ಮನೆ ಕಾನೂನು ಐಪಿಎಸ್​ ಡಿ ರೂಪಾ ವಿರುದ್ಧ ದೂರು ನೀಡಿದ್ದ ಡಿಐಜಿ ವರ್ತಿಕಾ ಕಟಿಯಾರ್​ ಎತ್ತಂಗಡಿ

ಐಪಿಎಸ್​ ಡಿ ರೂಪಾ ವಿರುದ್ಧ ದೂರು ನೀಡಿದ್ದ ಡಿಐಜಿ ವರ್ತಿಕಾ ಕಟಿಯಾರ್​ ಎತ್ತಂಗಡಿ

0

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಜಟಾಪಟಿ ಮುಂದುವರೆದಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್​ ಡಿ ರೂಪಾ ಮೌದ್ಗಿಲ್​​ ನಡುವಿನ ಗುದ್ದಾಟ ಕೋರ್ಟ್ ​ನಲ್ಲಿದೆ.

Join Our Whatsapp Group

ಇದರ ಮಧ್ಯೆ ಇದೀಗ ಡಿ.ರೂಪಾ ಮೌದ್ಗಿಲ್ ವಿರುದ್ಧ ಮತ್ತೋರ್ವ ಮಹಿಳಾ ಅಧಿಕಾರಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಕೆಳಹಂತದ ಸಿಬ್ಬಂದಿಗಳನ್ನು ಬಳಸಿಕೊಂಡು ದಾಖಲೆ ಕಳುವು ಮಾಡಿಸಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಯುವ ಸಾಧ್ಯತೆ ಇದೆ ಎಂದು ಡಿಐಜಿ ವರ್ತಿಕಾ ಕಟಿಯಾರ್ ಅವರು ರೂಪ ಮೌದ್ಗಿಲ್ ವಿರುದ್ದ ಆರೋಪಿಸಿದ್ದಾರೆ.

ಅಲ್ಲದೇ ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ. ಆದ್ರೆ, ಇದೀಗ ದೂರು ನೀಡಿದ್ದ ಡಿಐಜಿ ವರ್ತಿಕಾ ಕಟಿಯಾರ್ ಅವರನ್ನೇ ವರ್ಗಾವಣೆ ಮಾಡಲಾಗಿದೆ.

ಐಪಿಎಸ್​ ಡಿ ರೂಪಾ ಅವರ ವಿರುದ್ಧ ಗಂಭೀರ ಆರೋಪದದೊಂದಿಗೆ ದೂರು ನೀಡಿರುವ ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಸಿವಿ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ವರ್ಗಾವಣೆ ಮಾಡಿ ಇಂದು(ಮಾರ್ಚ್​ 03) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದೂರು ನೀಡಿದ ಬೆನ್ನಲ್ಲೇ ಇದೀಗ ವರ್ತಿಕಾ ಅವರನ್ನು  ಗೃಹ ರಕ್ಷಕ‌ ದಳದ ಡಿಐಜಿ ಮತ್ತು ಹೆಚ್ಚುವರಿ ಕಮಾಂಡೆಂಟ್ ಆಗಿ ವರ್ಗಾವಣೆ  ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರೂಪಾ ವಿರುದ್ಧ ವರ್ತಿಕಾ ನೀಡಿದ ದೂರಿನಲ್ಲೇನಿದೆ?

ಫೆಬ್ರವರಿ 20 ರಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರ್ತಿಕಾ ದೂರು ದಾಖಲಿಸಿದ್ದರು. ಸೆಪ್ಟೆಂಬರ್ 6, 2024 ರಂದು ರೂಪಾ ಅವರ ಆದೇಶದ ಮೇರೆಗೆ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಮತ್ತು ಗೃಹರಕ್ಷಕ ದಳದ ಮಲ್ಲಿಕಾರ್ಜುನ್ ಅನುಮತಿಯಿಲ್ಲದೆ ನನ್ನ ಕೊಠಡಿಗೆ ಪ್ರವೇಶಿಸಿದ್ದು, ದಾಖಲೆಗಳನ್ನು ಕಳವು ಮಾಡಿದ್ದಾರೆ. ಮಲ್ಲಿಕಾರ್ಜುನ್ ಅವರು ನಿಯಂತ್ರಣ ಕೊಠಡಿಯಿಂದ ಕೀಲಿಯನ್ನು ತೆಗೆದುಕೊಂಡು ಕೊಠಡಿಯನ್ನು ತೆರೆದರೆ, ಮಂಜುನಾಥ್ ಫೈಲ್‌ಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ವಾಟ್ಸಾಪ್ ಮೂಲಕ ಐಜಿಪಿಗೆ ಕಳುಹಿಸಿದ್ದಾರೆ.

