ಮನೆ ಯೋಗಾಸನ ಚಿತ್ತ ವಿಕ್ಷೇಪ (ವಿಕ್ಷೋಭಗಳು ಮತ್ತು ಅಡಚಣೆಗಳು)

ಚಿತ್ತ ವಿಕ್ಷೇಪ (ವಿಕ್ಷೋಭಗಳು ಮತ್ತು ಅಡಚಣೆಗಳು)

0

ಸಾಧಕನ ಯೋಗಭ್ಯಾಸವನ್ನು ತಡೆಯಲು ವಿಕ್ಷೋಭಗಳು ಹೀಗಿವೆ :

೧. ವ್ಯಾದಿ – ದೈಹಿಕ ಸಮತ್ವವನ್ನು ತೊಂದರೆಗೆ ಈಡುಮಾಡುವ ರೋಗರುಜಿನ.

೨. ಸ್ತ್ಯಾನ – ಕೆಲಸ ಮಾಡಲು ಬೇಕಾಗುವ ಮಾನಸಿಕ ಸಮಾಧಾನ ಇಲ್ಲದಿರುವಿಕೆ.

೩. ಸಂಶಯ – ನಿರ್ಧಾರಕ್ಕೆ ಬಾರದಿರುವುದು.

೪. ಪ್ರಮಾದ – ಅನಾಸತ್ತಿ, ಉದಾಸೀನತೆ.

೫. ಆಲಸ್ಯ – ಸೋಮಾರಿತನ.

೬. ಅವಿರತಿ – ಇಂದ್ರಿಯಾರ್ಥಗಳು ಮನಸ್ಸನ್ನು ಸ್ವಾಧೀನದಲ್ಲಿಟದಟಿರುವಾಗ ಉಂಟಾಗುವ ಕಾಮೋದ್ರೇಕ.

೭. ಭ್ರಾಂತಿ ದರ್ಶನ – ಅಯಥಾರ್ಥ ಜ್ಞಾನ.

೮. ಅಲಬ್ಧಭೂಮಿಕತ್ವ – ಯೋಚನಾ ಪರಂಪರೆಯನ್ನು ಹೊಂದಲು ಆಗದಿರುವಿಕೆ ಅಥವಾ ಸತ್ಯವನ್ನು ಕಾಣಲಾರದಂತೆ ಮನಸ್ಸನ್ನು ಕೇಂದ್ರೀಕರಿಸಲು ಆಗದಿರುವಿಕೆ.

೯. ಅನವಸ್ಥಿತತ್ತ್ವ – ಬಹಳ ಕಾಲದ ಪರಿಶ್ರಮದಿಂದ ಸಾಧಿಸಿದ ಮನಸ್ಸಿನ ಕೇಂದ್ರೀಕರಣವನ್ನು ಚಂಚಲಗೊಳಿಸುವಿಕೆ.

ಇದಲ್ಲದೆ ಇನ್ನೂ ಇತರ ನಾಲ್ಕು ವಿಕ್ಷೋಭಗಳಿವೆ : ೧. ದುಃಖ ೨. ದೌರ್ಮನಸ್ಯ ೩. ಅಂಗಮೇಜಯತ್ವ – ಅಂಗದ ಚಂಚಲತೆ, ಮತ್ತು ೪. ಶ್ವಾಸ – ಪ್ರಶ್ವಾಸ – ಚಂಚಲಿತಶ್ವಾಸ ಕ್ರಿಯೆ.

ಒಂದು ಯುದ್ಧವನ್ನು ಗೆಲ್ಲಬೇಕಾದರೆ ಸೇನಾಧಿಪತಿಯು ರಣ ಕ್ಷೇತ್ರವನ್ನು ಶತ್ರುಬಲವನ್ನೂ ನೋಡಿ. ಅವರಿಗೆ ವಿರುದ್ಧವಾದ ಕ್ರಮಗಳನ್ನು ಅನುಸರಿಸುವಂತೆ ಯೋಗಿಯು ಆತ್ಮ ಸಾಧನೆಗೆ ಯೋಜನೆಗಳನ್ನು ಮಾಡುತ್ತಾನೆ.

