ಮೈಸೂರು(Mysuru): ಡಿಜಿಟಲ್ ಎಂಬುದು ಈ ಶತಮಾನದ ಹೊಸ ಮೈಲಿಗಲ್ಲು. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಡಿಜಿಟಲ್ ಪರಿಕಲ್ಪನೆಗಳು ಹೆಚ್ಚು ಮುನ್ನಲೆಗೆ ಬರುತ್ತಿದೆ ಎಂದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಮಾಜ ಕಾರ್ಯ ವಿಭಾಗದ ವತಿಯಿಂದ ನಡೆದ ಎರಡು ದಿನದ ರಾಷ್ಟ್ರೀಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಇದು ಸರಳವೂ ಹಾಗೂ ಹೆಚ್ಚು ಪಾರದರ್ಶಕವೂ ಆಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂದಿನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಇಂದು ಡಿಜಿಟಲ್ ಪ್ಲ್ಯಾಟ್ ಫಾರಂ ಹೆಚ್ಚು ಮುನ್ನಲೆಗೆ ಬಂದಿದೆ. ಆನ್ ಲೈನ್ ಕ್ಲಾಸ್ ಗಳು ಹೆಚ್ಚಾದಂತೆ ಡಿಜಿಟಲ್ ಪಠ್ಯಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀಡಿ ಸ್ಮಾರ್ಟ್ ಕ್ಲಾಸ್ ಬಗ್ಗೆಯೂ ಹೆಚ್ಚು ವಿಚಾರವನ್ನು ತಿಳಿಸಿಕೊಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಯಾವ ರೀತಿ ಡಿಜಿಟಲ್ ಪಠ್ಯವನ್ನು ಓದಬೇಕು? ಎಲ್ಲಿ ಲಭ್ಯವಿರುತ್ತದೆ? ಅದರಲ್ಲಿ ಯಾವುದನ್ನು ನಂಬಬೇಕು? ಎಂಬಿತ್ಯಾದಿ ಅಂಶಗಳನ್ನು ತಿಳಿಸಿಕೊಡಬೇಕು ಎಂದರು.
ಮುಂಬರುವ ದಿನಗಳಲ್ಲಿ ಗರಿಷ್ಠ ಜನರಿಗೆ ಇದರಿಂದ ಒಳ್ಳೆಯದು ಆಗುವ ಸಾಧ್ಯತೆ ಇದೆ. ಶೈಕ್ಷಣಿಕ ಸಂಸ್ಥೆಗಳ ತಮ್ಮೆಲ್ಲಾ ಚರ್ಚೆಗಳು, ವಿಚಾರ ಸಂಕಿರಣಕ್ಕೆ ಡಿಜಿಟಲ್ ವೇದಿಕೆಯನ್ನು ಹೆಚ್ಚು ಬಳಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕಿದೆ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಮಾಹಿತಿ ಸೇತುವೆ ಕಟ್ಟಲು ಸಾಧ್ಯವಿದೆ ಎಂದು ತಿಳಿಸಿದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ, ವಿಶ್ರಾಂತ ಕುಲಪತಿಗಳಾದ ಪ್ರೊ. ಮಣಿಯನ್, ಪ್ರೊ. ವೈ. ಎಸ್.ಸಿದ್ದೇಗೌಡ, ವಿಭಾಗದ ಮುಖ್ಯಸ್ಥೆ ಡಾ.ಜ್ಯೋತಿ ಎಚ್‌ಪಿ. ಪ್ರೊ.ಚಂದ್ರಮೌಳಿ, ಡಾ.ಚೇತನ್ ಸಿಂಗೈ ಸೇರಿದಂತೆ ಇತರರು ಇದ್ದರು.