ಮನೆ ಪೌರಾಣಿಕ ಧುಂಧುಮಾರ

ಧುಂಧುಮಾರ

0

ರಾಜ ಕುವಲಾಶ್ವನು ದುಂಧುಮಾರನೆಂದು ಹೇಗಾದನು ಎನ್ನುವ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೯೨-೧೯೫) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು.

Join Our Whatsapp Group

ವಿಷ್ಣುವಿನ ಕೀರ್ತನೆಯಿರುವ, ಈ ಪುಣ್ಯಕಥೆಯನ್ನು ಕೇಳುವ ನರನು ಧರ್ಮಾತ್ಮನೂ ಪುತ್ರವಂತನೂ ಆಗುತ್ತಾನೆ. ಪರ್ವಗಳಲ್ಲಿ ಕೇಳುವವನು ಧೃತಿವಂತನೂ ಆಯುಷ್ಮಂತನೂ ಆಗುತ್ತಾನೆ. ವ್ಯಾಧಿಭಯ ಯಾವುದನ್ನೂ ಹೊಂದದೇ ವಿಗತಜ್ವರನಾಗುತ್ತಾನೆ.

ಮಹರ್ಷಿಯೆಂದು ವಿಶ್ರುತನಾದ ಉತ್ತಂಕನು ರಮ್ಯವಾದ ಮರುಭೂಮಿಯಲ್ಲಿ ತನ್ನ ಆಶ್ರಮದಲ್ಲಿದ್ದನು. ಈ ಉತ್ತಂಕನು ವಿಷ್ಣುವನ್ನು ಮೆಚ್ಚಿಸಲು ಬಹಳ ವರ್ಷಗಳ ದುಶ್ಚರ ತಪಸ್ಸನ್ನು ನಡೆಸಿದನು. ಅವನಿಂದ ಪ್ರೀತನಾದ ಭಗವಂತನು ಸಾಕ್ಷಾತ್ ದರ್ಶನವನ್ನಿತ್ತನು. ನೋಡಿದಾಕ್ಷಣವೇ ಋಷಿಯು ನಮಸ್ಕರಿಸಿ, ವಿವಿಧ ಸ್ತವಗಳಿಂದ ತುಷ್ಟಿಗೊಳಿಸಿದನು: “ದೇವ! ನಿನ್ನಿಂದಲೇ ಈ ಸರ್ವ ಪ್ರಜೆಗಳೂ, ದೇವ-ಅಸುರ-ಮಾನವರೂ ಸೇರಿ, ಇರುವ ಸ್ಥಾವರ ಜಂಗಮಗಳೂ ನಿನ್ನಿಂದ. ಮಹಾದ್ಯುತೇ! ಬ್ರಹ್ಮ, ವೇದಗಳೂ, ವೇದ್ಯಗಳೂ ಕೂಡ ನಿನ್ನಿಂದ ಸೃಷ್ಟಿಸಲ್ಪಟ್ಟಿವೆ. ದೇವ! ನಿನ್ನ ಶಿರವು ಗಗನ, ನೇತ್ರಗಳು ಶಶಿ-ದಿವಾಕರರು. ಅಚ್ಯುತ! ನಿನ್ನ ಉಸಿರು ವಾಯು ಮತ್ತು ತೇಜಸ್ಸು ಅಗ್ನಿ. ಎಲ್ಲ ದಿಕ್ಕುಗಳೂ ನಿನ್ನ ಬಾಹುಗಳು ಮತ್ತು ಮಹಾಸಾಗರವೇ ನಿನ್ನ ಒಡಲು. ದೇವ! ಮಧುಸೂದನ! ಪರ್ವತಗಳೇ ನಿನ್ನ ತೊಡೆಗಳು. ಆಕಾಶವೇ ನಾಭಿ. ಪೃಥಿವೀ ದೇವಿಯು ನಿನ್ನ ಪಾದಗಳು ಮತ್ತು ಅರಣ್ಯೌಷಧಿಗಳು ನಿನ್ನ ರೋಮಗಳು. ಇಂದ್ರ, ಸೋಮ, ಅಗ್ನಿ, ವರುಣರು, ದೇವಾಸುರಮಹೋರಗರು ನಿನ್ನನ್ನು ವಿವಿಧ ಸ್ತವಗಳಿಂದ ಸ್ತುತಿಸಿ ತಲೆಬಾಗಿ ನಮಸ್ಕರಿಸಿ ನಿಂತಿರುವರು. ಸರ್ವ ಭೂತಗಳಲ್ಲಿ ನೀನು ವ್ಯಾಪಿಸಿರುವೆ. ಯೋಗಿಗಳು, ಮಹಾವೀರರು, ಮುಹರ್ಷಿಗಳು ನಿನ್ನನ್ನು ಸ್ತುತಿಸುತ್ತಾರೆ. ನೀನು ತುಷ್ಟನಾಗಿದ್ದರೆ ಜಗತ್ತು ಸ್ವಸ್ಥವಾಗಿರುತ್ತದೆ. ನೀನು ಕ್ರುದ್ಧನಾದರೆ ಮಹಾ ಭಯವುಂಟಾಗುತ್ತದೆ. ನೀನು ಭಯಗಳನ್ನು ಹೋಗಲಾಡಿಸುವವನು. ದೇವತೆಗಳು, ಮನುಷ್ಯರ ಮತ್ತು ಸರ್ವಭೂತಗಳ ಹಿತಕಾರಕ ನೀನು. ದೇವ! ತ್ರಿವಿಕ್ರಮನಾಗಿ ಮೂರೂ ಲೋಕಗಳನ್ನು ವ್ಯಾಪಿಸಿ ಸಮೃದ್ಧರಾಗಿದ್ದ ಅಸುರರನ್ನು ನೀನು ನಾಶಗೊಳಿಸಿದೆ. ನಿನ್ನ ವಿಕ್ರಮದಿಂದ ದೇವತೆಗಳು ಪರಮ ನಿರ್ವಾಣವನ್ನು ಹೊಂದಿದರು. ನಿನ್ನ ಕ್ರೋಧದಿಂದ ದೈತ್ಯೇಂದ್ರರು ಪರಾಭವ ಹೊಂದಿದರು. ಇಲ್ಲಿರುವ ಎಲ್ಲವುಗಳ ಕರ್ತನೂ ನೀನೇ. ವಿಕರ್ತನೂ ನೀನೇ. ನಿನ್ನನ್ನು ಆರಾಧಿಸಿ ದೇವತೆಗಳೆಲ್ಲರೂ ಸುಖವನ್ನು ಪಡೆಯುತ್ತಾರೆ.”