ವ್ಯಾಧಿ – ಮೊದಲು ಅಡಚಣೆ ಅನಾರೋಗ್ಯ ಅಥವಾ ರೋಗವೆಂದು ತಿಳಿಯಲಾಗಿದೆ. ಯೋಗಿಗೆ ಬಹುಮುಖ್ಯವಾದ ಸಾಧನೆ ಅಂಗ ತನ್ನ ದೇಹ ತನ್ನ ವಾಹನ ಮುರಿದು ಬಿದ್ದರೆ ಪ್ರಯಾಣಿಕನು ಮುಂದೆ ಹೋಗಲಾರ. ಅದರಂತೆ ದೇಹವು ರೋಗದಿಂದ ಛಿದ್ರವಾದರೆ ಸಾಧಕನು ಏನನ್ನು ಸಾಧಿಸಲಾರ. ಮಾನಸಿಕ ಬೆಳವಣಿಗೆಗೆ ದೇಹದ ಆರೋಗ್ಯ ಮುಖ್ಯ. ಏಕೆಂದರೆ ಸಾಮಾನ್ಯವಾಗಿ ಮನಸ್ಸು ಜ್ಞಾನ ತಂತುಗಳ ಸಂಯೋಜನೆಯಿಂದ ಕೆಲಸ ಮಾಡುತ್ತದೆ. ಯಾವಾಗ ದೇಹ ಅನಾರೋಗ್ಯವಾಗಿರುತ್ತದೋ ಅಥವಾ ಜ್ಞಾನ ತಂತುಗಳು ಬಂಧಿತವಾಗಿರುತ್ತವೋ ಆಗ ಮನಸ್ಸು ಚಂಚಲವಾಗುತ್ತದೆ ಅಥವಾ ಸೋಮಾರಿ ಆಗುತ್ತದೆ ಧ್ಯಾನ ಕೇಂದ್ರೀಕರಣ ಸಾಧ್ಯವಾಗುವುದಿಲ್ಲ.

ಸ್ತ್ಯಾನ –  ಜಡತ್ವದಿಂದ ತೊಳಲುವ ಮನುಷ್ಯನಿಗೆ ಅನುಸರಿಸಬೇಕೆನ್ನುವ ಯಾವ ಮಾರ್ಗವೂ ಇರುವುದಿಲ್ಲ. ಯಾವ ಉತ್ಸಾಹವೂ ಇರುವುದಿಲ್ಲ. ನಿಷ್ಕ್ರಿಯತೆಯಿಂದ ಅವನ ಮನಸ್ಸು ಮತ್ತು ಬುದ್ಧಿಗಳು ಮಾಂದ್ಯವನ್ನು ಹೊಂದುವಷ್ಟೇ ಅಲ್ಲದೆ ಅವುಗಳ ಚೇತನಾಂಶಗಳು ಕಿಲುಬುಗೊಳ್ಳುತ್ತದೆ. ಸದಾ ಹರಿಯುತ್ತಿರುವ ನದಿಯ ನೀರು ತಿಳಿಯಾಗಿರುತ್ತದೆ. ಆದರೆ ನಿಂತ ನೀರು ದುರ್ನಾತ ಗೊಳ್ಳುತ್ತದೆ. ಕೆಟ್ಟ ನೀರಿನಿಂದ ಯಾವ ಒಳ್ಳೆಯ ಬೆಳೆಯನ್ನು ಬೆಳೆಯಲಾಗದು. ಔದಾಸೀನ್ಯ  ಪುರುಷನು ಬದುಕಿರುವ ಹೆಣದಂತೆ. ಆತನಿಂದ ಯಾವ ರೀತಿ ಕೇಂದ್ರೀಕರಣವೂ ಸಾಧ್ಯವಿಲ್ಲ.

