹೈಕೋರ್ಟ್ ತೀರ್ಪಿನ ತರ್ಕ ಒಪ್ಪಲಾಗದು: ಸುಪ್ರೀಂ

ಆರ್’ಟಿಐ ಕಾಯಿದೆ ಜಾರಿ ನಿರ್ದೇಶನಾಲಯಕ್ಕೂ ಅನ್ವಯಿಸುತ್ತದೆ ಎಂಬ ದೆಹಲಿ ಹೈಕೋರ್ಟ್ ತೀರ್ಪಿನ ತರ್ಕ ಒಪ್ಪಲಾಗದು: ಸುಪ್ರೀಂ

0

ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಾಗ ಮಾಹಿತಿ ಹಕ್ಕು ಕಾಯಿದೆಯ (ಆರ್’ಟಿಐ) ನಿಯಮಾವಳಿ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ಅನ್ವಯಿಸುತ್ತದೆ ಎಂದು ದೆಹಲಿ ಹೈಕೋರ್ಟ್ ನೀಡಿದ ತೀರ್ಪಿನ ಹಿಂದಿನ ಕಾರಣವನ್ನು ತಾನು ಅನುಮೋದಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

Join Our Whatsapp Group

[ಭಾರತ ಒಕ್ಕೂಟ ಮತ್ತು ಕೇಂದ್ರ ಮಾಹಿತಿ ಆಯೋಗ ಇನ್ನಿತರರ ನಡುವಣ ಪ್ರಕರಣ].

ಇದೇ ವೇಳೆ, ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರದ ಮೇಲ್ಮನವಿಯನ್ನು ಪರಿಗಣಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಕಾನೂನಿನ ಪ್ರಶ್ನೆಯನ್ನು ಮುಕ್ತವಾಗಿ ಇರಿಸಿತು.

“ಹೈಕೋರ್ಟ್ ನೀಡಿದ ತಾರ್ಕಿಕತೆಯನ್ನು ನಾವು ಅನುಮೋದಿಸುವುದಿಲ್ಲ. ಆದರೆ ಕಾನೂನಿನ ಪ್ರಶ್ನೆ ಮುಕ್ತವಾಗಿಡುವುದಕ್ಕಾಗಿ ಪ್ರಸ್ತುತ ವಿಶೇಷ ಅನುಮತಿ ಅರ್ಜಿಯನ್ನು ಪರಿಗಣಿಸಲು ನಿರಾಕರಿಸುತ್ತಿದ್ದೇವೆ” ಎಂದು ಪೀಠ ನುಡಿಯಿತು.

‘ಮಾನವ ಹಕ್ಕುಗಳು’ ಎಂಬ ಅಭಿವ್ಯಕ್ತಿಗೆ ಸಂಕುಚಿತ ಅಥವಾ ನಿಷ್ಠುರ ದೃಷ್ಟಿಕೋನವನ್ನು ನೀಡಲಾಗುವುದಿಲ್ಲ ಮತ್ತು ಒಬ್ಬ ವ್ಯಕ್ತಿಯ ಬಡ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸದಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ತೀರ್ಪು ಹೇಳಿತ್ತು.

ಪ್ರತಿವಾದಿಯು ಯಾವುದೇ ತನಿಖೆ ಅಥವಾ ಗುಪ್ತಚರ ಇಲ್ಲವೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯವಾಗಿ ನಡೆಸಲಾದ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಯನ್ನು ಕೋರಿರಲಿಲ್ಲ. ಬದಲಿಗೆ ಅವರು ಕೇಳಿರುವುದು ಕೇವಲ ಸೇವಾ ದಾಖಲೆಯನ್ನು ಮಾತ್ರ ಎನ್ನುವುದನ್ನು ಅದು ಗಮನಿಸಿತು.

ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ, ಆರ್ ಟಿಐ ಕಾಯಿದೆಯ ಸೆಕ್ಷನ್ 24 ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳಿಗೆ ಕಾಯಿದೆಯಿಂದ ವಿನಾಯಿತಿ ನೀಡುತ್ತದೆ. ಮಾಹಿತಿಯನ್ನು ಪಡೆಯಬಹುದು. ಆದರೆ ಆರ್’ಟಿಐ ಅಡಿ ಅಲ್ಲ ಎಂದರು.

ಆಗ ನ್ಯಾ. ಶಾ “ಸೇವಾ ದಾಖಲೆಗಳ ಬಗ್ಗೆ ರಹಸ್ಯ ಕಾಪಾಡಿಕೊಳ್ಳುವುದೇಕೆ? ಅದಕ್ಕೆ ವಿನಾಯಿತಿ ನೀಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

“ಭದ್ರತಾ ಸಂಸ್ಥೆಗಳಿಗೆ ಸಂಬಂಧಿಸಿದ ವರ್ಗಾವಣೆಯ ದಾಖಲೆಗಳು ಮತ್ತು ಅದರ ಹಿಂದಿನ ಅಂಶಗಳು ಬಗೆಗಿನ ಮಾಹಿತಿಯನ್ನು  ಹಂಚಿಕೊಳ್ಳಲಾಗದು. ದಯವಿಟ್ಟು ಕಾನೂನಿನ ಪ್ರಶ್ನೆಯನ್ನು ಮುಕ್ತವಾಗಿಡಿ. ಕೇಂದ್ರ ಸರ್ಕಾರ ವೈಯಕ್ತಿಕ ಸೇವಾ ದಾಖಲೆಗಳನ್ನು ಹಂಚಿಕೊಳ್ಳಲಿದೆ. ಒಂದು ವೇಳೆ, ಇಂಟೆಲಿಜೆನ್ಸ್ ಬ್ಯೂರೋದಿಂದ ಮಾಹಿತಿಯನ್ನು ಪಡೆದಿದ್ದು, ಅದರಲ್ಲಿ ಅಧಿಕಾರಿಯೊಬ್ಬರು ರಾಜಿ ಮಾಡಿಕೊಂಡ ಮಾಹಿತಿ ಇದ್ದರೆ ಅದು ಮಾನವ ಹಕ್ಕುಗಳ ಅಡಿಯಲ್ಲಿ ಬರುವುದಿಲ್ಲ” ಎಂದು ಮೆಹ್ತಾ ವಿವರಿಸಿದರು.

ಡಿಸೆಂಬರ್ 7, 2018 ರಂದು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಇ ಡಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ  ಹೈಕೋರ್ಟ್ ತೀರ್ಪು ನೀಡಿತ್ತು. 1991ರಿಂದ ಇಲ್ಲಿಯವರೆಗೆ ಕೆಳ ವಿಭಾಗೀಯ ಗುಮಾಸ್ತರ (ಎಲ್’ಡಿಸಿ) ಜೇಷ್ಠತಾ ಪಟ್ಟಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಇ ಡಿಗೆ ನಿರ್ದೇಶಿಸಿದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶಕ್ಕೆ ತಡೆ ನೀಡಲು ಏಕ ಸದಸ್ಯ ಪೀಠ ನಿರಾಕರಿಸಿತ್ತು.

ಹಿಂದಿನ ಲೇಖನಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಗೊಳಿಸಿ: ಹೆಚ್.ಕೆ ಸತೀಶ್
ಮುಂದಿನ ಲೇಖನಭಜಿಸಿ ಬದುಕೆಲೋ ಮಾನವಾ