ಮನೆ ದೇವರನಾಮ ಯಾಕೆ ಕಾಕುಲಾತಿ ಪಡುವೆ

ಯಾಕೆ ಕಾಕುಲಾತಿ ಪಡುವೆ

0

ರಚನೆ : ಪುರಂದರದಾಸರು

ಯಾಕೆ ಕಕ್ಕುಲಾತಿ ಪಡುವೆ ಎಲೆ ಮರುಳೆ |

ಲೋಕ ಮೂರನು ಆಳ್ವ ಶ್ರೀನಿವಾಸನು

ನಮ್ಮ ಸಾಕಲಾರದೆ ಬಿಡುವನೆ ಮರುಳೆ||

ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ

ಅಲ್ಲಿ ತಂದಿಡುವರಾರೋ|

ಎಲ್ಲವನು ತೊರೆದಿರುವ ಅರಣ್ಯವಾಸಿಯನು

ಅಲ್ಲೆ ಸಲಹದೆ ಬಿಡುವನೆ ಮರುಳೆ||

ಅಡವಿಯೊಳು ಹುಟ್ಟುವ ಮೃಗಜಾತಿಗಳಿಗೆಲ್ಲ

ಬಿಡದೆ ತಂದಿಡುವರಾರೋ|

ಗಿಡದಿಂದ ಗಿಡಗಳಿಗೆ ಹಾರುವ ಪಕ್ಷಿಗೆ

ಪಡಿಯನಳೆಯದೆ ಬಿಡುವನೇ ಮರುಳೆ||

ಎಂಭತ್ತನಾಲ್ಕು ಲಕ್ಷ ಜೀವರಾಶಿಗಳನ್ನು ಇಂಬಾಗಿ

ಸಲಹುತಿಹನು|

ನಂಬು ಶ್ರೀಪುರಂದರವಿಠ್ಠಲನ ಚರಣವನು

ನಂಬಿದರೆ ಸಲಹದಿಹನೇ ಮರುಳೆ||