ಮಹಾತ್ಮ ಉತ್ತಂಕನು ಹೀಗೆ ಸ್ತುತಿಸಲು ಹೃಷೀಕೇಶ ವಿಷ್ಣುವು “ಉತ್ತಂಕ! ನಿನ್ನಿಂದ ಪ್ರೀತನಾಗಿದ್ದೇನೆ. ವರವನ್ನು ಕೇಳು” ಎಂದನು.

ಉತ್ತಂಕನು ಹೇಳಿದನು: “ನಾನು ಪುರುಷ, ಶಾಶ್ವತ, ದಿವ್ಯ, ಸೃಷ್ಟಾರ, ಜಗತ್ತಿನ ಪ್ರಭು, ಹರಿಯನ್ನು ನೋಡಿದೆ ಎನ್ನುವ ವರದಿಂದಲೇ ತುಂಬಿಹೋಗಿದ್ದೇನೆ.”

ವಿಷ್ಣುವು ಹೇಳಿದನು: “ದ್ವಿಜಸತ್ತಮ! ನಾನು ನಿನ್ನ ನಿಷ್ಟೆ ಮತ್ತು ಭಕ್ತಿಗಳಿಗೆ ಒಲಿದಿದ್ದೇನೆ. ಅವಶ್ಯವಾಗಿ ನೀನು ನನ್ನಿಂದ ವರವನ್ನು ಪಡೆಯಬೇಕು.” ಈ ರೀತಿ ಹರಿಯು ಒತ್ತಾಯಿಸಿ ವರವನ್ನು ನೀಡಲು ಉಂತ್ತಂಕನು ಕೈಮುಗಿದು ವರವನ್ನು ಕೇಳಿದನು: “ಭಗವನ್! ಪುಂಡರೀಕಾಕ್ಷ! ನನ್ನ ಮೇಲೆ ಪ್ರೀತನಾದರೆ ನನ್ನ ಬುದ್ಧಿಯು ಸದಾ ಧರ್ಮ, ಸತ್ಯ, ದಮಗಳಲ್ಲಿರಲಿ. ಮಹೇಶ್ವರ! ನಿತ್ಯವೂ ನಿನ್ನ ಭಕ್ತಿಯ ಅಭ್ಯಾಸದಲ್ಲಿರುವಂತಾಗಲಿ.”

ವಿಷ್ಣುವು ಹೇಳಿದನು: “ದ್ವಿಜ! ಇವೆಲ್ಲವೂ ನನ್ನ ಪ್ರಸಾದದಿಂದ ಆಗುತ್ತವೆ. ಯೋಗವು ನಿನಗೆ ತೋರಿಸಿಕೊಳ್ಳುತ್ತದೆ. ಅದರಿಂದ ಯುಕ್ತನಾಗಿ ದೇವತೆಗಳಿಗೆ ಮತ್ತು ಮೂರು ಲೋಕಗಳಿಗೆ ಮಹಾ ಕಾರ್ಯವನ್ನು ಮಾಡುತ್ತೀಯೆ. ಲೋಕಗಳನ್ನು ಉರುಳಿಸುವ ಸಲುವಾಗಿ ಧುಂಧು ಎಂಬ ಮಹಾಸುರನು ಘೋರವಾದ ತಪಸ್ಸನ್ನು ತಪಿಸುತ್ತಿದ್ದಾನೆ. ಅವನನ್ನು ನೀನು ಸಂಹರಿಸುತ್ತೀಯೆ. ಕೇಳು. ಬೃಹದಶ್ವ ಎಂದು ಖ್ಯಾತನಾದ ರಾಜನಾಗುತ್ತಾನೆ. ಅವನ ಮಗನು ಶುಚಿಯು, ದಾಂತನೂ ಆದ ಕುವಲಾಶ್ವನೆಂದು. ಆ ಪಾರ್ಥಿವೋತ್ತಮನು ನನ್ನ ಯೋಗಬಲವನ್ನು ಆಶ್ರಯಿಸಿ ನಿನ್ನ ಶಾಸನದಂತೆ ಧುಂಧುಮಾರನಾಗುತ್ತಾನೆ.”

ಉತ್ತಂಕನಿಗೆ ಹೀಗೆ ಹೇಳಿ ವಿಷ್ಣುವು ಅಂತರ್ಧಾನನಾದನು.

ಇಕ್ಷ್ವಾಕುವಿನ ಮರಣದ ನಂತರ ಶಶಾದನು ಈ ಪೃಥ್ವಿಯನ್ನು ಪಡೆದನು ಮತ್ತು ಪರಮಧರ್ಮಾತ್ಮನಾಗಿ ಅಯೋಧ್ಯೆಯ ನೃಪನಾದನು. ವೀರ್ಯವಾನ್ ಕಕುಸ್ಥ ಎಂಬ ಹೆಸರಿನವನು ಶಶಾದನ ಮಗನು. ಅನೇನನು ಕಕುಸ್ಥನ ಮಗ ಮತ್ತು ಪೃಥುವು ಅನೇನನ ಮಗ. ವಿಶ್ವಗಶ್ವನು ಪೃಥುವಿನ ಮಗ. ಅವನಲ್ಲಿ ಆದ್ರನು ಜನಿಸಿದನು. ಆದ್ರನ ಮಗ ಯುವನಾಶ್ವ. ಅವನ ಮಗ ಶ್ರಾವಸ್ತ. ರಾಜ ಶ್ರಾವಸ್ತನು ಶ್ರಾವಸ್ತಿಯನ್ನು ನಿರ್ಮಿಸಿದನು. ಶ್ರಾವಸ್ತನ ಮಗ ಮಹಾಬಲಿ ಬೃಹದಶ್ವ. ಬೃಹದಶ್ವನ ಮಗ ಕುವಲನೆಂದು ಖ್ಯಾತನಾದನು. ಕುವಲಾಶ್ವನಿಗೆ ಇಪ್ಪತ್ತೊಂದು ಸಾವಿರ ಪುತ್ರರು. ಎಲ್ಲರೂ ವಿದ್ಯಾಪ್ರವೀಣರು, ಬಲಬಂತರು, ಮತ್ತು ದುರಾಸದರು. ಕುವಲಾಶ್ವನು ಗುಣಗಳಲ್ಲಿ ತಂದೆಗಿಂತ ಅಧಿಕನಾಗಿದ್ದನು. ಸಮಯವು ಬಂದಾಗ ಬೃಹದಶ್ವನು ಶೂರನೂ ಉತ್ತಮ ಧಾರ್ಮಿಕನೂ ಆದ ಕುವಲಾಶ್ವನನ್ನು ರಾಜನನ್ನಾಗಿ ಅಭಿಷೇಕಿಸಿದನು. ಆ ಅಮಿತ್ರಹ ಮಹೀಪತಿ ಧೀಮಂತ ಬೃಹದಾಶ್ವನು ಪುತ್ರನಿಗೆ ಸಂಪತ್ತನ್ನು ಕೊಟ್ಟು ತಪೋವನಕ್ಕೆ ತಪಸ್ಸಿಗೆ ಹೊರಟನು. ದ್ವಿಜೋತ್ತಮ ಉತ್ತಂಕನು ರಾಜರ್ಷಿ ಬೃಹದಶ್ವನು ವನಕ್ಕೆ ಹೋಗುತ್ತಿದ್ದಾನೆಂದು ಕೇಳಿದನು. ಆಗ ಮಹಾತೇಜ ಅಮೇಯಾತ್ಮ ಉತ್ತಂಕನು ಸರ್ವ ಅಸ್ತ್ರವಿದುಷರಲ್ಲಿ ಶ್ರೇಷ್ಠನಾದ ನರೋತ್ತಮನ ಬಳಿಸಾರಿ ತಡೆದು ಹೇಳಿದನು: “ರಾಜನ್! ರಕ್ಷಣೆಯು ನಿನ್ನ ಕಾರ್ಯ. ಆದುದರಿಂದ ನೀನು ಅದನ್ನು ಮಾಡಬೇಕು. ನಿನ್ನ ಪ್ರಸಾದದಿಂದ ನಾವು ನಿರುದ್ವಿಗ್ನರಾಗಿರುತ್ತೇವೆ. ಮಹಾತ್ಮನಾದ ನಿನ್ನಿಂದ ರಕ್ಷಿಸಲ್ಪಟ್ಟ ಈ ಭೂಮಿಯು ನಿರುದ್ವಿಗ್ನವಾಗಿರುತ್ತದೆ. ನೀನು ಅರಣ್ಯಕ್ಕೆ ಹೋಗಬಾರದು. ಇಲ್ಲಿ ಪ್ರಜೆಗಳ ಪಾಲನೆಯೇ ಮಹಾ ಧರ್ಮವೆಂದು ತೋರುತ್ತದೆ. ಅರಣ್ಯದಲ್ಲಿ ಇದು ಹೀಗೆಯೇ ಇರುವುದಿಲ್ಲ. ಆದುದರಿಂದ ನಿನ್ನ ಈ ನಿಶ್ಚಯವನ್ನು ಬಿಟ್ಟುಬಿಡು. ರಾಜರ್ಷಿಗಳು ಹಿಂದಿನಿಂದ ಮಾಡಿಕೊಂಡು ಬಂದಿರುವ ಪ್ರಜಾಪಾಲನೆಗಿಂತ ಹೆಚ್ಚಿನದಾದ ಧರ್ಮವು ಬೇರೆ ಎಲ್ಲಿಯೂ ಇಲ್ಲ. ರಾಜನಿಂದ ರಕ್ಷಿಸಲ್ಪಡಬೇಕಾದ ಪ್ರಜೆಗಳ ರಕ್ಷಣೆಯನ್ನು ನೀನು ಮಾಡಬೇಕು. ನಾನು ನಿರುದ್ವಿಗ್ನನಾಗಿ ತಪಸ್ಸನ್ನು ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಆಶ್ರಮದ ಸಮೀಪದಲ್ಲಿ ಮರುಭೂಮಿಯ ಸಮಭೂಮಿಯಲ್ಲಿ ಉಜ್ಜನಕ ಎಂದು ಹೇಳಿಕೊಂಡು ಬಂದಿರುವ, ಬಹುಯೋಜನ ವಿಸ್ತೀರ್ಣದ ಬಹುಯೋಜನ ವಿಶಾಲವಾದ ಮರಳಿನ ರಾಶಿಯಿದೆ. ಅಲ್ಲಿ ಮಧುಕೈಟಭರ ಪುತ್ರ ಧುಂಧು ಎಂಬ ಹೆಸರಿನ ಸುದಾರುಣ, ರೌದ್ರ, ಮಹಾವೀರ್ಯಪರಾಕ್ರಮಿ ದಾನವೇಂದ್ರನಿದ್ದಾನೆ. ಆ ಅಮಿತವಿಕ್ರಮನು ಭೂಮಿಯು ಆಳದಲ್ಲಿ ವಾಸಿಸುತ್ತಾನೆ. ಅವನನ್ನು ಕೊಂದು ನೀನು ವನಕ್ಕೆ ಹೋಗಬೇಕು. ತ್ರಿದಶರ ಮತ್ತು ಲೋಕಗಳ ವಿನಾಶಕ್ಕಾಗಿ ದಾರುಣವಾದ ತಪಸ್ಸನ್ನಾಚರಿಸುತ್ತಿದ್ದಾನೆ. ಅವನು ದೇವತೆಗಳಿಗಾಗಲೀ, ದೈತ್ಯರಾಕ್ಷಸರಿಗಾಗಲೀ, ನಾಗಗಳಿಗಾಗಲೀ, ಯಕ್ಷರಿಗಾಗಲೀ, ಗಂಧರ್ವರಿಗಾಗಲೀ, ಎಲ್ಲರಿಗೂ ಅವಧ್ಯ. ಆ ವರವನ್ನು ಅವನು ಸರ್ವಲೋಕ ಪಿತಾಮಹನಿಂದ ಪಡೆದಿದ್ದಾನೆ. ನಿನಗೆ ಮಂಗಳವಾಗಲಿ! ಅವನನ್ನು ನಾಶಪಡಿಸು. ಬೇರೆ ಯಾವ ನಿಶ್ಚಯವನ್ನೂ ತೆಗೆದುಕೊಳ್ಳಬೇಡ! ಮಹತ್ತರವಾದ, ಶಾಶ್ವತವಾದ, ಅವ್ಯಯವಾದ, ನಿಶ್ಚಯವಾದ ಕೀರ್ತಿಯನ್ನು ಹೊಂದುತ್ತೀಯೆ. ಒಂದುವರ್ಷದ ನಂತರ ಮರಳಿನ ಅಡಿಯಲ್ಲಿ ವಾಸಿಸುವ ಆ ಕ್ರೂರನು ನಿಟ್ಟುಸಿರು ಬಿಟ್ಟಾಗ ಇಡೀ ಭೂಮಿಯು, ಗಿರಿ, ವನ ಕಾನನಗಳೊಂದಿಗೆ ನಡುಗುತ್ತದೆ. ಅವನ ನಿಶ್ವಾಸದೊಂದಿಗೆ ಧೂಳಿನ ಮಹಾ ಭಿರುಗಾಳಿಯೇ ಎದ್ದು ಸೂರ್ಯನ ದಾರಿಯನ್ನು ಮುಸುಕುಹಾಕುತ್ತದೆ. ಕಿಡಿಗಳಿಂದ ಜ್ವಾಲೆಗಳಿಂದ ಮತ್ತು ಹೊಗೆಯಿಂದ ಕೂಡಿದ ಆ ಅತಿದಾರುಣ ಭೂಕಂಪನವು ಏಳುದಿನವಿರುತ್ತದೆ. ಇದೇ ಕಾರಣದಿಂದ ನನ್ನ ಆ ಆಶ್ರಮದಲ್ಲಿ ನಾನೇ ನಿಲ್ಲಲು ಸಾಧ್ಯವಾಗುತ್ತಿಲ್ಲ. ಲೋಕಗಳ ಹಿತವನ್ನು ಬಯಸಿ ಅವನನ್ನು ನಾಶಪಡಿಸು. ಆ ಅಸುರನನ್ನು ನೀನು ಇಂದು ಸಂಹರಿಸಿ ಲೋಕಗಳು ಸ್ವಾಸ್ಥ್ಯದಿಂದಿರಲಿ. ಅವನ ವಿನಾಶಕ್ಕೆ ನೀನೇ ಪರ್ಯಾಪ್ತನೆಂದು ನನ್ನ ಮತ. ವಿಷ್ಣುವೂ ಕೂಡ ತನ್ನ ತೇಜಸ್ಸಿನಿಂದ ನಿನ್ನ ತೇಜಸ್ಸನ್ನು ವೃದ್ಧಿಸುತ್ತಾನೆ. ಹಿಂದೆ ವಿಷ್ಣುವು ನನಗೆ ವರವನ್ನಿತ್ತಿದ್ದನು: “ಯಾವ ರಾಜನು ಆ ರೌದ್ರ ಮಹಾ ಅಸುರನನ್ನು ವಧಿಸುತ್ತಾನೋ ಅವನನ್ನು ವಿಷ್ಣುವಿನ ದುರಾಸದ ತೇಜಸ್ಸು ಪ್ರವೇಶಿಸುತ್ತದೆ.” ಭೂಮಿಯಲ್ಲಿ ದುಃಸ್ಸಹವಾದ ಆ ತೇಜಸ್ಸನ್ನು ನೀನು ಪಡೆ. ರೌದ್ರ ಪರಾಕ್ರಮಿ ಆ ದುಷ್ಟ ದೈತ್ಯನನ್ನು ಸಂಹರಿಸು. ಧುಂಧುವಿನ ಮಹಾತೇಜಸ್ಸನ್ನು ಅಲ್ಪತೇಜಸ್ಸಿನಿಂದ ಸುಟ್ಟುಹಾಕಲು ನೂರುವರ್ಷಗಳವರೆಗಾದರೂ ಸಾಧ್ಯವಿಲ್ಲ.”

ಉತ್ತಂಕನು ಹೀಗೆ ಹೇಳಲು ಆ ಅಪರಾಜಿತ ರಾಜರ್ಷಿಯು ಅಂಜಲೀಬದ್ಧನಾಗಿ ಉತ್ತಂಕನಿಗೆ ಹೇಳಿದನು: “ಬ್ರಹ್ಮನ್! ನಿನ್ನ ಆಗಮನವು ವ್ಯರ್ಥವಾಗುವುದಿಲ್ಲ. ನನ್ನ ಪುತ್ರ ಕುವಲಾಶ್ವನೆಂದು ಪ್ರಸಿದ್ಧ. ಅವನು ಧೃತಿವಂತ, ಕ್ಷಿಪ್ರಕಾರಿ ಮತ್ತು ವೀರ್ಯದಲ್ಲಿ ಭೂಮಿಯಲ್ಲಿಯೇ ಅಪ್ರತಿಮ. ಇವನು ನಿನ್ನ ಸರ್ವ ಪ್ರಿಯ ಕಾರ್ಯಗಳನ್ನು ಮಾಡುತ್ತಾನೆ. ಸಂಶಯವಿಲ್ಲ. ಅವನು ಎಲ್ಲ ಶೂರರಾದ ಪರಿಘಬಾಹುಗಳಾದ ಮಕ್ಕಳಿಂದ ಸುತ್ತುವರೆದಿದ್ದಾನೆ. ನನ್ನನ್ನು ಬಿಟ್ಟುಬಿಡು! ನಾನು ನನ್ನ ಶಸ್ತ್ರಗಳನ್ನು ವಿಸರ್ಜಿಸಿದ್ದೇನೆ.”

ಹಾಗೆಯೆ ಆಗಲೆಂದು ಅಮಿತತೇಜಸ್ವಿ ಮುನಿಯು ಹೇಳಿದನು. ಆಗ ತನ್ನ ತನಯನನ್ನು ಮಹಾತ್ಮ ಉತ್ತಂಕನಿಗೆ ಒಪ್ಪಿಸಿ ಕಾರ್ಯವನ್ನು ನಡೆಸಿಕೊಡು ಎಂದು ಆದೇಶವನ್ನಿತ್ತು ರಾಜರ್ಷಿಯು ಉತ್ತಮ ವನಕ್ಕೆ ತೆರಳಿದನು.