ಸಂಶಯ – ಬುದ್ಧಿಹೀನರು, ನಂಬಿಕೆಯಿಲ್ಲದವರು ಮತ್ತು ಸದಾ ಶಂಕಿಸುತ್ತಿರುವವರು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. ಅಂತವರು ಈ ಪ್ರಪಂಚವನ್ನಾಗಲಿ ಪರಲೋಕವನ್ನಾಗಲಿ ಹೇಗೆ ತಾನೇ ಅನುಭವಿಸಿ ಆನಂದ ಬಡಬಲ್ಲರು ಸಾಧಕನಿಗೆ ತನ್ನಲ್ಲಿ ತಾನು ತನ್ನಲ್ಲಿ ಮತ್ತು ತನ್ನ ಗುರುವಿನಲ್ಲಿ ನಂಬಿಕೆ ಇರಬೇಕು. ಅಂಥವನನ್ನು ಯಾವ ಕೇಡು ಮುಟ್ಟಲಾರದು, ಒಬ್ಬನ ಹೃದಯದಲ್ಲಿ ಯಾವಾಗ ನಂಬಿಕೆ ಹುಟ್ಟುತ್ತದೋ ಆಗ ಕಾಮ, ಕೆಟ್ಟ ವಿಚಾರ, ಮಾನಸಿಕ ದುರ್ಬಲತೆ, ಅಹಂಕಾರ ಮತ್ತು ಶಂಕೆಗಳು ಬತ್ತಿಹೋಗಿ, ಆತಂಕಗಳಿಂದ ಮುಕ್ತವಾಗಿ ಅವನು ನಿಶ್ಚಲವಾದ ಶಾಂತತೆಯನ್ನು ಹೊಂದುತ್ತಾನೆ.

ಪ್ರಮಾದ – ಪ್ರಮಾದದಿಂದ ಬಳಲುವ ಮನುಷ್ಯನು ತಾನು ಬಹು ಮುಖ್ಯಸ್ಥನೆಂದು ತಿಳಿದು ವಿನೀತಭಾವ ಇಲ್ಲದಂಥವನಾಗುತ್ತಾನೆ.  ತನ್ನ ಹೊರತು ಯಾರು ಪ್ರಭುದ್ಧರಲ್ಲವೆಂದೇ ಆತನ ನಂಬಿಕೆ. ಯಾವುದು ಸರಿ, ಯಾವುದು ತಪ್ಪು ಎಂಬುದು ಆತನಿಗೆ ಗೊತ್ತಿಲ್ಲದಿರುವುದೇನೋ ನಿಜ. ಆದರೆ ಶ್ರೇಯದ ಕಡೆ ಗಮನವಿಯದೆ ಪ್ರೇಯವಾದುದನ್ನೇ ಆತನು ಕೋರುತ್ತಾನೆ. ತನ್ನ ವೈಯುಕ್ತಿಕ ಆಶೆಗಳಿಗಾಗಿ, ಕೀರ್ತಿಗಾಗಿ, ತನ್ನ ಹಾದಿಯಲ್ಲಿ ಯಾರು ಅಡ್ಡಬಂದರೂ ಅವರನ್ನು ನಿರ್ದಯವಾಗಿ ಯಾವ ಧರ್ಮವನ್ನೂ ಪಾಲಿಸದೆ ಸಂಹಾರ ಮಾಡುವುದಕ್ಕೂ ತೊಡಗುತ್ತಾನೆ. ಅಂತವರು ದೇವರ ವಿಭೂತಿ ಕಡೆ ಕುರುಡನಾಗಿರುತ್ತಾನೆ ; ದೇವರ ಮಾತೂ ಅವನಿಗೆ ಕೇಳಿಸದು.