ಡಿಐಜಿ ಅವರ ಅರಿವಿಲ್ಲದೆ ಕೊಠಡಿಯನ್ನು ತೆರೆಯದಂತೆ ವರ್ತಿಕಾ ಅವರ ಆಪ್ತ ಸಹಾಯಕ ಕಿರಣ್ ಕುಮಾರ್ ಎಚ್ ಮಂಜುನಾಥ್ ಅವರಿಗೆ ಸೂಚಿಸಿದ್ದರು. ಆದರೆ, ಐಜಿಪಿ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ಫೈಲ್‌ಗಳ ಫೋಟೋಗಳನ್ನು ತೆಗೆದಿದ್ದಾರೆ. ಈ ವಿಷಯದ ಬಗ್ಗೆ ನನಗೆ ಇತ್ತೀಚೆಗಷ್ಟೇ ತಿಳಿದುಬಂದಿತ್ತು. ಬಳಿಕ ಕಿರಣ್, ಮಂಜುನಾಥ್ ಮತ್ತು ಮಲ್ಲಿಕಾರ್ಜುನ್ ಅವರನ್ನು ಪ್ರಶ್ನಿಸಿದಾಗ, ರೂಪಾ ಅವರ ಸೂಚನೆಯ ಮೇರೆಗೆ ಫೈಲ್‌ಗಳನ್ನು ತೆಗೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ನನ್ನ ಕೊಠಡಿಯಲ್ಲಿ ಗೌಪ್ಯ ದಾಖಲೆಗಳು ಮತ್ತು ಅಧಿಕೃತ ದಾಖಲೆಗಳಿವೆ. ಕೆಲಸದ ಸಮಯದ ನಂತರ, ಸಂಬಂಧಪಟ್ಟ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಮತ್ತು ಅವರ ಅನುಮತಿಯಿಲ್ಲದೆ ಕೊಠಡಿಗೆ ಪ್ರವೇಶ ಮಾಡುವುದು ಗಂಭೀರ ಮತ್ತು ಅಕ್ಷಮ್ಯ ಅಪರಾಧ. ಈ ಹಿಂದೆ ಕೂಡ ಇದೇ ರೀತಿಯ ಘಟನೆಗಳು ನಡೆದಿರಬಹುದು. ಆದರೆ, ಇದೀಗ ನನ್ನ ಗಮನಕ್ಕೆ ಬಂದಿದೆ. ದಾಖಲೆಗಳ ಮೂಲಕ ರೂಪಾ ಅವರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಹಿಂದೆ ರೂಪಾ ನನ್ನ ವಾರ್ಷಿಕ ವರದಿಯನ್ನು ಹಾಳುಮಾಡುವುದಾಗಿ ಬೆದರಿಕೆ ಹಾಕಿದ್ದರು. ಡಿಐಜಿಗೆ ಡಿಜಿ ಮತ್ತು ಐಜಿಪಿ ಹುದ್ದೆಗೆ ಬಡ್ತಿ ನೀಡಿದಾಗ ನೋಡಿಕೊಳ್ಳುತ್ತೇನೆಂದು ಎಚ್ಚರಿಸಿದ್ದರು. ಇದೀಗ ನನ್ನ ಕೊಠಡಿಯಲ್ಲಿನ ದಾಖಲೆಗಳನ್ನು ಕಳವು ಮಾಡಿದ್ದು, ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ಅದಕ್ಕೆ ರೂಪಾ ಅವರೇ ಹೊಣೆಗಾರರಾಗಿರುತ್ತಾರೆ. ಭವಿಷ್ಯದಲ್ಲಿಯೂ ಈ ರೀತಿಯ ಘಟನೆಗಳು ನಡೆಯುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ವರ್ತಿಕಾ ಅವರು ದೂರಿನಲ್ಲಿ ಮನವಿ ಮಾಡಿದ್ದರು.