ಮನೆ ರಾಜ್ಯ ಪಿಎಸ್ಐ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ದಿನೇಶ್‌ ಗುಂಡೂರಾವ್‌ ಬಿಡುಗಡೆ ಮಾಡಲಿ: ಹೆಚ್ಡಿಕೆ

ಪಿಎಸ್ಐ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ದಿನೇಶ್‌ ಗುಂಡೂರಾವ್‌ ಬಿಡುಗಡೆ ಮಾಡಲಿ: ಹೆಚ್ಡಿಕೆ

0

ಕುಣಿಗಲ್ (Kunigal)- ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್‌ (Dinesh Gundurao) ಅವರು ಅದನ್ನು ಬಿಡುಗಡೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H.D.KumarSwamy) ಹೇಳಿದ್ದಾರೆ.

ಕುಣಿಗಲ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಗೃಹ ಸಚಿವರ ಪಾತ್ರ ಇದ್ದರೆ ನೇರವಾಗಿ ದಾಖಲೆಗಳನ್ನು ಬಿಡುಗಡೆ ಮಾಡಿ ಆಪಾದನೆ ಮಾಡಬೇಕು. ನಾನು ಇಂಥ ಯಾವುದೇ ವಿಷಯ ಇದ್ದರೆ ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತೇನೆ ಎಂದರು.

ದಿನೇಶ್ ಗುಂಡೂರಾವ್ ಅವರು ತಮ್ಮ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಗೃಹ ಸಚಿವರ ರಾಜೀನಾಮೆ ಕೇಳಬಹುದು. ದಾಖಲೆಗಳನ್ನು ಬಿಡುಗಡೆ ಮಾಡದೇ ನಾವು ರಾಜೀನಾಮೆ ಕೇಳಲು ಹೇಗೆ ಸಾಧ್ಯ? ಆದರೆ ಇಲ್ಲಿ ನಡೆದಿರುವ ವಾಸ್ತವಾಂಶವನ್ನು ನೋಡಿದಾಗ ಸರ್ಕಾರದಲ್ಲಿರುವ ಬಿಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತರು ಸೇರಿದಂತೆ ಕಾಂಗ್ರೆಸ್ ಪಕ್ಷದವರು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಸಮರ್ಪಕವಾಗಿ ತನಿಖೆ ನಡೆಯಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಪಿಎಸ್ಐ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸತ್ಯ. ಇದರಲ್ಲಿ ಅಧಿಕಾರಿಗಳು ಸೇರಿದಂತೆ ಯಾವ ಯಾವ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬ ಸತ್ಯಾಂಶವನ್ನು ಸಿಐಡಿ ತನಿಖೆಯಿಂದ ಜನರ ಮುಂದೆ ತರಬೇಕು. ಇಲಾಖೆಯಲ್ಲಿ ಯಾರೋ ಕೈ ಜೋಡಿಸಿದ ಹೊರತು ಇಂಥ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಈ ಪರೀಕ್ಷೆ ಹಗರಣದಲ್ಲಿ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸಹ ಭಾಗಿಯಾಗಿರಬಹುದು. ಈ ಬಗ್ಗೆ ಅನುಮಾನಗಳು ಸೃಷ್ಟಿ ಆಗಿವೆ. ಹಾಗಾಗಿ ಇಡೀ ಪ್ರಕರಣದ ಕೂಲಂಕಷ ತನಿಖೆ ಮಾಡಿದ ನಂತರ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದರು.