ಆಸನಗಳಿಂದ ದೇಹವನ್ನು ಸುಧಾರಿಸಿದ ಮೇಲೆ, ಪ್ರಾಣಾಯಾಮವೆಂಬ ಅಗ್ನಿಯಿಂದ ಮನಸ್ಸನ್ನು ಶುದ್ಧಗೊಳಿಸಿದ ಮೇಲೆ, ಪ್ರತ್ಯಾಹಾರದ ಬಲದಿಂದ ಇಂದ್ರಿಯಗಳನ್ನು ಜಯಿಸಿದ ಮೇಲೆ, ಸಾಧಕನು ಯೋಗದ ಆರನೆಯ ಹಂತವಾದ ಧಾರಣ ಸ್ಥಿತಿಯನ್ನು ಮುಟ್ಟುತ್ತಾನೆ. ಆಗ ಆತನು ಒಂದೇ ವಿಷಯದ ಮೇಲೆ ಕೇಂದ್ರೀಕೃತ ಮನಸ್ಸುಳ್ಳವನಾಗುತ್ತಾನೆ, ಮತ್ತು ಅದರಲ್ಲೇ ಲೀನವಾಗುತ್ತಾನೆ. ಈ ರೀತಿಯ ಪೂರ್ಣ ತಲ್ಲೀನತೆಯನ್ನು ಪಡೆಯಲು ಮನಸ್ಸನ್ನು ಸ್ಥಿರಗೊಳಿಸಬೇಕು.
ಮನಸ್ಸೆಂದರೆ ಆಂತರಿಕ ಮತ್ತು ಬಾಹ್ಯ ಅನುಭವಗಳು ವಿಶ್ಲೇಷಿಸುವ, ಅಂಗೀಕರಿಸುವ, ತುಲನೆಮಾಡುವ ಮತ್ತು ಸಂಯೋಜನೆ ಮಾಡುವ ಸಾಧನ.
ಸೂಕ್ಷ್ಮ ಮತ್ತು ಚಂಚಲವಾದ ನಿರೋಧಕಕ್ಕೆ ಸುಲಭವಾಗಿ ಸಿಗದೆ ಯೋಚನೆಗಳ ಫಲವೇ ಮನಸ್ಸು. ಮನಸ್ಸಿನಿಂದ ಹತೋಟಿಯಲ್ಲಿಡಲ್ಪಟ್ಟ ಯೋಚನೆಯು ಸಂತೋಷವನ್ನುಂಟು ಮಾಡುತ್ತದೆ. ಒಂದು ಸಾಧನವನ್ನು ಹೇಗೆ ಒಳ್ಳೆಯದನ್ನು ನೀಡುವುದೆಂಬುದನ್ನು ಅರಿಯಲು ಅದು ಕೆಲಸ ಮಾಡುವ ರೀತಿಯಿಂದ ಕಂಡುಹಿಡಿಯಬೇಕು. ಮನಸ್ಸು ಯೋಚನೆಗಳಿಗೆ ಸಾಧನ. ಆದ್ದರಿಂದ ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಬೇಕು. ಮಾನಸಿಕ ಸ್ಥಿತಿಗಳು ಐದು ತೆರನಾದವು. ಮೊದಲನೆಯದು ಕ್ಷೀಪ್ತಸ್ಥಿತಿ. ಇಲ್ಲಿ ಮನಸ್ಸಿನ ಶಕ್ತಿ ಚದುರಿರುತ್ತದೆ. ನಿರ್ಲಕ್ಷವಾಗಿರುತ್ತದೆ. ಇದು ರಜೋಗುಣಪ್ರಧಾನವಾಗಿದ್ದು, ಮನಸ್ಸು ವಿಷಯಗಳ ಬಗ್ಗೆ ಓಡುತ್ತದೆ. ಎರಡನೆಯದು ವಿಕ್ಷಿಪ್ತಸ್ಥಿತಿ. ಇಲ್ಲಿ ಮನಸ್ಸು ಗೊಂದಲದಲ್ಲಿರುತ್ತದೆ. ವಿಕೇಂದ್ರೀಕೃತವಾಗುತ್ತದೆ. ಈ ಸ್ಥಿತಿಯಲ್ಲಿ ತಾನುಮಾಡಿದ ಕರ್ಮಗಳ ಫಲವನ್ನು ಅನುಭವಿಸಲು