ಪಂಢರಪುರವಾಸ ಪಾಲಿಸೊ ಶ್ರೀಶ ||ಪ ||
ಶ್ರೇಷ್ಠಭಕ್ತನು ಕೊಟ್ಟ ಇಟ್ಟಿಕಲ್ಲಿನ ಮ್ಯಾಲೆ
ಗಟ್ಯಾಗಿ ನಿಂತಿದ್ದ ವಿಠೋಬ ದಯಮಾಡೊ || 1 ||
ಪಾಂಡುರಾಯನ ಸುತ ಗಾಂಡೀವರ್ಜುನ ದೂತ
ಬಂಡಿ ನಡೆಸಿದಾತ ಪುಂಡರೀಕವರದನೀತ || 2 ||
ಮುಕುತಿದಾಯಕ ಮುದ್ದು ರುಕುಮಿಯ ರಮಣನೆ
ಭಕುತವತ್ಸಲಯೆನಗೆ ಸಕಲಾಭೀಷ್ಟವ ನೀಡೊ || 3 ||
ಬುಕ್ಕ್ಹಿಟ್ಟು ತುಳಸಿಮಾಲೆ ಕಟ್ಟಿ ಕೊರಳಿಗೆ ಹಾಕಿ
ಅಪ್ಪಿಕೊಂಡರೆ ಸಾರೂಪ್ಯ ಕೊಡುವ ದಾತ || 4 ||
ಲೋಕ ಲೋಕದೊಳಗಿದ್ದಾನೇಕ ಜೀವರನೆಲ್ಲ
ಸಾಕಿ ಸಾಕಾಯ್ತೆ ಕರವೇಕೆ ಟೊಂಕದಲಿಟ್ಟಿ || 5 ||
ಸೃಷ್ಟಿಸ್ಥಿತಿಯು ಜನಸಂರಕ್ಷಣೆ ಮಾಡಿ ನಿನ್ನ
ರಟ್ಟೆ ಸೋತವೆ ಟೊಂಕಕಿಟ್ಟು ಕಯ್ಯನು ನಿಂತೆ || 6 ||
ಕಂಬದೊಳಗೆ ನಿಂತ ಪುರಂದರ ದಾಸರು
ವಂದನೆ ಮಾಡೆ ಇವರೆ ನಾರದರೆಂದು ನಾ ತಿಳಿದೆ || 7 ||
ರುಕ್ಮಿಣಿ ಸತ್ಯಭಾಮೆ ರಾಧೆ ಲಕ್ಷುಮಿಯೇರ
ಹತ್ತಿಲೆ ನಿಂತ ನಮ್ಮಪ್ಪ ವೆಂಕಟರಮಣ || 8 ||
ಭೀಮರಥಿಯ ಸ್ನಾನ ಸ್ವಾಮಿ ನಿಮ್ಮ ದರುಶನ
ಭೀಮೇಶಕೃಷ್ಣನ ಧ್ಯಾನ ಮಾಡುವೋದ್ವೈಕುಂಠ ಸ್ಥಾನ || 9 ||