ಮನೆ ರಾಜ್ಯ ಧರ್ಮಸ್ಥಳ ಬುರುಡೆ ಕೇಸ್‌; ಬಂಗ್ಲೆ ಗುಡ್ಡೆಯಲ್ಲಿ ಸಿಕ್ಕ ಅಸ್ಥಿಪಂಜರ FSL ಗೆ ರವಾನೆ

ಧರ್ಮಸ್ಥಳ ಬುರುಡೆ ಕೇಸ್‌; ಬಂಗ್ಲೆ ಗುಡ್ಡೆಯಲ್ಲಿ ಸಿಕ್ಕ ಅಸ್ಥಿಪಂಜರ FSL ಗೆ ರವಾನೆ

0

ಮಂಗಳೂರು : ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಬಂಗ್ಲೆಗುಡ್ಡೆಯಲ್ಲಿ ಸಿಕ್ಕ 7 ಅಸ್ಥಿಪಂಜರಗಳನ್ನ ವಿಶೇಷ ತನಿಖಾ ತಂಡ ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದೆ.

ಬುರುಡೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಎಸ್‌ಐಟಿ ತಂಡ, ಬಂಗ್ಲೆಗುಡ್ಡೆ ಅರಣ್ಯದಲ್ಲಿ ಉತ್ಖನನ ಕೈಗೊಂಡಿತ್ತು. ಸೆ.17 ರಂದು 5 ಅಸ್ಥಿಪಂಜರ, ಸೆ.18 ರಂದು 2 ಅಸ್ಥಿಪಂಜರ ಪತ್ತೆಯಾಗಿತ್ತು. ಎಲ್ಲವೂ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿತ್ತು. ಈ ಅಸ್ತಿಗಳನ್ನ ಬೆಂಗಳೂರು ಎಫ್‌ಎಸ್‌ಎಲ್‌ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್‌ಎಸ್‌ಎಲ್ ಕೇಂದ್ರಕ್ಕೆ ಅಸ್ಥಿಪಂಜರಗಳ ರವಾನೆ ಮಾಡಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿ ಕಳೆದ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ವೇಳೆ ಶೀಘ್ರವೇ ತನಿಖೆ ನಡೆಸಿ ಪೂರ್ಣ ವರದಿ ಸಲ್ಲಿಸುವಂತೆ ಕೋರ್ಟ್‌ ಸೂಚನೆ ನೀಡಿತ್ತು.

ಈ ಮಧ್ಯೆ ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲವು ವರ್ಷಗಳಿಂದ ದಾಖಲಾಗಿರುವ 74 ಮಹಿಳೆಯರ ನಾಪತ್ತೆ ಪ್ರಕರಣಗಳು ಹಾಗೂ ಅನಾಥ ಶವಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಹೊಸ ಅರ್ಜಿಯೊಂದು ಸಲ್ಲಿಕೆಯಾಗಿದೆ. ಧರ್ಮಸ್ಥಳದಲ್ಲಿ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ ತಾಯಿ ಕುಸುಮವತಿ ಗೌಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಾರ್ಚ್ 23ಕ್ಕೆ ಮುಂದೂಡಿದೆ ಎಂದು ತಿಳಿಸಿದೆ.