ಮಹಾದ್ಯುತಿ ಧುಂಧು ಎಂಬ ಹೆಸರಿನವನು ಮಹಾತೇಜಸ್ವಿ ಮಧು-ಕೈಟಭರ ಮಗ. ಆ ಮಹಾವೀರ್ಯಪರಾಕ್ರಮಿಯು ಮಹಾ ತಪಸ್ಸನ್ನು ತಪಿಸಿದನು. ಧಮನಿಗಳು ಮಾತ್ರ ಇದ್ದ ಕೃಶನಾದ ಅವನು ಒಂದೇ ಕಾಲಿನ ಮೇಲೆ ನಿಂತುಕೊಂಡಿದ್ದನು. ಪ್ರೀತನಾಗಿ ಬ್ರಹ್ಮನು ಅವನಿಗೆ ವರವನ್ನು ಕೊಟ್ಟನು. ಆ ಪ್ರಭುವು ಈ ವರವನ್ನು ಬೇಡಿದನು: “ದೇವ, ದಾನವ, ಯಕ್ಷ, ಸರ್ಪ, ಗಂಧರ್ವ, ರಾಕ್ಷಸರಿಗೆ ನಾನು ಅವಧ್ಯನಾಗಲಿ. ಇದೇ ನಾನು ಕೇಳುವ ವರ.” “ಹಾಗೆಯೇ ಆಗುತ್ತದೆ! ಹೋಗು!” ಎಂದು ಪಿತಾಮಹನು ಅವನಿಗೆ ಹೇಳಿದನು. ಇದನ್ನು ಕೇಳಿದ ಅವನು ಅವನ ಪಾದಗಳಿಗೆ ತಲೆಯನ್ನಿರಿಸಿ ಹೋದನು. ಆ ವರವನ್ನು ಪಡೆದು ಮಹಾವೀರ್ಯಪರಾಕ್ರಮಿ ಧುಂಧುವು ಪಿತೃಗಳ ವಧೆಯನ್ನು ನೆನಪಿಸಿಕೊಂಡು ವಿಷ್ಣುವಿಗೆ ಉಪದ್ರವ ಮಾಡಿದನು. ಆ ಅಮರ್ಷಣ ಧುಂಧುವು ದೇವ-ಗಂಧರ್ವರನ್ನು ಜಯಿಸಿ ಎಲ್ಲ ದೇವತೆಗಳನ್ನೂ ವಿಷ್ಣುವನ್ನೂ ಚೆನ್ನಾಗಿ ಬಾಧಿಸಿದನು. ಉಜ್ಜಾನಕವೆಂದು ಪ್ರಸಿದ್ಧವಾದ ಮರಳಿನ ಸಮುದ್ರಕ್ಕೆ ಹೋಗಿ, ಆ ಪ್ರದೇಶದಲ್ಲಿರುವ ಉತ್ತಂಕನ ಆ ಆಶ್ರಮವನ್ನು ಪರಮ ಶಕ್ತಿಯಿಂದ ಬಾಧಿಸತೊಡಗಿದನು. ಅಲ್ಲಿ ಭೂಮಿಯ ಒಳಗೆ ಹೋಗಿ, ಮರಳಿನಲ್ಲಿ ಭೀಮಪರಾಕ್ರಮಿ, ಮಧುಕೈಟಭರ ಪುತ್ರ ಧುಂಧುವು, ತಪೋಬಲವನ್ನಾಶ್ರಯಿಸಿ ಲೋಕವಿನಾಶಕ್ಕಾಗಿ ಉತ್ತಂಕನ ಆಶ್ರಮದ ಬಳಿ ಬೆಂಕಿಯನ್ನು ಉಸಿರಾಡುತ್ತಾ ಮಲಗಿಕೊಂಡಿದ್ದನು.

