ಮನೆ ಕಾನೂನು ಕಲ್ಲು ಒಡೆಯಲು ಭೋವಿ ಸಮುದಾಯಕ್ಕೆ ಅನುಮತಿ ನೀಡುವ ವಿಚಾರ ಪರಿಗಣಿಸಿ ನಿರ್ಧರಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಕಲ್ಲು ಒಡೆಯಲು ಭೋವಿ ಸಮುದಾಯಕ್ಕೆ ಅನುಮತಿ ನೀಡುವ ವಿಚಾರ ಪರಿಗಣಿಸಿ ನಿರ್ಧರಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೀಸಗಾನಹಳ್ಳಿಯ ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಲ್ಲನ್ನು ಒಡೆಯಲು ಗ್ರಾಮದ ಭೋವಿ ಸಮುದಾಯದವರು ಅನುಮತಿ ನೀಡುವ ವಿಚಾರವನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿಗೆ ಈಚೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಲು ಕುಟುಕರ ಭೋವಿ ಶಂಕರ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಇಲಾಖೆಯ ಕಾರ್ಯದರ್ಶಿಯು ಆ ಮನವಿ ಪತ್ರವನ್ನು ತ್ವರಿತವಾಗಿ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಂಡು ಅರ್ಜಿದಾರರಿಗೆ ತಿಳಿಸಬೇಕು ಎಂದು ನಿರ್ದೇಶಿಸಿತು. ಜೊತೆಗೆ ಅರ್ಜಿದಾರ ಸಂಘವು ತಮ್ಮ ಕುಂದುಕೊರತೆ ಬಗ್ಗೆ 10 ದಿನಗಳಲ್ಲಿ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಬೇಕು ಎಂದು ಸಹ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶಂಕರಪ್ಪ ಅವರು “ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮುದಾಯದವರು ಮೀಸಗಾನಹಳ್ಳಿಯ ಸರ್ವೇ ನಂ 75ರಲ್ಲಿನ 28ಎಕರೆ ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಲ್ಲನ್ನು ಒಡೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಪರವಾನಗಿ ಪಡೆಯದೇ ಸರ್ಕಾರಿ ಜಮೀನಿನಲ್ಲಿ ಕ್ವಾರಿ ಕೆಲಸ ಮಾಡುವಂತಿಲ್ಲ ಎಂಬುದಾಗಿ ಸರ್ಕಾರಿ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ ಎಂದರು.

ಅಲ್ಲದೆ, ಕಲ್ಲು ಒಡೆಯುವುದು ಭೋವಿ ಸಮುದಾಯದವರ ಸಾಂಪ್ರದಾಯಿಕ ವೃತ್ತಿಯಾಗಿದೆ. ಅದನ್ನು ಅನಾದಿ ಕಾಲದಿಂದಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಸರ್ಕಾರವು ಭೋವಿ ಸಮುದಾಯದವರನ್ನು ರಕ್ಷಿಸಬೇಕಿದೆ. ಇಲ್ಲವಾದರೆ ಅವರ ಜೀವನಾಧಾರಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ, ಗ್ರಾಮದ ಸರ್ವೇ ನಂ 75ರಲ್ಲಿನ ಸರ್ಕಾರಿ ಜಮೀನನ ಕಲ್ಲು ಕತ್ತರಿಸಲು ಅನುಮತಿ ನೀಡುವಂತೆ ಕೋರಿ ಅರ್ಜಿದಾರರ ಸಂಘ 2022ರ ಮೇ 9ರಂದು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು. ಸರ್ಕಾರಿ ವಕೀಲರು “ಕ್ವಾರಿ ಪರವಾನಗಿ ಪಡೆಯದಿದ್ದರೆ ಸರ್ಕಾರಿ ಜಮೀನಿನಲ್ಲಿ ಕಲ್ಲು ಕತ್ತರಿಸಲು ಯಾರೊಬ್ಬರಿಗೂ ಅನುಮತಿಸುವುದಿಲ್ಲ” ಎಂದು ವಾದಿಸಿದ್ದರು.

ಹಿಂದಿನ ಲೇಖನಜೂನ್‌ 23 ರ ಹವಾಮಾನ ವರದಿಯ ವಿವರ
ಮುಂದಿನ ಲೇಖನಇಂದಿನ ಚಿನ್ನ-ಬೆಳ್ಳಿ ದರದ ವಿವರ