ಒಬ್ಬನು ಅರ್ಹನಾಗಿದ್ದರೂ ಆತನ ಆಕಾಂಕ್ಷೆಗಳು ನಿಗ್ರಹಕ್ಕೊಳಗಾಗದೆ ಓಡಾಡುತ್ತಿರುತ್ತದೆ. ಮೂರನೇಯದಾದಾ ಮೂಢಸ್ಥಿತಿಯಲ್ಲಿ ಮನಸ್ಸು ಮೂಢ, ಮಂದ, ಅವಿವೇಕಸ್ಥಿತಿಯಲ್ಲಿರುತ್ತದೆ. ಇಲ್ಲಿ ತಮೋಗುಣಪ್ರಧಾನವಾಗಿದ್ದು ತಾನು ಏನನ್ನು ಮಾಡಬೇಕೆಂಬ ಅರಿವೇ ಇರುವುದಿಲ್ಲ. ನಾಲ್ಕನೆಯದು ಏಕಾಗ್ರಸ್ಥಿತಿ. ಇದರಲ್ಲಿ ಮಾನಸಿಕ
ಶಕ್ತಿಗಳು ಜಾಗರೂಕವಾಗಿದ್ದು ಒಂದು ವಿಚಾರದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇದು ಸತ್ವಗುಣ ಪ್ರಧಾನವಾಗಿರುತ್ತದೆ. ಏಕಾಗ್ರತೆಯನ್ನು ಹೊಂದಿದ ವ್ಯಕ್ತಿಯು ಉತ್ತಮ ಮಾನಸಿಕ ಶಕ್ತಿಯನ್ನು ಪಡೆದಿದ್ದು, ತನಗೆ ಏನು ಬೇಕೆಂಬುದು ಚೆನ್ನಾಗಿ ತಿಳಿದು ಅದರ ಸಾಧನೆಗೆ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಿ ಸಾಧಿಸುತ್ತಾನೆ.
ಮಹಾಭಾರತದಲ್ಲಿ ಬರುವ ಮಹಾ ಬಿಲ್ಲುಗಾರನಾದ ಅರ್ಜುನನು ಧಾರಣ ಎಂದರೆ ಏನೆಂದು ನಿರ್ದೇಶಿಸಲು ಒಳ್ಳೆಯ ಉದಾರಣೆ ಆಗುತ್ತಾನೆ. ಒಮ್ಮೆ ದ್ರೋಣಾಚಾರ್ಯರು ರಾಜಪುತ್ರರ ಧನುರ್ವಿದ್ಯೆಯನ್ನು ಪರೀಕ್ಷೆ ಮಾಡಲು ಪಂದ್ಯವನ್ನು ಏರ್ಪಡಿಸುತ್ತಾರೆ. ಅವರಿಗೆ ತೋರಿಸಿದ ಗುರಿಯ ವಿಚಾರವಾಗಿ ಪ್ರತಿಯೊಬ್ಬರು ಕೇಳುತ್ತಾರೆ. ಆಗುರಿಯೆಂದರೆ ಮರದಲ್ಲಿದ್ದ ಒಂದು ಪಕ್ಷಿ. ಹಲವು ರಾಜಪುತ್ರರು ಅಲ್ಲಿದ್ದ ಅರಣ್ಯವನ್ನು ವರ್ಣಿಸಿದರು. ಇತರರು ಆ ಪಕ್ಷಿ ಇದ್ದ ಮರವನ್ನು ಕೊಂಬೆಯನ್ನು ವರ್ಣಿಸಿದರು. ಅರ್ಜುನನ ಸರದಿ ಬಂದಾಗ ಆತನು ಮೊದಲು ಪಕ್ಷಿಯನ್ನು ವರ್ಣಿಸಿ ನಂತರ ಪಕ್ಷಿಯ ಕಣ್ಣಲ್ಲದೆ ಮತ್ತೇನೂ ಕಾಣಿಸದು ಎಂದರು. ಅದೇ ಆತನು ಲಕ್ಷಿಸಬೇಕಾಗಿದ್ದ ಗುರಿ.