ಇದೇ ಸಮಯದಲ್ಲಿ ನರಪತಿ ಅರಿಮರ್ದನ ಕುವಲಾಶ್ವನು ಸೇವಕ, ಬಲ ವಾಹನಗಳಿಂದ ಕೂಡಿದವನಾಗಿ ಇಪ್ಪತ್ತೊಂದು ಸಾವಿರ ಬಲಶಾಲಿ ಪುತ್ರರೊಂದಿಗೆ ಧುಂಧುವಿನ ವಾಸಸ್ಥಳಕ್ಕೆ ಹೊರಟನು. ಆಗ ಪ್ರಭು ಭಗವಾನ್ ವಿಷ್ಣುವು ಉತ್ತಂಕನ ನಿಯೋಗದಂತೆ ಲೋಕಗಳ ಹಿತವನ್ನು ಬಯಸಿ ತೇಜಸ್ಸಿನಿಂದ ಅವರಲ್ಲಿ ಆವೇಶಗೊಂಡನು. ಆ ದುರ್ಧರ್ಷರು ಹೊರಡುವಾಗ ದಿವಿಯಲ್ಲಿ ಈ ಶ್ರೀಮಾನ್ ನೃಪಸುತನು ಧುಂಧುಮಾರನಾಗುತ್ತಾನೆ ಎಂದು ಮಹಾ ಶಬ್ಧವುಂಟಾಯಿತು. ದೇವತೆಗಳು ದಿವ್ಯ ಪುಷ್ಪಗಳನ್ನು ಎಲ್ಲೆಡೆಯೂ ಚೆಲ್ಲಿದರು. ದೇವದುಂದುಭಿಗಳನ್ನೇ ಅವರು ಮೊಳಗಿಸಿದರು. ಆ ಧೀಮಂತನ ಪ್ರಯಾಣದಲ್ಲಿ ಶೀತಲ ಗಾಳಿಯು ಬೀಸಿತು. ಸುರೇಶ್ವರನು ಮಳೆಸುರಿಸಿ ನೆಲವನ್ನು ಧೂಳಿಲ್ಲದಂತೆ ಮಾಡಿದನು. ಮಹಾಸುರ ಧುಂಧುವಿರುವಲ್ಲಿ ಅಂತರಿಕ್ಷದಲ್ಲಿ ದೇವತೆಗಳ ವಿಮಾನಗಳು ಕಂಡುಬಂದವು. ಕುವಲಾಶ್ವ ಮತ್ತು ಧುಂಧುವಿನ ಯುದ್ಧವನ್ನು ನೋಡಲು ಕುತೂಹಲಗೊಂಡ ಮಹರ್ಷಿಗಳು ದೇವಗಂಧರ್ವರೊಡನೆ ಸೇರಿದರು. ನಾರಾಯಣನ ತೇಜಸ್ಸಿನಿಂದ ಬಲಗೊಂಡ ನೃಪತಿಯು ತನ್ನ ಪುತ್ರರೊಂದಿಗೆ ಎಲ್ಲ ದಿಕ್ಕುಗಳಿಂದಲೂ ಕ್ಷಿಪ್ರವಾಗಿ ಮುಂದುವರೆದನು. ಕುವಲಾಶ್ವನು ಮರಳಿನ ರಾಶಿಯನ್ನು ಅಗೆಯಿಸಿದನು. ಆ ಮರಳಿನ ರಾಶಿಯನ್ನು ಏಳು ದಿವಸಗಳು ಅಗೆದ ನಂತರ ಕುವಲಾಶ್ವನ ಪುತ್ರರು ಮಹಾಬಲಿ ಧುಂಧುವನ್ನು ಕಂಡರು. ಮರಳಿನೊಳಗಿದ್ದ ಅವನ ಮಹಾಕಾಯವು ಘೋರವಾಗಿತ್ತು. ಸೂರ್ಯನ ತೇಜಸ್ಸಿನಂತೆ ಬೆಳಗುತ್ತಿತ್ತು. ಅಲ್ಲಿ ಧುಂಧುವು ಪಶ್ಚಿಮ ದಿಕ್ಕನ್ನು ಮುಚ್ಚಿ ಕಾಲಾನಲನಂತೆ ಬೆಳಗಿ ಮಲಗಿದ್ದನು. ಕುವಲಾಶ್ವನ ಪುತ್ರರು ಎಲ್ಲಕಡೆಯಿಂದ ಸುತ್ತುವರೆದು, ತೀಕ್ಷ್ಣ ಶರಗಳಿಂದ, ಗದೆಗಳಿಂದ ಮತ್ತು ಮುಸಲ, ಪಟ್ಟಿಶ, ಪರಿಘ, ಪ್ರಾಸ, ಹರಿತ ವಿಮಲ ಖಡ್ಗಗಳಿಂದ ಅವನನ್ನು ತಿವಿದರು. ಹೀಗೆ ಪೆಟ್ಟು ತಿಂದ ಆ ಮಹಾಬಲನು ಸಂಕ್ರುದ್ದನಾಗಿ ಮೇಲೆದ್ದು ಕೋಪದಿಂದ ವಿವಿಧ ಶಸ್ತ್ರಗಳನ್ನೂ ಭಕ್ಷಿಸಿದನು. ಬಾಯಿಯಿಂದ ಸಂವರ್ತಕನ ಸಮನಾದ ಬೆಂಕಿಯನ್ನು ಕಾರುತ್ತಾ, ಆ ತೇಜಸ್ಸಿನಿಂದ ನೃಪತಿಯ ಆ ಎಲ್ಲ ಮಕ್ಕಳನ್ನೂ ಸುಟ್ಟುಹಾಕಿದನು. ಮುಖದಿಂದ ಹುಟ್ಟಿದ ಅಗ್ನಿಯಿಂದ ಲೋಕಗಳನ್ನು ಕೊನೆಗೊಳಿಸುವನೋ ಎಂಬತೆ ಕೃದ್ಧನಾಗಿ, ಹಿಂದೆ ಪ್ರಭು ಕಪಿಲನು ಕೃದ್ಧನಾಗಿ ಸಗರನ ಮಕ್ಕಳನ್ನು ಸುಟ್ಟಂತೆ ಕ್ಷಣಾರ್ಧದಲ್ಲಿ ಅವರನ್ನು ಸುಟ್ಟು ಅದ್ಭುತವನ್ನೆಸಗಿದನು. ಅವರು ಕ್ರೋಧಾಗ್ನಿಯಲ್ಲಿ ಸುಟ್ಟುಹೋಗಲು, ಮಹಾತೇಜಸ್ವಿ ಮಹೀಪತಿ ಕುವಲಾಶ್ವನು ಕುಂಭಕರ್ಣನಂತೆ ಬೆಳೆದಿದ್ದ ಆ ಮಹಾತ್ಮನನ್ನು ಎದುರಿಸಿದನು. ಅವನ ದೇಹದಿಂದ ಬಹಳಷ್ಟು ನೀರು ಹರಿಯಿತು. ರಾಜ ನೃಪನಿಂದ ಹರಿದ ಆ ನೀರಿನ ರಾಶಿಯು ಆ ತೇಜಸ್ಸನ್ನು ಕುಡಿಯಿತು. ಆ ಯೋಗಿಯು ಯೋಗದ ನೀರಿನಿಂದ ಆ ಬೆಂಕಿಯನ್ನು ಆರಿಸಿದನು.

