ಮನೆ ರಾಷ್ಟ್ರೀಯ ನೂತನ ಸಂಸತ್ ಭವನ ಉದ್ಘಾಟನೆಗೆ ಸಾಕ್ಷಿಯಾದ ಗಣ್ಯಾತಿಗಣ್ಯರು

ನೂತನ ಸಂಸತ್ ಭವನ ಉದ್ಘಾಟನೆಗೆ ಸಾಕ್ಷಿಯಾದ ಗಣ್ಯಾತಿಗಣ್ಯರು

0

ನವದೆಹಲಿ: ರಾಷ್ಟ್ರದ ಐತಿಹಾಸಿಕ ನೂತನ ಸಂಸತ್ ಭವನ ಉದ್ಘಾಟನೆಯ ಸಮಾರಂಭದಲ್ಲಿ ಭಾರಿ ಸಂಖ್ಯೆಯಲ್ಲಿ ಗಣ್ಯಾತಿಗಣ್ಯರು, ರಾಜತಾಂತ್ರಿಕರು ಸೇರಿದ್ದರು. ಭವನದ ನೋಟವನ್ನು  ಅನೇಕ ಜನರು ಕುತೂಹಲದಿಂದ ಕಣ್ತುಂಬಿಕೊಳ್ಳಲು ಯತ್ನಿಸುತ್ತಿದ್ದುದು ಕಂಡುಬಂತು.

Join Our Whatsapp Group

ಹೊಸ ಕಟ್ಟಡದಲ್ಲಿ ಕೇಂದ್ರ ಸಭಾಂಗಣ (ಸೆಂಟ್ರಲ್ ಹಾಲ್) ಇಲ್ಲ. ಆದರೆ, ರಾಷ್ಟ್ರದ ಪ್ರಜಾಸತ್ತಾತ್ಮಕ ಪರಂಪರೆ ಪ್ರದರ್ಶಿಸುವ ಭವ್ಯ ಸಭಾಂಗಣ ಇದೆ.

ಸೆಂಟ್ರಲ್ ಹಾಲ್ ಬದಲು ಸಂಸದರಿಗೆ ಒಂದು ಲಾಂಜ್ ಇದೆ. ಹಾಲಿ ಇರುವ ಸಂಸತ್ ಗ್ರಂಥಾಲಯ ಕಟ್ಟಡವಲ್ಲದೆ, ಹೊಸ ಕಟ್ಟಡದಲ್ಲಿ ಒಂದು ಗ್ರಂಥಾಲಯ, ಭೋಜನಾಲಯ ಸೇರಿ ಹಲವು ಸಮಿತಿಗಳ ಕೊಠಡಿಗಳು ಇವೆ.

* ಹೊಸ ಕಟ್ಟಡಕ್ಕೆ ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಹೆಸರಿನ ಮೂರು ಮುಖ್ಯ ದ್ವಾರಗಳು ಇವೆ. ಅಲ್ಲದೆ, ಗಣ್ಯರು, ಸಂಸದರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳಿವೆ.

* ಹೊಸ ಕಟ್ಟಡದಲ್ಲಿ 1,700 ಕಿಟಕಿ ಮತ್ತು ಬಾಗಿಲುಗಳಿವೆ. 3.5 ಕಿ.ಮೀ ಉದ್ದನೆಯ ಕಾರಿಡಾರ್ಗಳು ಇವೆ. 60,000 ಕಾರ್ಮಿಕರು ಇದರ ನಿರ್ಮಾಣಕ್ಕೆ ಕೆಲಸದ ಅವಧಿಯಲ್ಲಿ ತೊಡಗಿಸಿಕೊಂಡಿರುವುದು ಒಟ್ಟು 23 ಲಕ್ಷ ಕೆಲಸದ ದಿನಗಳಾಗಿವೆ. ಹೊಸ ಸಂಸತ್ ಭವನವನ್ನು ದೇಶದಾದ್ಯಂತ ತಂದಿರುವ ಹಲವು ವಸ್ತುಗಳಿಂದ ನಿರ್ಮಿಸಲಾಗಿದೆ. ನಾಗ್ಪುರದ ತೇಗದ ಮರ, ರಾಜಸ್ಥಾನದ ಕೆಂಪು ಮತ್ತು ಬಿಳಿ ಮರಳುಶೀಲೆ, ಉದಯಪುರದ ಕೇಶರಿಯಾ ಹಸಿರು ಕಲ್ಲು, ಅಜ್ಮೇರ್ ನ ಲಖಾದಿಂದ ಕೆಂಪು ಗ್ರಾನೈಟ್, ರಾಜಸ್ಥಾನದ ಅಂಬಾಜಿಯಿಂದ ಬಿಳಿ ಅಮೃತಶಿಲೆಗಳನ್ನು ಹೊಸ ಭವನದಲ್ಲಿ ಬಳಸಿಕೊಳ್ಳಲಾಗಿದೆ. ದಿಯು ಮತ್ತು ದಮನ್ ನಿಂದ ತರಲಾದ ಉಕ್ಕಿನ ಸಾಮಗ್ರಿಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಛಾವಣಿಗಳ ಫಾಲ್ಸ್ಸೀಲಿಂಗ್ ಗೆ ಉಪಯೋಗಿಸಲಾಗಿದೆ.

* ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನಕ್ಕೆ ಆಗಮಿಸಿದಾಗ ಸಂಸತ್ ಭವನದಲ್ಲಿ ಒಂದೆಡೆ ಸೇರಿದ್ದ ಸಂಸದರು ‘ಮೋದಿ, ಮೋದಿ’ ಎಂಬ ಜೈಕಾರ ಕೂಗಿದರು. ಭಾರತ್ ಮಾತಾ ಕೀ ಜೈ, ಶಿವಾಜಿ ಮಹಾರಾಜ್ ಕಿ ಜೈ ಎಂಬ ಘೋಷಣೆಗಳು ಮೊಳಗಿದವು. ಕಾರ್ಯಕ್ರಮ ಮುಗಿಸಿ ಮೋದಿ ಅವರು ಹೊರಟಾಗಲೂ ಸಂಸದರು ‘ಮೋದಿ, ಮೋದಿ’ ಘೋಷಣೆ ಕೂಗಿದರು. ಇದೇ ವೇಳೆ ಮೋದಿ ಅವರು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದಿಗೆ ಕೆಲ ಸಮಯ ಮಾತುಕತೆ ನಡೆಸಿದರು.

*ಉದ್ಘಾಟನೆ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಣಿಸಲಿಲ್ಲ. ಅವರು ನೈಜೀರಿಯಾದ ಅಧ್ಯಕ್ಷ ಬೊಲಾ ಟಿನುಬು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ನೈಜೀರಿಯಾಕ್ಕೆ ತೆರಳಿದ್ದಾರೆ. ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಮತ್ತು ಪೀಯೂಷ್ ಗೋಯಲ್ ಮೊದಲ ಸಾಲಿನಲ್ಲಿ ಆಸೀನರಾಗಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಮೊದಲ ಸಾಲಿನಲ್ಲಿ ಸ್ಥಾನ ಸಿಗಲಿಲ್ಲ.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ, ಮುಖ್ಯಮಂತ್ರಿಗಳಾದ ಎಂ.ಎಲ್. ಖಟ್ಟರ್, ಶಿವರಾಜ್ ಸಿಂಗ್ ಚವಾಣ್, ನೇಪಿಯೊ ರಿಯೊ, ಯೋಗಿ ಆದಿತ್ಯನಾಥ್, ಹಿಮಂತ್ ಬಿಸ್ವಾ ಶರ್ಮಾ, ಭೂಪೇಶ್ ಪಟೇಲ್, ಏಕನಾಥ ಶಿಂದೆ, ವೈ.ಎಸ್. ಜಗಮೋಹನ್ ರೆಡ್ಡಿ ಅವರೂ ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು.

ಸಂಸದ ವರುಣ್ ಗಾಂಧಿ ಮತ್ತು ಅವರ ತಾಯಿ ಮೇನಕಾ ಗಾಂಧಿ ಕೂಡ ಆಗಮಿಸಿದ್ದರು. ಸಭಾಂಗಣದ ಒಳಗಿನಿಂದ ಕೆಲವು ಸೆಲ್ಫಿ ಚಿತ್ರಗಳನ್ನು ಅವರು ಟ್ವೀಟ್ ಮಾಡಿದ್ದಾರೆ.