ಮನೆ ಮನರಂಜನೆ ‘ಧರಣಿ ಮಂಡಲ ಮಧ್ಯದೊಳಗೆ’: ಸಿನಿಮಾ ವಿಮರ್ಶೆ

‘ಧರಣಿ ಮಂಡಲ ಮಧ್ಯದೊಳಗೆ’: ಸಿನಿಮಾ ವಿಮರ್ಶೆ

0

ನಾವು ಒಬ್ಬರಿಗೆ ಸಹಾಯ ಮಾಡಿದರೆ, ಇನ್ಯಾರೋ, ಮತ್ತಾವುದೋ ಗಳಿಗೆಯಲ್ಲಿ ನಮ್ಮ ನೆರವಿಗೆ ಬರುತ್ತಾರೆ ಅನ್ನೋದು ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದ ಥೀಮ್.

ಹೊಸ ನಿರ್ದೇಶಕ ಶ್ರೀಧರ್ ಶಿಕಾರಿಪುರ ತಮ್ಮ ಮೊದಲ ಯತ್ನದಲ್ಲೇ ಒಂದು ವಿಭಿನ್ನ ಮಾದರಿಯ ನಿರೂಪಣೆಯನ್ನು ಈ ಸಿನಿಮಾದ ಮೂಲಕ ಹೇಳುತ್ತ ಹೋಗುತ್ತಾರೆ. ಇದೊಂದು ಹೈಪರ್ ಲಿಂಕ್ ಮಾದರಿಯ ಸಿನಿಮಾ. ಕೆಲವೇ ಗಂಟೆಗಳಲ್ಲಿ ನಡೆಯುವ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯಲ್ಲಿ ಹಲವು ಕಥೆಗಳಿವೆ, ಹಲವು ಪಾತ್ರಗಳಿವೆ. ಅವುಗಳನ್ನು ಒಂದಕ್ಕೊಂದು ಬೆಸೆಯುತ್ತ, ಕುತೂಹಲಕಾರಿಯಾಗಿ ಚಿತ್ರಕಥೆಯನ್ನು ಹೇಳುತ್ತ ಹೋಗಿರುವುದೇ ನಿರ್ದೇಶಕರ ಜಾಣ್ಮೆ.

ಬಾಕ್ಸರ್ ಚಾಂಪಿಯನ್ ಆಗಬೇಕೆಂದಿರುವ ಆದಿ (ನವೀನ್ ಶಂಕರ್) ಮತ್ತು ಆತನ ಗೆಳತಿ ಮಾದಕ ವ್ಯಸನಿ ಶ್ರೇಯಾ (ಐಶಾನಿ ಶೆಟ್ಟಿ). ಇವರದು ಒಂದು ಕಥೆಯಾದರೆ, ಐದು ವರ್ಷಗಳ ನಂತರ ಮಗನನ್ನು ನೋಡಲು ಬೆಂಗಳೂರಿಗೆ ಬರುತ್ತಿರುವ ಅಪ್ಪ-ಅಮ್ಮ, ಅವರನ್ನು ನೋಡಲು ಕಾತುರನಾಗಿರುವ ಮಗ ಶಿವು (ಯಶ್ ಶಟ್ಟಿ) ಮತ್ತೊಂದು ಕಡೆ.

ಭೂಗತ ಜಗತ್ತಿನ ಆಂಟನಿ ಮತ್ತವನ ಗ್ಯಾಂಗ್. ಪ್ರೀತಿಯಲ್ಲಿ ಸೋತು ಸಾಯಬೇಕೆಂದಿರುವ ಭಗ್ನ ಪ್ರೇಮಿ (ನಿತೇಶ್) ಮತ್ತು ಅವನ ಸ್ನೇಹಿತ ಮಾರ್ಯಾದೆ ರಾಮಣ್ಣ (ಪ್ರಕಾಶ್) ಒಂದು ಕಡೆ. ವಿಚಿತ್ರ ವರ್ತನೆಯ ಪ್ಯಾರಾಚೂಟ್ (ಸಿದ್ದು ಮೂಲಿಮನಿ) ಹಾಗೂ ಡಿಸ್ಕೋ (ಓಂಕಾರ್) ಕೂಡ ಇಲ್ಲಿದ್ದಾರೆ. ಇವರೆಲ್ಲರ ಜೊತೆಗೆ ಇನ್ನೂ ಒಂದಷ್ಟು ಪಾತ್ರಗಳಿವೆ. ಇವರೆಲ್ಲರೂ ಒಂದೇ ಊರಿನಲ್ಲಿದ್ದಾರೆ. ಒಂದೇ ರಾತ್ರಿ ಇಷ್ಟು ಪಾತ್ರಗಳು ಒಂದಕ್ಕೊಂದು ಸಂಧಿಸುತ್ತವೆ; ಪ್ರತ್ಯಕ್ಷವಾಗಿ, ಪರೋಕ್ಷವಾಗಿ! ಅದು ಹೇಗೆ ಅನ್ನೋದೇ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದ ಹೈಲೈಟ್.

ಕಥೆ, ಪಾತ್ರಗಳು ಒಂದಕ್ಕೊಂದು ಬೆಸೆದುಕೊಂಡಿರುವ ಹೈಪರ್ ಲಿಂಕ್ ಮಾದರಿಯ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾವನ್ನು ನಿರ್ದೇಶಕರು ಯಾವುದೇ ಗೊಂದಲವಿಲ್ಲದೆ, ಸರಾಗವಾಗಿ ತೆರೆಮೇಲೆ ತಂದಿದ್ದಾರೆ.

ಸಾಮಾನ್ಯವಾಗಿ ಇಂಥ ಸ್ಕ್ರಿಪ್ಟ್’ಗಳನ್ನು ಹಾಳೆ ಮೇಲೆ ಬರೆದುಕೊಂಡಷ್ಟು ಸುಲಭವಾಗಿ ತೆರೆಮೇಲೆ ತರಲು ಆಗುವುದಿಲ್ಲ. ಆ ವಿಚಾರದಲ್ಲಿ ನಿರ್ದೇಶಕ ಶ್ರೀಧರ್’ಗೆ ಛಾಯಾಗ್ರಾಹಕ ಕೀರ್ತನ್ ಪೂಜಾರಿ ಹಾಗೂ ಸಂಕಲನಕಾರ ಉಜ್ವಲ್ ಚಂದ್ರ ಉತ್ತಮ ಸಾಥ್ ನೀಡಿದ್ದಾರೆ.

ನಿರ್ದೇಶಕರ ಭಿನ್ನ ಆಲೋಚನೆಗೆ ತಕ್ಕಂತೆ ಹೊಸ ಮಾದರಿಯ ಸಂಗೀತ ನೀಡಿ ಭೇಷ್ ಎನಿಸಿಕೊಂಡಿದ್ದಾರೆ ರೋನಾಡ್ ಬಕ್ಕೇಶ್ ಹಾಗೂ ಕಾರ್ತಿಕ್ ಚನ್ನೋಜಿ ರಾವ್ ಜೋಡಿ.

ಅನೇಕ ಪಾತ್ರಗಳಿರುವ ಕಾರಣ, ಸಿನಿಮಾ ಅವಧಿಯೂ ಕೊಂಚ ಜಾಸ್ತಿ ಇದೆ ಎನಿಸುತ್ತದೆ. ಚಿತ್ರದಲ್ಲಿರುವ ಬ್ರೇಕ್ ಅಪ್ ಸಾಂಗ್ ನೋಡಲು, ಕೇಳಲು ಚೆನ್ನಾಗಿದೆ. ಆದರೆ, ಸಿನಿಮಾದ ಅವಧಿ ಹಿಗ್ಗಿಕೊಳ್ಳಲು ಇದು ಕೂಡ ಕಾರಣ.

ಇನ್ನು, ಸಂಭಾಷಣೆ ಸಿನಿಮಾಗೆ ಸಾಕಷ್ಟು ಬಲ ತುಂಬಿದೆ. ಹಾಸ್ಯ ದೃಶ್ಯಗಳು ಕೂಡ ನಗು ತರಿಸುತ್ತವೆ. ಒಂದೇ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್, ಫ್ಯಾಮಿಲಿ ಎಮೋಷನ್, ಕಾಮಿಡಿ, ಲವ್ ಸ್ಟೋರಿ, ಆಕ್ಷನ್, ಮಾಫಿಯಾ, ಕ್ರೈಂ.. ಹೀಗೆ ಹಲವು ವಿಚಾರಗಳನ್ನು ಟಚ್ ಮಾಡಿದ್ದಾರೆ ಶ್ರೀಧರ್ ಶಿಕಾರಿಪುರ.

‘ಗುಳ್ಟು’ ಸಿನಿಮಾದಿಂದ ಖ್ಯಾತಿ ಪಡೆದಿದ್ದ ನವೀನ್ ಶಂಕರ್ ಇಲ್ಲಿ ಆದಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಯಾವ ಎಮೋಷನ್ ಅನ್ನು ಕೂಡ ಅತೀ ಎನಿಸದೆ, ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಮಾತಿಗಿಂತ ಮೌನದಲ್ಲೇ ನವೀನ್ ಹೆಚ್ಚು ಸ್ಕೋರ್ ಮಾಡುತ್ತಾರೆ. ಇದುವರೆಗೂ ಮಾಡಿರುವ ಪಾತ್ರಗಳಿಗಿಂತ ಭಿನ್ನವಾದ ಪಾತ್ರದಲ್ಲಿ ಐಶಾನಿ ಶೆಟ್ಟಿ ಮತ್ತು ಸಿದ್ದು ಮೂಲಿಮನಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ನಿಜಕ್ಕೂ ಅಚ್ಚರಿ ನೀಡುತ್ತಾರೆ.

ವಿಲನ್ ಆಗಿ ಅಬ್ಬರಿಸಿದ ಯಶ್ ಶೆಟ್ಟಿಗೆ ಈ ಸಿನಿಮಾದಲ್ಲಿ ಸಖತ್ ಎಮೋಷನಲ್ ಪಾತ್ರ ನೀಡಲಾಗಿದೆ. ನಿತೇಶ್ ಮತ್ತು ಪ್ರಕಾಶ್ ತುಮ್ಮಿನಾಡು ತೆರೆಮೇಲೆ ಇದ್ದಷ್ಟು ಹೊತ್ತು ನಕ್ಕು ನಗಿಸುತ್ತಾರೆ. ಡಿಸ್ಕೋ ಪಾತ್ರದಲ್ಲಿ ಓಂಕಾರ್ ಗಮನಸೆಳೆದರೆ, ಬಾಲ್ ರಾಜ್ವಾಡಿ, ಕಡ್ಡಿಪುಡಿ ಕಾಂತರಾಜ್ & ಗ್ಯಾಂಗ್ ನಿಜಕ್ಕೂ ಪಾತಕಿಗಳೇನೋ ಎಂಬಷ್ಟರ ಮಟ್ಟಿಗೆ ಹೊಂದಿಕೊಂಡಿದ್ದಾರೆ.

ಜಯಶ್ರೀ ಆರಾಧ್ಯ, ಕರಿ ಸುಬ್ಬು, ಮೋಹನ್ ಜುನೇಜಾ, ಸುಂದರ್ ವೀಣಾ, ಚನ್ನ ಕೇಶವ ಮುಂತಾದವರು ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.