ಧರ್ಮಸ್ಥಳ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಸುಳ್ಳುಗಳ ಸರಮಾಲೆ ಹೆಣೆದು ಕಥೆ ಕಟ್ಟಿದ್ದ, ಮುಸುಕುಧಾರಿ ಚಿನ್ನಯ್ಯನನ್ನು ಸತತ ವಿಚಾರಣೆಯ ಬಳಿಕ ವಿಶೇಷ ತನಿಖಾ ತಂಡ ಅರೆಸ್ಟ್ ಮಾಡಿದ್ದಾರೆ.
ಅನಾಮಿಕ ತೋರಿಸಿದ 17 ಪಾಯಿಂಟ್‌ಗಳಲ್ಲಿ ಏನೂ ಸಿಗದಿದ್ದ, ಹಿನ್ನೆಲೆ ಎಸ್‌ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ ಮಾಸ್ಕ್ ಮ್ಯಾನ್ ವಿರುದ್ಧವೇ ರಿವರ್ಸ್ ತನಿಖೆ ಶುರು ಮಾಡಿತ್ತು. ಈ ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ್ದರು. ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನ ಇಟ್ಟಿದ್ದರು.

ಅನಾಮಿಕ ದೂರುದಾರನ ಮುಂದೆ ವೀಡಿಯೋ ಪ್ರದರ್ಶನ ಮಾಡಿ ತನಿಖೆ ಪ್ರಕ್ರಿಯೆಯನ್ನೂ ಮುಂದುವರಿಸಿದ್ದರು. ಇಷ್ಟೆಲ್ಲಾ ತನಿಖೆ ಬಳಿಕ ಮಾಸ್ಕ್ ಮ್ಯಾನ್ ಹೆಣೆದಿದ್ದು ಸುಳ್ಳಿನ ಬಲೆ ಎಂಬುದು ಸಾಬೀತಾಗಿದೆ. ಮುಸುಕುಧಾರಿ ಹೇಳಿದ್ದೆಲ್ಲ ಸುಳ್ಳು ಎಂದು ತಿಳಿಯುತ್ತಿದ್ದಂತೆ ಆತನನ್ನ ಬಂಧಿಸಿದ್ದಾರೆ. ಇಂದು ಕೋರ್ಟ್‌ಗೆ ಹಾಜರುಪಡಿಸಿ ಬಳಿಕ ಆತನನ್ನ ಕಸ್ಟಡಿ ವಿಚಾರಣೆಗೆ ಪಡೆಯುವ ಸಾಧ್ಯತೆಯಿದೆ.
ಎಸ್‌ಐಟಿ ಪೊಲೀಸರ ಪ್ರಶ್ನೆಗಳಿಗೆ ನಿರೀಕ್ಷೆಯಂತೆ ಯಾವುದೇ ಉತ್ತರಗಳು ಅನಾಮಿಕನಿಂದ ಬಂದಿರಲ್ಲ. ಬದಲಾಗಿ ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ ಬುರುಡೆ ಯಾವ ಭಾಗದಿಂದ ತೆಗೆದು ತಂದದ್ದು ಎಂಬ ಪ್ರಶ್ನೆಗೂ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಬಂಗ್ಲೆ ಗುಡ್ಡೆ, ಕಲ್ಲೇರಿ, ರತ್ನಗಿರಿ, ಬೋಳಿಯಾರು ಎಂಬ ಉತ್ತರವನ್ನಷ್ಟೇ ಹೇಳಿದ್ದ. ತೀವ್ರ ವಿಚಾರಣೆ ಬಳಿಕ ಮಾಸ್ಕ್ ಮ್ಯಾನ್ ಬಿಟ್ಟಿದ್ದೆಲ್ಲವೂ ಬುರುಡೆ ಅನ್ನೋದು ಗೊತ್ತಾಗಿ, ಮಾಸ್ಕ್ ಮ್ಯಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.