ಆದರೆ ಏಕಾಗ್ರತೆಯನ್ನು ಸಾಧಿಸಿದ ಮನುಷ್ಯನು ಅಹಂಕಾರಿಯಾಗುವ ತೊಂದರೆಯೂ ಇದೆ. ಯಾವಾಗ ಇಂದ್ರಿಯಗಳು ಓಡಲು ದಾರಿ ಇದೆಯೋ, ಅಲ್ಲಿ ಮನಸ್ಸು ಓಡುತ್ತದೆ. ಒಡೆದ ಹಡಗು ಸಮುದ್ರದಲ್ಲಿ ಎಲ್ಲೆಲ್ಲೂ ಓಡಾಡುವಂತೆ ಆತನ ಮನಸ್ಸು ಓಡಾಡಬಹುದು. ಒಂದು ಹಡಗಿಗೆ ಸಮತಳವನ್ನೀಯುವ ಭಾರವು ಇರಬೇಕು. ಯಾವ ದಿಕ್ಕಿಗೆ ಹೋಗುತ್ತಿದ್ದೇನೆ ಎಂಬುದು ತೋರಿಸಲು ಸಮುದ್ರಯಾನ ಮಾಡುವವನಿಗೆ ಒಂದು ಧ್ರುವತಾರೆ ಇರಬೇಕಕು. ಏಕಾಗ್ರತೆಯನ್ನು ಸಾಧಿಸಿದವನಿಗೆ ಭಕ್ತಿ, ಮತ್ತು ದೇವರ ವಿಚಾರದಲ್ಲಿ ನಂಬಿಕೆ ಇದ್ದರೆ, ಸರಿಯಾದ ಮಾರ್ಗದಲ್ಲಿ ಹೋಗಲು ಅನುಕೂಲವಾಗುತ್ತದೆ. ʼನಾನುʼ ಮತ್ತು ʼನನ್ನದುʼ ಎನ್ನುವ ವಿಚಾರಗಳು ಹೋಗದ ಹೊರತು ಸಂತೋಷವೆಂದು ಆತನಿಗೆ ತಿಳಿಯುವುದಿಲ್ಲ.
ಕೊನೆಯದಾದ ಮನಸ್ಸಿನ ಸ್ಥಿತಿಗೆ ವಿರುದ್ಧ ಎಂದು ಹೆಸರು. ಇಲ್ಲಿ ಮನಸ್ಸು, ಬುದ್ಧಿ, ಅಹಂಕಾರ ಎಲ್ಲವೂ ನಿಗ್ರಹಿಸಲ್ಪಟ್ಟು ದೇವರ ಸೇವೆಗಾಗಿ ಅರ್ಪಿಸಲ್ಪಡುತ್ತದೆ. ಇಲ್ಲಿ ನಾನು, ನನ್ನದು ಎಂಬ ಭಾವ ಇರುವುದಿಲ್ಲ. ಹೇಗೆ ಕನ್ನಡಿ ಬೆಳಕಿನತ್ತ ಹಿಡಿದಾಗ ಬೆಳಕನ್ನು ಪ್ರತಿಬಿಂಬಿಸುವುದೊಂದೇ ಅಲ್ಲದೆ ಬೆಳಕಾಗಿಯೇ ತೋರುತ್ತದೋ, ಬೆಳಕಿಗೂ ತನಗೂ ಯಾವ ವ್ಯತ್ಯಾಸವು ಇಲ್ಲದಂತೆ ಇರುತ್ತದೆ. ಹಾಗೆ ತನ್ನ ಮನಸ್ಸು, ಬುದ್ಧಿ, ಅಹಂಕಾರಗಳನ್ನು ತ್ಯಜಿಸಿದ ಸಾಧಕನು ಪರಮಾತ್ಮನೊಂದಿಗೆ ಏಕೀಬೂತನಾಗುತ್ತಾನೆ. ʼತಾನು ಬೇರೆʼ ಎಂಬ ಭಾವನೆಯೇ ಇರುವುದಿಲ್ಲ.
