ಮನೆ ಕಾನೂನು ಸಾರ್ವಜನಿಕ ಸ್ಥಳವನ್ನು ದೇವರು ಒತ್ತುವರಿ ಮಾಡಿಕೊಂಡರೂ ಅದನ್ನು ತೆರವು ಮಾಡಲು ನಿರ್ದೇಶನ: ಮದ್ರಾಸ್‌ ಹೈಕೋರ್ಟ್‌

ಸಾರ್ವಜನಿಕ ಸ್ಥಳವನ್ನು ದೇವರು ಒತ್ತುವರಿ ಮಾಡಿಕೊಂಡರೂ ಅದನ್ನು ತೆರವು ಮಾಡಲು ನಿರ್ದೇಶನ: ಮದ್ರಾಸ್‌ ಹೈಕೋರ್ಟ್‌

0

ಸಾರ್ವಜನಿಕ ರಸ್ತೆಯಲ್ಲಿ ದೇವಸ್ಥಾನ ನಿರ್ಮಿಸುತ್ತಿರುವುದಕ್ಕೆ ಶುಕ್ರವಾರ ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಮದ್ರಾಸ್‌ ಹೈಕೋರ್ಟ್‌, ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನನ್ನು ಎತ್ತಿ ಹಿಡಿಯಲು ಸಾರ್ವಜನಿಕ ಸ್ಥಳವನ್ನು ದೇವರು ಒತ್ತುವರಿ ಮಾಡಿದರೂ ಅದನ್ನು ತೆರವು ಮಾಡಲು ನ್ಯಾಯಾಲಯ ನಿರ್ದೇಶಿಸಲಿದೆ ಎಂದಿದೆ.

ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನವೊಂದರ ನಿರ್ಮಾಣದಿಂದ ಸಾರ್ವಜನಿಕರ ಓಡಾಟಕ್ಕೆ ಉಂಟಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ದೇವಸ್ಥಾನದ ಮೇಲ್ಮನವಿ ವಜಾ ಮಾಡಿರುವ ನ್ಯಾಯಮೂರ್ತಿ ಎನ್ಆನಂದ್ವೆಂಕಟೇಶ್ ಅವರು ಸಾರ್ವಜನಿಕ ಸ್ಥಳವನ್ನು ಅಕ್ರಮವಾಗಿ ಯಾರೇ ಒತ್ತುವರಿ ಮಾಡಿಕೊಂಡರೂ ಅದನ್ನು ತಡೆಯಲಾಗುವುದು ಎಂದರು.

ದೇವಸ್ಥಾನದ ಹೆಸರಿನಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದನ್ನು ಒತ್ತುವರಿ ಮಾಡುವ ತಂತ್ರವನ್ನು ಕೆಲವರು ಹಿಂದೆ ಅನುಸರಿಸುತ್ತಿದ್ದರು ಎಂದು ಅವರು ವಿವರಿಸಿದರು.

“ಯಾರು ಅಥವಾ ಯಾವುದರ ಹೆಸರಿನಲ್ಲಿ ಒತ್ತುವರಿ ಮಾಡಲಾಗಿದೆ ಎಂಬುದರ ಬಗ್ಗೆ ನ್ಯಾಯಾಲಯ ತಲೆಕೆಡಿಸಿಕೊಳ್ಳುವುದಿಲ್ಲ. ಸಾರ್ವಜನಿಕ ಸ್ಥಳವನ್ನು ದೇವರೇ ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವು ಮಾಡುವಂತೆ ನ್ಯಾಯಾಲಯಗಳೂ ನಿರ್ದೇಶಿಸುವ ಹಂತವನ್ನು ನಾವು ತಲುಪಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಪಾಲನೆಯನ್ನು ಎತ್ತಿಹಿಡಿಯುವ, ರಕ್ಷಿಸುವ ಕೆಲಸವನ್ನು ನ್ಯಾಯಾಲಯ ಮಾಡಲಿದೆ” ಎಂದು ನ್ಯಾಯಾಲಯ ಖಚಿತವಾಗಿ ನುಡಿಯಿತು.

“ನಾವು ಸಾಕಷ್ಟು ದೇವಸ್ಥಾನಗಳನ್ನು ಹೊಂದಿದ್ದು, ಸಾರ್ವಜನಿಕ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಹೊಸ ದೇವಸ್ಥಾನ ಕಟ್ಟುವಂತೆ ಅಥವಾ ದೇವಸ್ಥಾನದ ಹೆಸರಿನಲ್ಲಿ ಕಟ್ಟಡ ನಿರ್ಮಿಸುವಂತೆ ಯಾವುದೇ ದೇವರು ಮನವಿ ಮಾಡಿಲ್ಲ” ಎಂದು ಪೀಠವು ಹೇಳಿತು.