ಆಗ ರಾಜನು ಸರ್ವಲೋಕಭಯವನ್ನು ನಿವಾರಿಸಲು ಬ್ರಹ್ಮಾಸ್ತ್ರದಿಂದ ಆ ಕ್ರೂರಪರಾಕ್ರಮಿ ದೈತ್ಯನನ್ನು ಸುಟ್ಟುಹಾಕಿದನು. ಆ ಸುರಶತ್ರು, ಅಮಿತ್ರಘ್ನ, ಇನ್ನೊಬ್ಬ ತ್ರಿಲೋಕೇಶನಂತಿರುವ ಮಹಾಸುರನನ್ನು ಅಸ್ತ್ರದಿಂದ ಸುಟ್ಟಿದುದರಿಂದ ರಾಜರ್ಷಿ ಕುವಲಾಶ್ವನು ಧುಂಧುಮಾರ ಎಂಬ ಹೆಸರಿನಿಂದ ಖ್ಯಾತನಾದನು. ಮುದಿತರಾಗಿ ಸರ್ವ ಮಹರ್ಷಿಗಳ ಸಹಿತ ತ್ರಿದಶರು ಅವನಿಗೆ ವರವನ್ನು ಕೇಳಿಕೋ ಎಂದು ಹೇಳಿದರು. ಆಗ ಅತೀವ ಮುದಿತನಾದ ರಾಜನು ಅಂಜಲೀಬದ್ದನಾಗಿ ಹೇಳಿದನು: “ನಾನು ದ್ವಿಜಾಗ್ರರಿಗೆ ವಿತ್ತವನ್ನು ಕೊಡುವಂಥವನಾಗಲಿ, ಶತ್ರುಗಳಿಗೆ ದುರ್ಜಯನಾಗಲಿ, ವಿಷ್ಣುವಿನೊಂದಿಗೆ ನನ್ನ ಸಖ್ಯವು ಇರಲಿ, ಭೂತಗಳಿಗೆ ಏನೂ ದ್ರೋಹವನ್ನೆಸಗದೇ ಇರಲಿ. ಸತತವೂ ಧರ್ಮದಲ್ಲಿ ಸಂತೋಷಹೊಂದುವವನಾಗಲಿ, ಮತ್ತು ಸ್ವರ್ಗವಾಸವು ಅಕ್ಷಯವಾಗಲಿ.” “ಹಾಗೆಯೇ ಆಗಲಿ” ಎಂದು ದೇವತೆಗಳು, ಋಷಿಗಳು, ಗಂಧರ್ವರು ಮತ್ತು ಧೀಮತ ಉತ್ತಂಕನೂ ಸೇರಿ, ಪ್ರೀತಿಯಿಂದ ರಾಜನಿಗೆ ಉತ್ತರಿಸಿದರು. ರಾಜನಿಗೆ ವಿವಿಧ ಆಶೀರ್ವಾದಗಳನ್ನಿತ್ತು ದೇವತೆಗಳೂ ಮಹರ್ಷಿಗಳೂ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು. ಅವನಿಗೆ ಮೂವರು ಶಿಷ್ಠರಾದ ಪುತ್ರರಾದರು – ದೃಢಾಶ್ವ, ಕಪಿಲಾಶ್ವ ಮತ್ತು ಚಂದ್ರಾಶ್ವ. ಅವರಿಂದ ಮಹಾತ್ಮ ಇಕ್ಷ್ವಾಕುಗಳ ಪರಂಪರೆಯು ಮುಂದುವರೆಯಿತು. ಹೀಗೆ ಆ ಮಧುಕೈಟಭರ ಮಗ ಮಹಾವೀರ್ಯ ದೈತ್ಯ ಧುಂಧುವು ಸತ್ತಮ ಕುವಲಾಶ್ವನಿಂದ ಹತನಾದನು. ಅಂದಿನಿಂದ ಗುಣಸಂಯುಕ್ತ ನೃಪತಿ ಕುವಲಾಶ್ವನಾದರೋ ಧುಂಧುಮಾರನೆಂಬ ಹೆಸರಿನಿಂದ ಪ್ರಸಿದ್ಧನಾದನು.