ಆಲಸ್ಯ – ಆಲಸ್ಯದ ಆತಂಕಗಳನ್ನು ನಿವಾರಿಸಲು ನಿಶ್ಚಲವಾದ ವೀರ್ಯ ಅಗತ್ಯ. ಪ್ರೇಮೋನ್ಮತ್ತನಾದವನು ತನ್ನ ಪ್ರೇಯಸಿಗೋಸ್ಕರ ಕಾಯುವಂತೆ ಎಂದೂ ನಿರಾಸೆಗೆ ಒಳಗಾಗು ಒಳಗಾಗದಂತಿರುವುದೇ ಸಾಧಕನ ಮನೋಧರ್ಮ. ಗೆಲ್ಲುವೆನೆಂಬ ಆಶೆಯೇ ಆತನ ಗುರಾಣಿ, ಸ್ಥೈರ್ಯವೇ ಖಡ್ಗ, ದ್ವೇಷ ಮತ್ತು ದುಃಖದಿಂದ ಆತನು ಮುಕ್ತನಾಗಿರಬೇಕು. ಶ್ರದ್ಧೆಯಿಂದ, ಉತ್ಸಾಹದಿಂದ, ಆತನು ದೇಹ ಮತ್ತು ಮನಸ್ಸಿನ ಮಾಂದ್ಯವನ್ನು ಜಯಿಸಬೇಕು.

ಅವಿರತಿ – ಜಯಿಸಲು ಅಸಾಧ್ಯವಾದ ವಿಷಯ ವಸ್ತುಗಳನ್ನ ಜಯಿಸಲಾಗದ ಮೇಲೆ ಉಂಟಾಗುವ ಮಹತ್ತರವಾದಕಾಂಕ್ಷೆಯೇ ಅಭಿರತಿ. ಇಂದ್ರಿಯಗಳ ವಿಷಯಗಳಿಗೆ ಸೋಂಕದಂತೆ ಯೋಗಿಯೂ ಅವುಗಳನ್ನು ಅನುಭವಿಸಲು ಅರಿತಿರುತ್ತಾನೆ. ಇಂದ್ರಿಯಗಳ ಮೇಲೆ ಪೂರ್ಣ ಹತೋಟಿ ಆತನಿಗೆ ಇರುತ್ತದೆ. ಕಾಮದಿಂದ ಬಿಡುಗಡೆ ಆಗಿರುತ್ತಾನೆ. ಆತನು ಆತ್ಮತೃಪ್ತನಾಗಿ ಶಾಂತಿಯನ್ನು ಪಡೆದಿರುತ್ತಾನೆ.

ಭ್ರಾಂತಿದರ್ಶನ – ತಪ್ಪು ತಿಳುವಳಿಕೆಯಿಂದ ಬಳಲುವವನು ಭ್ರಾಂತಿಯಿಂದ ಕೂಡಿದವನಾಗಿ ತಾನೊಬ್ಬನೇ ಸತ್ಯದ ಬೆಳಕನ್ನು ಕಂಡವನೆಂದು ತಿಳಿದಿರುತ್ತಾನೆ. ಆತನಿಗೆ ಪ್ರಬಲ ಬುದ್ಧಿಶಕ್ತಿಯಿದ್ದರೂ ಅವಿನೀತನಾಗಿ ಜ್ಞಾನದಸೋಗನ್ನು ಹಾಕಿಕೊಂಡಿರುತ್ತಾನೆ. ಆದರೆ ಮಹಾತ್ಮರ ಸಂಪರ್ಕ ಮತ್ತು ಸಹವಾಸವನ್ನು ಪಡೆದು ಅವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ತಮ್ಮ ದೌರ್ಬಲ್ಯವನ್ನು ಮೆಟ್ಟಿ ಸರಿಯಾದ ಮಾರ್ಗದಲ್ಲಿ ದೃಢವಾಗಿಸಾಗುತ್ತಾನೆ.

ಅಲಬ್ಧ ಭೂಮಿಕತ್ವ – ಪರ್ವತಾರೋಹಿಯು ಶಕ್ತಿ ಇಲ್ಲದವನಾದರೆ ತನ್ನ ಸಾಧನೆಯಲ್ಲಿ ಅಪಜಯ ಹೊಂದುವಂತೆ ಮನಸ್ಸು ಕೇಂದ್ರೀಕರಿಸಲಾರದವನು.  ಸತ್ಯದ ಸಾಧನೆಯಲ್ಲಿ ವಿಫಲನಾಗುತ್ತಾನೆ. ಸತ್ಯದ ಯಾವುದೋ ಒಂದು ಅಂಶದ ಮೆರಗು ಕಾಣಿಸಿರಬಹುದು ; ಆದರೆ ಅಂತವರಿಗೆ ಅದರ ಪೂರ್ಣ ದರ್ಶನವಾಗಿರುವ ಹಾಗೆ ದರ್ಶನವಾಗಿರುವುದಿಲ್ಲ. ಅವನು ದೈವಿಕ ಸಂಗೀತವನ್ನು ಕನಸಿನಲ್ಲಿ ಹೇಳಿದ ಸಂಗೀತಗಾರನಿದ್ದಂತೆ ; ಹೇಳಿದ್ದೇನೋ ಹೌದು, ಆದರೆ ಜಾಗ್ರದ ವ್ಯವಸ್ಥೆಯಲ್ಲಿ ಅದನ್ನು ನೆನೆಸಿಕೊಂಡು ಹಾಡಲಾರದವನಂತೆ ಇರುತ್ತಾನೆ.

ಅನವಸ್ಥಿತತ್ತ್ವ – ಅನವಸ್ಥಿತತ್ತ್ವದಿಂದ ಪರಿಣಾಮ ಹೊಂದಿದವನು ತನ್ನ ಸ್ವಂತ ಶ್ರಮದಿಂದ ಸತ್ಯದರ್ಶನದ ತೀರ ಸಮೀಪಕ್ಕೆ ಬಂದಿರುತ್ತಾನೆ. ಆದರೆ ತನ್ನ ಸಾಧನೆ ಫಲವಾಗಿ ಸಂತೋಷಗೊಂಡು ಮತ್ತು ಗರ್ವಿತನಾಗಿ ತನ್ನ ಆಚರಣೆಯಲ್ಲಿ ಸ್ವಲ್ಪ ಸಡಿಲಗೊಳ್ಳಬಹುದು. ಆತನು ಶುದ್ಧನಾಗಿರುತ್ತಾನೆ, ಮನಸ್ಸು ಕೇಂದ್ರೀಕರಿಸಲು ಸಾಮರ್ಥ್ಯ ಹೊಂದಿರುತ್ತಾನೆ. ಸಾಧನ ಮಾರ್ಗದ ಅಂತ್ಯ ಮತ್ತು ನಿಷ್ಕರ್ಷೆ ಮಾಡುವಂಥ ಸ್ಥಳದವರೆಗೂ ಬಂದಿರಬಹುದು. ಈ ಹಂತದಲ್ಲೂ ದೃಢಸಮ ಚಿತ್ತದಿಂದ ಕಾರ್ಯ ತತ್ಪರತೆಯಿಂದ ಸಾಧನೆಯನ್ನು ಮುಂದುವರಿಸಬೇಕು. ದೈವ ಸಾಕ್ಷಾತ್ಕಾರದಲ್ಲಿ ಅಡಚಣೆಗಳನ್ನು ತಂದೊಡ್ಡುವ ಶೈಥಿಲ್ಯವನ್ನು ಯಾವ ಕ್ಷಣದಲ್ಲೂ ತೋರಿಸಿಕೊಡದು. ದೇವರ ಪ್ರಸಾರ ಇಳಿದು ಬರುವವರೆಗೂ ಆತನು ಹೀಗೆಯೇ ಕಾದಿರಬೇಕು. ಉಪನಿಷತ್ತಿನಲ್ಲಿ ಹೀಗೆ ಹೇಳಿದೆ.

