ಕುಸುಮ ಮಾಲೆಯ ತನ್ನಿರೇ ಶ್ರೀ ದೇವಿ
ಕುಸುಮ ಮಾಲೆಯ ತನ್ನಿರೇ ಶ್ರೀ ದೇವಿ ವಿಜಯಲಕ್ಷ್ಮೀಗೆ ।ಪ।
ಕುಂಕುಮಾರ್ಚನೆ ಮಾಡಿರೇ ಶ್ರೀ ಕ್ಷೀರಸಾಗರ ತನಯಗೆ ।।ಅ . ಪ।।
ಆರಂಗ ರಂಜನಿ ವಿಷ್ಣು ಮೋಹಿನಿ ಚಕ್ರಿಣಿ ಶುಭದಾಯಿನಿ …
ಗರುಡವಾಹನ ಹರಿಯರಾಣಿಯೇ ಮಂದಗಾಮಿನಿ ಮಾನಿನಿ।
ಕಲ್ಪವೃಕ್ಷದ ಜೊತೆಗೆ ಹುಟ್ಟಿದ ಕಮಲಿನಿ ಕಮಲಾಸಿನಿ
ಚಂದ್ರವದನೇ ಚಂದ್ರಕಾಂತಿಯ ಚಂದಿರನ ನಿಜ ಸೋದರಿ ।।೧।।
ನದಿಯ ಆಡಿ ಬರುವ ಮಂದಮಾರುತ ಹೂನಗೆ ….
ಕಮಲನಾಭನ ಕೈಯ ಹಿಡಿದ ಕರುಣೆ ಕಮಲೆ ಕೋಮಲೆ ।
ಮಿಂಚುಬಳ್ಳಿಯ ವೇಗದಿಂದಲಿ ನೋಟ ಬದಲಿಸೋ ಚಂಚಲೆ
ಎಂದು ನಮ್ಮನು ಮಕ್ಕಳಂದದಿ ಪೊರೆಯೆ ಮಾತೆಯೇ ಮಂಗಳೇ ।।೨।।
ಮನದೇ ಧೈರ್ಯವ ತುಂಬಿಸಿ ಮುನ್ನಡೆವಲು ನೀ ಕರುಣಿಸೇ
ಬಿಡದೆ ಸಾಹಸ ಹಿಡಿದ ಕಾರ್ಯಾವ ಸಾಧಿಸೋ ಛಲ ತುಂಬಿಸೇ ।
ಜಯದ ಮಾಲೆಯ ಕೊರಳಿಗೆಂದು ನೀಡಿ ನೀ ಪರಿಪಾಲಿಸೇ
ವಿಜಯಲಕ್ಷ್ಮಿಯೇ ನಿನ್ನ ಪಾದದೇ ಬೇಡುವೆ ಪಥ ತೋರಿಸೇ ।।೩।।