ಈ ಏಕಾಗ್ರತೆ ಇಲ್ಲದಿದ್ದರೆ ಯಾವುದನ್ನು ಸಾಧಿಸಲಾಗದು. ಈ ಸೃಷ್ಟಿಯನ್ನುಂಟು ಮಾಡಿದ, ಅದನ್ನು ಹತೋಟಿಯಲ್ಲಿಟ್ಟುಕೊಂಡಿರುವ ದೈವತ್ವದ ಗುಣಮಟ್ಟವನ್ನು ಯಾರು ಅರಿಯಲು ಸಾಧ್ಯವಿಲ್ಲ. ಇದನ್ನು ಸಾಧ್ಯವಾಗಿಸಲು ಏಕತತ್ವ ಅಭ್ಯಾಸವನ್ನು ವಿಧಿಸಿದೆ. ಈ ವಿಶ್ವವನ್ನು ತುಂಬಿ ಎಲ್ಲವೂ ತಾನೇ ಆಗಿರುವ ತತ್ವವೇ ಏಕತತ್ವ ಅದರ ಸಂಕೇತವೇ ʼಓಂʼ. ಏಕಾಗ್ರತೆಯನ್ನು ಸಾಧಿಸಲು ಸಾಧಕನು “ಓಂ”ನ ಮೇಲೆ ಮನಸ್ಸನ್ನು ಕೇಂದ್ರೀಕರಿಸಬೇಕು.
ಓಂ – ವಿನೋಬಾ ಭಾವೆಯರ ಅಭಿಪ್ರಾಯದಂತೆ ಲ್ಯಾಟಿನ್ ಪದವಾದ “ಓಮ್ನೆ” (OMNE) ಮತ್ತು ಸಂಸ್ಕೃತ ಪದವಾದ “ಓಂ” ಒಂದೇ ಮೂಲದಿಂದ ಬಂದಿದ್ದು, ಅದು ಸರ್ವಜ್ಞತ್ವ, ಸರ್ವ ವ್ಯಾಪಕತ್ವ ಮತ್ತು ಸರ್ವಶಕ್ತತ್ವಗಳನ್ನು ಸೂಚಿಸುತ್ತದೆ. “ಓಂ” ಎನ್ನುವುದಕ್ಕೆ ಪರ್ಯಾಯಪದ “ಪ್ರಣವ ಇದು ʼನುʼ ಎನ್ನುವ ಮೂಲದಿಂದ ಬಂದಿದ್ದು, ʼಹೊಗಳುʼ, ʼಪ್ರಾರ್ಥಿಸುʼ ಎನ್ನುವ ಅರ್ಥ ಹೊಂದಿದೆ. ʼಪ್ರʼ ಎನ್ನುವ ಉಪಸರ್ಗ ಇರುವುದರಿಂದ ʼಅತ್ಯುತ್ತಮ ಪ್ರಾರ್ಥನೆʼ ಎಂದಾಗುತ್ತದೆ.
ʼಓಂʼ ಎನ್ನುವ ಪದ ಮೂರು ಅಕ್ಷರಗಳಿಂದ ಕೂಡಿದೆ – ಅ, ಉ, ಮ ಇವುಗಳ ಹಲವು ಅರ್ಥನಿರೂಪಣೆಗಳ ನಿರ್ದೇಶನಗಳನ್ನ ಇಲ್ಲಿ ನೋಡಬಹುದು.
ʼಅʼಕಾರ ಜಾಗೃತ್ ಅವ್ಯವಸ್ಥೆಯನ್ನು ʼಉʼಕಾರ ಸ್ವಪ್ನವಸ್ಥೆಯನ್ನು ʼಮʼ ಕಾರ ಸುಷುಪ್ತ್ಯಾ ವಸ್ಥೆಯನ್ನೂ ಸೂಚಿಸುತ್ತದೆ. ʼಓಂʼಕಾರ ತುರೀಯಾವಸ್ಥೆ. ಈ ಮೂರು ಅವಸ್ಥೆಗಳನ್ನು ಒಳಗೊಂಡು ಅವಕ್ಕಿಂತ ಅತೀತವಾದ ಸ್ಥಿತಿಯನ್ನು ಒಳಗೊಳ್ಳುತ್ತದೆ. ಇದೇ ಸಮಾಧಿ ಸ್ಥಿತಿ.
ಆಕಾರ, ಉಕಾರ, ಮಕರಗಳು ಕ್ರಮವಾಗಿ ವಾಕ್ಕು, ಮನಸ್ಸು, ಮತ್ತು ಪ್ರಾಣಗಳನ್ನು ಸೂಚಿಸುತ್ತದೆ. ಹಾಗೆಯೆ “ಓಂ”ಕಾರ ಸಮಗ್ರವಾದ ಆತ್ಮಕ್ಕೆ ಸಂಕೇತ. ಈ ಆತ್ಮವು ಭಗವಂತನ ಒಂದಂಶ.
ಈ ಮೂರು ಅಕ್ಷರಗಳನ್ನು ಉದ್ದ ಅಗಲ ಮತ್ತು ಆಳಗಳನ್ನು “ಓಂ”ಕಾರ ದೈವತ್ವವನ್ನು ಎಂದರೆ ಯಾವ ರೂಪಗಳಿಗೂ ನಿಲುಕದ ತತ್ವವನ್ನು ಸೂಚಿಸುತ್ತದೆ.
ಈ ಮೂರು ಅಕ್ಷರಗಳು ಕಾಮ,ಭಯ ಮತ್ತು ಕೋಪ ಇಲ್ಲದಿರುವುಕೆಯನ್ನು “ಓಂ” ಕಾರ ಸ್ಥಿತಪ್ರಜ್ಞಸ್ಥಿತಿಯನ್ನು ಸೂಚಿಸುತ್ತದೆ.
ಅವು ಮೂರು ಲಿಂಗಗಳಾದ ಪು, ಸ್ತ್ರೀ ಮತ್ತು ನಪುಂಸಕಗಳನ್ನು ಸಮಗ್ರ ಅಕ್ಷರವಾದ “ಓಂ”ಕಾರ ಸಮಸ್ತ ದೃಷ್ಟಿ ಮತ್ತು ಸೃಷ್ಟಿ ಇವುಗಳ ತ್ಯಾಗವನ್ನು ಸೂಚಿಸುತ್ತದೆ.
ಅವು ಸತ್ವ ರಜಸ್ಸು ತಮೋಗುಣಗಳಿಗೂ, ಸಮಗ್ರಕ್ಷರ, ಗುಣಾತೀತಸ್ಥಿತಿಗೂ ಸಂಕೇತ ಎನ್ನುವುದು ಉಂಟು.
ಈ ಅಕ್ಷರಗಳು ಮೂರು ಕಾಲಗಳು ಎಂದರೆ ಭೂತ, ವರ್ತಮಾನ, ಮತ್ತು ಭವಿಷ್ಯಗಳಿಗೂ ಸಮಗ್ರಕ್ಷರವು ಕಾಲತೀತನಾದ ಭಗವಂತನಿಗೂ ಸಂಕೇತ.