ನಾsಯಮಾತ್ಮಾ ಪ್ರವಚನೇನ ಲಭ್ಯೋ | ನ ಮೇಧಯಾ ನ ಬಹುನಾ ಶ್ರುತೇನ ||

ಯಮೇವೈಷ ವೃಣುತೇ ತೇನ ಲಭ್ಯಾಃ | ತಸ್ಯೈಷ ಆತ್ಮಾವ ವಿವೃಣುತೇ ತನೂಂ ಸ್ವಾಮ್ ||

                             __ಕಠೋಪನಿಷತ್ ೧-೨-೨೩

“ಆತ್ಮಸಾಕ್ಷಾತ್ಕಾರವೆಂಬುದು ಅಧ್ಯಯನದಿಂದ, ಶಿಕ್ಷಣದಿಂದ, ಬುದ್ಧಿವಂತಿಕೆಯಿಂದ, ಅಪರಿಮಿತವಾದ ರೀತಿಯಲ್ಲಿ ಕೇಳುವಿಕೆಯಿಂದ ಸಾಧ್ಯವಿಲ್ಲ. ಆದರೆ ಆತನನ್ನೇ ಕೋರುವುದರಿಂದ ಮತ್ತು ಆತನೇ ಆರಿಸಿದರೆ ಮಾತ್ರ ಅದು ಸಾಧ್ಯ. ಅಂತ ಸಾಧಕನಿಗೆ ಮಾತ್ರ ಆತ್ಮ ತನ್ನ ನಿಜ ಸ್ವರೂಪವನ್ನು ತೋರಿಸಿಕೊಳ್ಳುತ್ತದೆ.”

 ಆತಂಕಗಳ ನಿವಾರಣೆಗೆ ಮತ್ತು ಮಿಶ್ರವಲ್ಲದ ಶಾಂತಿ ಸಾಧನೆಗೆ ಪತಂಜಲಿಯು ಹಲವು ಉಪಾಯಗಳನ್ನು ಸೂಚಿಸಿದ್ದಾರೆ. ಅವುಗಳಲ್ಲಿ ಉತ್ಕೃಷ್ಟವಾದ ನಾಲ್ಕು ಹೀಗಿವೆ : ಮೈತ್ರಿ, ಕರುಣಾ, ಮುದಿತ, ಅಥವಾ ಸಂತೋಷ ಮತ್ತು ಉಪೇಕ್ಷೆ.

* ಮೈತ್ರಿಯೆಂದರೆ ಕೇವಲ ಸ್ನೇಹವಲ್ಲ; ಆದರೆ ಸ್ನೇಹ ಸಾಧನೆಯ ಗುರಿಯಾದ ವಸ್ತುವಿನೊಂದಿಗೆ ಆತ್ಮೀಯತೆ. ಆತ್ಮೀಯತೆಯಿಂದಲೇ ತಾಯಿತನ್ನ ಮಗುವಿನ ಯಶಸ್ಸನ್ನು ಕುರಿತು ಅತ್ಯಂತ ಸಂತೋಷ ಗೊಳ್ಳುವುದು. ಪತಂಜಲಿ ಸುಖಕ್ಕಿಂತಲೂ ಮೈತ್ರಿಗೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದಾರೆ. ಯೋಗಿಯಾದವನು ಶುಭಕ್ಕಾಗಿ ಮೈತ್ರಿಯನ್ನು ಆತ್ಮೀಯತೆಯನ್ನು ಬಳಸಿಕೊಂಡು ಯಾರ ವಿಚಾರದಲ್ಲೂ ಕೇಡನ್ನು ಬಯಸದ ಶತ್ರುಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳುತ್ತಾನೆ.

* ಕರುಣೆಯೆಂದರೆ ಇತರ ದುಃಖವನ್ನು ಕಂಡು ನಿರಾಶೆ ಕಂಬನಿ ಕರೆಯುವುದಲ್ಲ, ಕೇವಲ ಅನುಕಂಪ ಅಲ್ಲ, ಅನುಕಂಪದೊಡನೆ ಜೊತೆಯಾಗಿ ಬರುವ ಶ್ರದ್ದಾಯುಕ್ತ ಆಚರಣೆ. ಯೋಗಿಯು ಭೌತಿಕ, ಆರ್ಥಿಕ, ಮಾನಸಿಕ ಮತ್ತು ನೈತಿಕ ಉಪಾಯಗಳನ್ನ ಬಳಸಿಕೊಂಡು ಇತರರ ದುಃಖ ಮತ್ತು ಕಷ್ಟಗಳನ್ನು ನಿವಾರಿಸುವ ಪ್ರಯತ್ನ ಪಡುತ್ತಾನೆ. ಬಲಹೀನರು ಶಕ್ತಿಯುತರಾಗುವವರೆಗೂ ತನ್ನ ಶಕ್ತಿಯನ್ನು ಅವರೊಡನೆ ಪಾಲು ಮಾಡಿಕೊಳ್ಳುತ್ತಾನೆ.

 ಅಧೈರ್ಯವುಳ್ಳವರೊಂದಿಗೆ ತನ್ನ ಧೈರ್ಯವನ್ನು ಪಾಲು ಮಾಡಿಕೊಂಡು ಅವರು ತನ್ನ ಉದಾರಣೆಯನನ್ನು ಸರಿಸುವವರೆಗೂ ಶ್ರಮಿಸುತ್ತಾನೆ. ಶಕ್ತಿವಂತರು ಮಾತ್ರ ಉಳಿಯಬೇಕೆನ್ನುವ ಏಕಮುಖವಾದ ತತ್ವವನ್ನು ಅವಲಂಬಿಸಿದೆ ಎಲ್ಲರೂ ಶಕ್ತಿವಂತರೇ ಆಗಬೇಕೆಂದು ಯೋಗಿಯು ದುಡಿಯುತ್ತಾನೆ. ಆತನು ಎಲ್ಲರೂ ತನಗೆ ಆಶ್ರಯವೆಂಬಂತಾಗುತ್ತಾನೆ.

ತನ್ನ ಶತ್ರುವಾದರೂ ಆತನ ಒಳ್ಳೆಯ ಕರ್ಮ ಮಾಡಿದಲ್ಲಿ ಅದರಲ್ಲಿ ಸಂತಸಗೊಳ್ಳುವುದು ಮುದಿತ. ಆ ಮುದಿತದ ಮೂಲಕ ಯೋಗಿಯು  ಅಸಹಿಷ್ಣುತೆ ಎಂಬ ಹೃದಯನಲಯದಿಂದ ಮುಕ್ತನಾಗಿ ತನ್ನಿಂದ ಸಾಧ್ಯವಾಗದಿದ್ದರೂ ಇತರರಿಂದ ಸಾಧ್ಯವಾಗಿದ್ದರೆ ಅವರ ವಿಚಾರದಲ್ಲಿ ದ್ವೇಷವಿಲ್ಲದೆ ಸಂತೋಷಗೊಳ್ಳುತ್ತಾನೆ.

*  ಉಪೇಕ್ಷೆಯೆಂದರೆ ದುರ್ಗುಣಗಳ ಕಡೆ ಒಲಿದವನನ್ನು ಕಂಡರೆ ಉಂಟಾಗುವ ತಿರಸ್ಕಾರ ಭಾವವೋಂದೇ ಅಲ್ಲ ಅಥವಾ ಅಂಥವರ ಮಟ್ಟಕ್ಕಿಂತ ನಾನು ಉತ್ತಮ ಎಂದು ಭಾವಿಸುವುದೊಂದೇ ಅಲ್ಲ. ಅಂತವೇ ದುಶಕ್ತಿಗಳಿಗೆ ಸಿಕ್ಕುವಾಗ ನಾವು ಯಾವ ರೀತಿ ಪ್ರತಿಕ್ರಿಯೆ ಮಾಡುತ್ತೇವೆ ಎಂಬುದನ್ನು ಆತ್ಮಶೋಧನದಿಂದ ತಿಳಿದುಕೊಳ್ಳುವುದು. ಅಲ್ಲದೆ ಕರುಣಾಜನಕ ಸ್ಥಿತಿಗೆ ಒಬ್ಬನು ಬೀಳುವುದಕ್ಕೆ ತಾನು ಎಷ್ಟರಮಟ್ಟಿಗೆ ಕಾರಣ ಆ ಸ್ಥಿತಿಯಿಂದ ಒಬ್ಬನನ್ನು ಹೇಗೆ ಉದ್ದರಿಸಬಹುದು ಎನ್ನುವುದು ಪರೀಕ್ಷಿಸುವುದು ಕೂಡ ಇದಕ್ಕೆ ಸಂಬಂಧಪಟ್ಟಂತೆ ಯೋಗಿಯು ಇತರರ ತಪ್ಪುಗಳನ್ನು ತನ್ನನ್ನು ತಾನು ವಿಚಾರಿಸಿಕೊಳ್ಳುವುದರ ಮೂಲಕವೇ ತಿಳಿದುಕೊಳ್ಳುತ್ತಾನೆ. ಈ ಆತ್ಮಪರೀಕ್ಷೆ ಇತರ ವಿಚಾರವಾಗಿ ಹೇಗೆ ಉದಾರವಾಗಿ ಇರಬೇಕೆಂದೆನ್ನುವುದನ್ನ ತಿಳಿಸುತ್ತದೆ.

 ಮೈತ್ರಿ, ಕರುಣಾ, ಮುದಿತಾ ಮತ್ತು ಉಪೇಕ್ಷ ಎನ್ನುವ ನಾಲ್ಕು ಉಪಾಯಗಳ ಅಂತರಾರ್ಥಗಳು ಅಶಾಂತಮನಸ್ಕನಿಗೆ ಅರಿವಾಗುವುದಿಲ್ಲ. ಪ್ರಪಂಚದ ಯಾವ ಜನನಾಂಗಕ್ಕೆ ಸೇರಿದ ಯಾವ ಸಾಧಾರಣ ಸ್ತ್ರೀ ಮತ್ತು ಪುರುಷನೇ ಆಗಲಿ ಮನಸ್ಸಿನ ಶಾಂತಿಯನ್ನು ಸಾಧಿಸಲು ಪತಂಜಲಿಯು ಹೇಳಿರುವ ಅಷ್ಟಾಂಗಯೋಗಗಳಲ್ಲಿ ಆಸನ ಮತ್ತು ಪ್ರಾಣಾಯಾಮ ಎಂಬ ಎರಡುಪ್ರಕಾರಗಳಲ್ಲಿ ಸಿದ್ಧಿಯನ್ನು ಪ್ರಯತ್ನ ಪೂರ್ವಕ ಸಾದಿಸುವುದೇ ಮಾರ್ಗ ಎಂದು ಈ ಗ್ರಂಥಕರ್ತನ  ಅನುಭವ.

ಮನಸ್ಸು ಮತ್ತು ಪ್ರಾಣ ಪರಸ್ಪರ ಸಂಬಂಧಪಟ್ಟಿದ್ದು. ಒಂದರ ಕ್ರಿಯೆ ಅಥವಾ ನಿಷ್ಕ್ರಿಯೆ ಮತ್ತೊಂದರ ಮೇಲೆ ಪರಿಣಾಮ ಮಾಡುತ್ತದೆ. ಆದ್ದರಿಂದ ಪತಂಜಲಿಯು ಪ್ರಾಣಾಯಾಮವನ್ನು ಮನಸ್ಸಿನ ಸಮತ್ವಕ್ಕೆ ಮತ್ತು ಆಂತರಿಕ ಶಾಂತಿಗೆ ಸೂಚಿಸಿದ್ದಾನೆ.

ಹಿಂದಿನ ಲೇಖನಕುಸುಬಿ (CARTHAMUS TINCTORIUS)
ಮುಂದಿನ ಲೇಖನಹಾಸ್ಯ