ಅವು ಕ್ರಮವಾಗಿ ತಾಯಿ, ತಂದೆ ಮತ್ತು ಗುರುಗಳಿಂದ ಬೋಧಿತವಾದ ವಿದ್ಯೆಯೊಂದೂ, ಸಮಸ್ತಕ್ಷರ ಬ್ರಹ್ಮವಿದ್ಯೆಯೆಂದೂ ಹೇಳುವುದುಂಟು. ಈ ಬ್ರಹ್ಮವಿದ್ಯೆಯೇ ಆತ್ಮವಿದ್ಯೆ. ಅದು ಅಕ್ಷರವಾದದ್ದು.
ಈ ಮೂರು ಅಕ್ಷರಗಳು ಯೋಗ ಶಿಕ್ಷಣದ ಆಸನ, ಪ್ರಾಣಾಯಾಮ ಮತ್ತು ಪ್ರತ್ಯಾಹಾರಕ್ಕೆ ಸಂಕೇತಗಳು. ಹಾಗೆಯೇ “ಓಂ”ಕಾರ ಈಮೂರು ಸ್ಥಿತಿಗಳ ಗುರಿಯಾದ ಸಮಾಧಿಗೆ ಸಂಕೇತ ಎಂದೂ ಹೇಳುವುದುಂಟು.
ಅವು ಬ್ರಹ್ಮ, ವಿಷ್ಣು, ಮಹೇಶ್ವರ — ಎಂದರೆ ವಿಶ್ವದ ಸೃಷ್ಟಿ-ಸ್ಥಿತಿ- ಲಯಗಳೆಂಬ ಭಗವಂತನ ಅಂಶಗಳನ್ನು ಸೂಚಿಸುದೆಂದು, ಸಮಗ್ರ ಅಕ್ಷರವು ಪರಬ್ರಹ್ಮನೆಂದು (ಯಾರಿಂದ ಇವೆಲ್ಲವೋ ಬಂದಿದೆಯೋ, ಯಾರಿಂದ ಪೋಷಿತವಾಗುವುದೋ, ಯಾರಲ್ಲಿ ವಿಲೀನಗೊಳ್ಳುವುದೋ) ಹೇಳುವುದುಂಟು. ಈ ಪರಬ್ರಹ್ಮ ಬೆಳೆಯುವುದಿಲ್ಲ, ಮತ್ತು ವ್ಯತ್ಯಾಸ ಗೊಳ್ಳುವುದಿಲ್ಲ; ಇತರ ಎಲ್ಲವೂ ವ್ಯತ್ಯಾಸ ಗೊಳ್ಳಬಹುದು, ನಾಶವಾಗಬಹುದು. ಆದರೆ ಬ್ರಹ್ಮ ಹಾಗಿಲ್ಲ; ಅದು ಏಕ ಮತ್ತು ಸ್ಥಿರ.
ಅಕಾರ, ಉಕಾರ ಮತ್ತು ಮಕಾರಗಳು “ತತ್ವಮಸಿ” ಎನ್ನುವ ಆತ್ಮ ಸಾಕ್ಷಾತ್ಕಾರವನ್ನು ಸೂಚಿಸುತ್ತದೆ. ಓಂಕಾರ ಈ ಅನುಭವಕ್ಕೆ ಸಂಕೇತವಾಗಿದ್ದು, ಅದು ಮನುಷ್ಯನನ್ನು ದೇಹದ ಮನಸ್ಸಿನ ಬುದ್ಧಿಯ ಮತ್ತು ಅಹಂಕಾರದ ಬಂಧನಗಳಿಂದ ಮುಕ್ತ ಮಾಡುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ʼಓಂʼಕಾರದ ಅರ್ಥವನ್ನು ಅರಿತುಕೊಂಡು ಯೋಗಿಯೂ ತನ್ನ ಇಷ್ಟ ದೇವತೆಯ ನಾಮದೊಡನೆ ಅದನ್ನು ಸೇರಿಸಿ ಪ್ರಾರ್ಥಿಸುತ್ತಾನೆ. ʼಓಂʼ ಎನ್ನುವುದು ಬಹು ವ್ಯಾಪಕವಾಗಿದ್ದು, ಅನಿರ್ದಿಷ್ಟವಾದ್ದರಿಂದ ಸಾಧಕನು ತನ್ನ ಇಂದ್ರಿಯಗಳನ್ನು, ಬುದ್ಧಿಯನ್ನು, ಮನಸ್ಸನ್ನು ದೇವರ ಹೆಸರಿನ ಮೇಲೆ ಕೇಂದ್ರೀಕರಿಸಿ, ʼಓಂʼಕಾರವನ್ನು ಸೇರಿಸಿ ತದೇಕಚಿತ್ತದಿಂದ, ಭಕ್ತಿಯಿಂದ ಮಂತ್ರದ ಅರ್ಥವನ್ನು ಗ್ರಹಿಸಲು ಅನುಭವಿಸುತ್ತಾನೆ.
ಯೋಗಿಯು ಉಪನಿಷತ್ತಿನ ಈ ಶ್ಲೋಕಗಳನ್ನು ನೆನೆಯುತ್ತಾನೆ :
ಧನುರ್ಗೃಹೀತ್ವೌಪನಿಷದಂ ಮಹಾಸ್ತ್ರಂ ಶರಂ ಹ್ಯುಪಾಸಾನಿಶಿತಂ ಸಂಧಯೀತ |
ಆಯಮ್ಯ ತದ್ಬಾವಗತೇನ ಚೇತಸಾ ಲಕ್ಷ್ಯಂ ತದೇವಾಕ್ಷರಂ ಸೌಮ್ಯ ವಿದ್ಧಿ ||
ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯ ಮುಚ್ಯತೇ |
ಅಪ್ರಮತ್ತೇನ ವೇದ್ಬವ್ಯಂ ಶರವತ್ ತನ್ಮಯೋ ಭವೇತ್ ||
–ಮುಂಡಕೋಪನಿಷತ್, ೨-೨-೩ ಮತ್ತು ೪
“ಉಪನಿಷತ್ ಎಂಬ ಬಿಲ್ಲನ್ನು ತೆಗೆದುಕೊಂಡು ಸತತವಾದ ಧ್ಯಾನದಿಂದ, ಸಂಸ್ಕೃತವಾದ ಹರಿತವಾದ ಬಾಣವನ್ನು ಕೊಡಬೇಕು. ತತ್ವಾರ್ಥದ ಯೋಜನೆಯಿಂದ ಏಕಾಗ್ರಚಿತ್ತದಿಂದ ಅಂತ ಬಿಲ್ಲನ್ನೆಳದು, ಅಕ್ಷರಬ್ರಹ್ಮದ ಗುರಿಯಲ್ಲಿ ಅಂತರ್ಗತವಾಗುವಂತೆ ಬಾಣವನ್ನು ನೇಡಬೇಕು. ʼಓಂʼ ಎನ್ನುವುದು ಬಿಲ್ಲು, ಆತ್ಮವೇ ಅಂಬು, ಬ್ರಹ್ಮವೇ ಗುರಿ. ಏಕಾಗ್ರತೆಯನ್ನು ಅಭ್ಯಾಸ ಮಾಡಿದವನು ಅದನ್ನ ಭೇದಿಸುವುದಲ್ಲದೆ, ಗುರಿಯನ್ನು ಬಾಣಸಿಕ್ಕಿಕೊಳ್ಳುವಂತೆ ಸಾಧಕನು ಬ್ರಹ್ಮನಲ್ಲಿಯೇ ಲೀನನಾಗುತ್ತಾನೆ.”